– ಮುರಘಾ ಶರಣರಿಂದ ಕೊರೊನಾ ಕುರಿತು ಸಲಹೆ
ನೆಲಮಂಗಲ: ರಾಜ್ಯ ಸರ್ಕಾರ ನಿನ್ನೆ ಕೊರೊನಾ ಎಮರ್ಜೆನ್ಸಿ ಘೋಷಿಸಿದ ಹಿನ್ನೆಲೆ ಹಲವು ಜಾತ್ರೆ ಕಾರ್ಯಕ್ರಮಗಳನ್ನು ಮೊಟಕುಗೊಳಿಸಲಾಗುತ್ತಿದ್ದು, ಬೆಂಗಳೂರು ಹೊರವಲಯದ ನೆಲಮಂಗಲ ಸಮೀಪದ ವನಕಲ್ಲು ಶ್ರೀ ಮಲ್ಲೇಶ್ವರ ಜಾತ್ರೆಯನ್ನು ಅರ್ಧಕ್ಕೆ ಮೊಟಕುಗೊಳಿಸಲಾಗಿದೆ.
ಸರ್ಕಾರದ ಆದೇಶವನ್ನು ಪಾಲಿಸಲು ಮುಂದಾದ ವನಕಲ್ಲು ಮಠದ ಶ್ರೀ ಬಸವ ರಮಾನಂದ ಸ್ವಾಮೀಜಿ ಈ ನಿರ್ಧಾರ ಕೈಗೊಂಡಿದ್ದಾರೆ. ಈ ಕುರಿತು ಮಾತನಾಡಿದ ಶ್ರೀಗಳು, ಮಾರ್ಚ್ 7 ರಿಂದ 15ರ ವರೆಗೆ ನಡೆಯುತ್ತಿದ್ದ ಜಾತ್ರೆಯನ್ನು ಸ್ಥಗಿತಗೊಳಿಸಲಾಗಿದ್ದು, ಜನರಿಗೆ, ಭಕ್ತರಿಗೆ ತೊಂದರೆಯಾಗದಂತೆ ಜಾತ್ರೆಯನ್ನು ಮೊಟಕುಗೊಳಿಸಿದ್ದೇವೆ. ಸರ್ಕಾರದ ಆದೇಶವನ್ನು ನಾವೆಲ್ಲರೂ ಪಾಲಿಸುತ್ತೇವೆ. ಕಾನೂನು ಎಲ್ಲರಿಗೂ ಒಂದೆ ಎಂದು ಸ್ವಾಮೀಜಿ ತಿಳಿಸಿದರು.
Advertisement
Advertisement
ಪ್ರಶಸ್ತಿ ಪ್ರದಾನ ಕಾರ್ಯಕ್ರಮವನ್ನು ಮುಂದಿನ ತಿಂಗಳಿಗೆ ಮುಂದೂಡಲಾಗಿದೆ. ಚಿತ್ರದುರ್ಗದ ಮುರುಘಾ ಮಠದ ಡಾ. ಶ್ರೀ ಶಿವಮೂರ್ತಿ ಮುರುಘಾ ಶರಣರ ನೇತೃತ್ವದಲ್ಲಿ ಸಮಾರೋಪ ಸಮಾರಂಭ ಮಾಡಿ ಜಾತ್ರೆಯನ್ನು ಮುಕ್ತಾಯಗೊಳಿಸಲಾಗಿದೆ. ಸ್ವಾಮೀಜಿ ಆದೇಶದ ಹಿನ್ನೆಲೆ ಸಮಾರೋಪ ಸಮಾರಂಭಕ್ಕೂ ಹೆಚ್ಚು ಭಕ್ತರು ಆಗಮಿಸಿರಲಿಲ್ಲ. ಹೀಗಾಗಿ ಕಾರ್ಯಕ್ರಮದಲ್ಲಿ ಖಾಲಿ ಖುರ್ಚಿಗಳು ಕಂಡಿವೆ. ಅಲ್ಲದೆ ಕೊರೊನಾ ಭೀತಿಯಿಂದಾಗಿ ಮಠದ ಸುಮಾರು 200 ಮಕ್ಕಳು ಸಹ ಇಂದಿನಿಂದ ಮನೆಗೆ ತೆರಳುತ್ತಿದ್ದಾರೆ ಎಂದು ಸ್ವಾಮೀಜಿ ತಿಳಿಸಿದ್ದಾರೆ.
Advertisement
Advertisement
ಈ ವೇಳೆ ಶ್ರೀ ಶಿವಮೂರ್ತಿ ಮುರುಘಾ ಶರಣರು ಸಾರ್ವಜನಿಕರಿಗೆ ಸಲಹೆ ನೀಡಿದ್ದು, ಕೊರೊನಾ ಅತ್ಯಂತ ಭಯಾನಕ ರೋಗ. ಇದು ಏಡ್ಸ್ ಗಿಂತಲೂ ತುಂಬಾ ಕೆಟ್ಟ ರೋಗ. ಹೀಗಾಗಿ ಸಾರ್ವಜನಿಕರು ಮುಂಜಾಗೃತಾ ಕ್ರಮಗಳನ್ನು ವಹಿಸಬೇಕು. ಬಿಸಿ ನೀರು ಕುಡಿಯುವುದು, ಆಗಾಗ ಕೈ ತೊಳೆಯುವುದನ್ನು ರೂಢಿಸಿಕೊಳ್ಳಿ, ಹಸ್ತಲಾಘವ ಮಾಡುವ ಬದಲು ಕೈ ಮುಗಿಯುವುದು ಉತ್ತಮ. ಭಾರತೀಯರಿಗೆ ರೋಗ ನಿರೋಧಕ ಶಕ್ತಿ ಹೆಚ್ಚು ಇದೆ. ಹೊರದೇಶದಿಂದ ಬಂದವರು ಸಾವಿಗೀಡಾಗಿರಬಹುದು. ಇದಕ್ಕೆ ಯಾರೂ ಹೆದರುವ ಸಗತ್ಯವಿಲ್ಲ. ಧೈರ್ಯವಾಗಿ ಮುನ್ನೆಚ್ಚರಿಕೆ ಕ್ರಮ ಅನುಸರಿಸಿದರೆ ಕೊರೊನಾ ಏನೂ ಮಾಡೋದಿಲ್ಲ ಎಂದರು.