ಉಡುಪಿ: ದೇಶಾದ್ಯಂತ ಕೊರೊನಾ ಅಟ್ಟಹಾಸ ಮೆರೆಯುತ್ತಿರುವ ಹಿನ್ನೆಲೆ ಇಷ್ಟು ದಿನ ಆಳ ಸಮುದ್ರ ಮೀನುಗಾರಿಕೆಗೆ ಅವಕಾಶ ಇರಲಿಲ್ಲ. ಇದೀಗ ವಿನಾಯಿತಿ ಕೊಟ್ಟರೂ ಮೀನುಗಾರರು ಸಮುದ್ರಕ್ಕೆ ಇಳಿಯುತ್ತಿಲ್ಲ. ಸಾವಿಗೆ ಹೆದರದ ಕಡಲ ಮಕ್ಕಳು ಕಾಣದ ಕೊರೊನಾಗೆ ಭಯ ಬಿದ್ದಿದ್ದಾರೆ.
ನೂರು ಆಳಸಮುದ್ರ ಬೋಟುಗಳಿಗೆ ಉಡುಪಿ ಜಿಲ್ಲಾಡಳಿತ ಕಸುಬು ನಡೆಸಲು ಅವಕಾಶ ಕೊಟ್ಟಿದೆ. ಆದೇಶ ಕೊಟ್ಟರೂ ಕೊರೊನಾ ವೈರಸ್ ಭೀತಿಗೆ ಮೀನುಗಾರ ಕಾರ್ಮಿಕರು ಭಯಗೊಂಡಿದ್ದಾರೆ. ಮಲ್ಪೆಯಲ್ಲೇ 1,500 ಆಳಸಮುದ್ರ ಬೋಟುಗಳು ಲಂಗರು ಹಾಕಿದೆ. ಸಮುದ್ರ ಮುಖೇನ ಮಹಾರಾಷ್ಟ್ರ, ಗುಜರಾತ್, ಗೋವಾ ಹೋಗಲು ಕಾರ್ಮಿಕರು ನಿರಾಕರಿಸುತ್ತಿದ್ದಾರೆ.
Advertisement
Advertisement
ಉಡುಪಿಯಲ್ಲಿ ಆಳಸಮುದ್ರ ಮೀನುಗಾರಿಕೆಗೆ ತೆರಳುವ ಬೋಟುಗಳು ಲಂಗರು ಹಾಕಿ ಬರೋಬ್ಬರಿ 50 ದಿನ ಕಳೆದಿದೆ. ಇದರಿಂದ ಕೇರಳ, ತಮಿಳುನಾಡು, ಆಂಧ್ರಪ್ರದೇಶ, ಮಧ್ಯಪ್ರದೇಶ, ಒರಿಸ್ಸಾ, ಪಶ್ಚಿಮ ಬಂಗಾಳದ ಕಾರ್ಮಿಕರು ಕೆಲಸ ಇಲ್ಲದೆ ಪರದಾಡುತ್ತಿದ್ದಾರೆ. ನಾಡ ದೋಣಿ ಸಾಂಪ್ರದಾಯಿಕ ಮೀನುಗಾರಿಕೆ ಆರಂಭವಾದ ಸಂದರ್ಭದಲ್ಲಿ ಆಳಸಮುದ್ರ ಬೋಟಿಗೂ ಅವಕಾಶ ಕೊಡಿ ಎಂದು ಮೀನುಗಾರರು ಒತ್ತಾಯ ಮಾಡಿದ್ದರು. ಅದರಂತೆ ಜಿಲ್ಲಾಡಳಿತ ಆರಂಭದಲ್ಲಿ 40 ಬೋಟುಗಳಿಗೆ ಅವಕಾಶ ಕೊಟ್ಟಿತ್ತು. ಆ ನಂತರ ಮೀನುಗಾರರ ಒತ್ತಡ ಹೆಚ್ಚಾದ ಮೇಲೆ 100 ಬೋಟುಗಳಿಗೆ ಉಡುಪಿ ಜಿಲ್ಲಾಡಳಿತ ಅನುಮತಿ ಕೊಟ್ಟಿದೆ.
Advertisement
Advertisement
ಲಿಖಿತ ಆದೇಶ ಕೊಟ್ಟು ಮೂರು ದಿನ ಕಳೆದರೂ ಮೀನುಗಾರರು ಮಾತ್ರ ಕಸುಬು ಆರಂಭಿಸುವ ಯಾವುದೇ ಲಕ್ಷಣ ಕಾಣುತ್ತಿಲ್ಲ. ಕೊರೊನಾ ವೈರಸ್‍ಗೆ ಕಾರ್ಮಿಕರು ಬೆಚ್ಚಿ ಬಿದ್ದಿದ್ದು, ಮೀನುಗಾರಿಕೆಗೆ ತೆರಳಿದ ಸಂದರ್ಭ ಬೇರೆ ಬೇರೆ ರಾಜ್ಯದ ಮೀನುಗಾರರು ಸಂಪರ್ಕ ಮಾಡಬೇಕು, ಇದರಿಂದ ವೈರಸ್ ಹರಡುವ ಸಾಧ್ಯತೆ ಇದೆ ಎಂದು ಮೀನುಗಾರರಲ್ಲಿ ಆತಂಕ ಆವರಿಸಿದೆ. ಹೀಗಾಗಿ ಬೋಟಿನ ಮಾಲೀಕರು ಮೀನುಗಾರಿಕೆಗೆ ಉತ್ಸುಕತೆ ತೋರಿದ್ದರೂ ಕಾರ್ಮಿಕರು ಬಂದರಿಗೆ ಬರುತ್ತಿಲ್ಲ.
ಪಬ್ಲಿಕ್ ಟಿವಿ ಜೊತೆ ಮಾತನಾಡಿದ ಮೀನುಗಾರ ಕಾರ್ಮಿಕ ಆನಂದ, ನಾನು ಆಂಧ್ರಪ್ರದೇಶದವನು. ಆದರೆ ನನ್ನ ಕುಟುಂಬ ಅಲ್ಲೇ ಇದೆ. ದಯಮಾಡಿ ನಮಗೆ ಬಸ್ಸಿನ ವ್ಯವಸ್ಥೆಯನ್ನು ಮಾಡಿಕೊಡಿ. ಕೆಲಸವಿಲ್ಲದೆ, ಖರ್ಚಿಗೆ ಕಾಸಿಲ್ಲದೆ ನಾವು ಇಲ್ಲಿ ಬದುಕಲು ಸಾಧ್ಯವಿಲ್ಲ ಎಂದು ಅಳಲನ್ನು ತೋಡಿಕೊಂಡಿದ್ದಾರೆ.
ಆಳ ಸಮುದ್ರದ ಮೀನುಗಾರಿಕೆ ಆರಂಭಿಸಲು ಮೀನುಗಾರ ಸಂಘ ಸಿದ್ಧ ಇದೆ. ಜಿಲ್ಲಾಡಳಿತ ಹೊರಡಿಸಿರುವ ಆದೇಶ ಪ್ರತಿಯೂ ಅವರಿಗೆ ಸಿಕ್ಕಿದೆ. ಬೋಟ್ ಗೋವಾ, ಮಹಾರಾಷ್ಟ್ರ ಅಥವಾ ಗುಜರಾತ್ ಗಡಿಗೆ ಹೋದ ಸಂದರ್ಭದಲ್ಲಿ ಮತ್ತೆ ನಾಲ್ಕನೇ ಹಂತದ ಲಾಕ್‍ಡೌನ್ ವಿಸ್ತರಣೆ ಆದರೆ ನಮ್ಮ ಪರಿಸ್ಥಿತಿ ಏನು? ಆ ರಾಜ್ಯದವರು ನಮ್ಮನ್ನು ಒಳಗೆ ಬಿಟ್ಟುಕೊಳ್ಳುತ್ತಾರಾ ಎಂಬ ಪ್ರಶ್ನೆ ಕಾಡುತ್ತಿದೆ. ಹೀಗಾಗಿ ಇನ್ನೆರಡು ದಿನ ಕಾದು ನೋಡುವ ತಂತ್ರಕ್ಕೆ ಮಲ್ಪೆ ಮೀನುಗಾರಿಕಾ ಸಂಘ ಮುಂದಾಗಿದೆ. ಸಾವಿನ ಜೊತೆ ಸೆಣಸಾಡುತ್ತಿದ್ದ ಮೀನುಗಾರರು ಇದೀಗ ಕಣ್ಣಿಗೆ ಕಾಣದ ಕೊರೊನಾ ವೈರಸ್‍ಗೆ ಭೀತಿ ಪಟ್ಟು ಮನೆಯಲ್ಲೇ ಕುಳಿತುಕೊಳ್ಳುವ ಪರಿಸ್ಥಿತಿ ನಿರ್ಮಾಣವಾಗಿದೆ.