ನವದೆಹಲಿ: ಕೊರೊನಾಗೆ ಪ್ರಪಂಚವೇ ತತ್ತರಿಸಿದ್ದು, ದೇಶದಲ್ಲಿ ಸಹ ಫುಲ್ ಲಾಕ್ಡೌನ್ ಮಾಡಲಾಗಿದೆ. ಹೀಗಾಗಿ ಶೂಟಿಂಗ್ ಸಹ ಸ್ಥಗಿತಗೊಂಡಿದ್ದು, ಬಾಲಿವುಡ್, ಸ್ಯಾಂಡಲ್ವುಡ್ ಸೇರಿದಂತೆ ಎಲ್ಲ ನಟ, ನಟಿಯರು ಮನೆಯಲ್ಲೇ ಸ್ವಯಂ ದಿಗ್ಬಂಧನ ವಿಧಿಸಿಕೊಂಡಿದ್ದಾರೆ. ಆದರೆ ಸಲ್ಮಾನ್ ಖಾನ್ ಮಾತ್ರ ಮನೆಯಿಂದ ಹೊರಗಿದ್ದು, ನನಗೆ ಭಯವಾಗುತ್ತಿದೆ ಎಂದು ವಿಡಿಯೋ ಮಾಡಿದ್ದಾರೆ.
ಹೋಮ್ ಕ್ವಾರೆಂಟೈನ್ ಹಿನ್ನೆಲೆ ಎಲ್ಲ ನಟ, ನಟಿಯರು ಸ್ವಯಂ ದಿಗ್ಬಂಧನ ವಿಧಿಸಿಕೊಂಡಿದ್ದು, ಮನೆಯಲ್ಲೇ ಉಳಿದುಕೊಂಡಿದ್ದಾರೆ. ಪುಸ್ತಕ ಓದುವುದು, ಯೋಗ, ಅಡುಗೆ, ಕುಟುಂಬದೊಂದಿಗೆ ಕಾಲ ಕಳೆಯುವುದು, ತಮ್ಮ ಹವ್ಯಾಸಗಳಲ್ಲಿ ಮತ್ತೆ ತೊಡಗಿಕೊಳ್ಳುವ ಮೂಲಕ ಸಮಯ ಕಳೆಯುತ್ತಿದ್ದಾರೆ. ಆದರೆ ಸಲ್ಮಾನ್ ಖಾನ್ ಅವರು ಮನೆಯಲ್ಲಿಲ್ಲ. ಬದಲಿಗೆ ಅವರು ಮನೆಯಿಂದ ದೂರದ ಪನ್ವೆಲ್ನಲ್ಲಿರುವ ಫಾರ್ಮ್ ಹೌಸ್ನಲ್ಲಿದ್ದಾರೆ. ಹೀಗಾಗಿ ಭಯವಾಗುತ್ತಿದೆ ಎಂದು ವಿಡಿಯೋ ಮಾಡಿದ್ದಾರೆ.
ಸಲ್ಮಾನ್ ಖಾನ್ ಹೊರಗಿರುವಾಗಲೇ ಲಾಕ್ಡೌನ್ ಘೋಷಿಸಿದರು. ಹೀಗಾಗಿ ಅವರು ಮತ್ತೆ ಅವರ ಮನೆಗೆ ಮರಳಲು ಸಾಧ್ಯವಾಗಲಿಲ್ಲ. ಸದ್ಯ ಇಲ್ಲಿಯೇ ಇರುವುದು ಒಳ್ಳೆಯದು ಎಂದುಕೊಂಡು ಹೊರಗಡೆಯೇ ಕಾಲ ಕಳೆಯುತ್ತಿದ್ದಾರೆ. ಸಹೋದರ ಸುಹೇಲ್ ಖಾನ್ ಮಗ ನಿರ್ವಾಣ್ ಜೊತೆ ವಾಸವಿದ್ದು, ಇವರೊಂದಿಗೆ ಇನ್ನೂ ಕೆಲ ಸದಸ್ಯರಿದ್ದಾರೆ.
ಇದೇ ಗ್ಯಾಪ್ನಲ್ಲಿ ವಿಡಿಯೋ ಮಾಡಿ ಸಾಮಾಜಿಕ ಜಾಲತಾಣಗಳಲ್ಲಿ ಹಾಕಿಕೊಂಡಿದ್ದು, ಈ ವೇಳೆ ಸಲ್ಮಾನ್ ಖಾನ್ ಅವರು ತಮಗೆ ಭಯವಾಗುತ್ತಿದೆ ಎಂದು ಹೇಳಿಕೊಂಡಿದ್ದಾರೆ. ನಾನು ನಿರ್ವಾಣ್ ಜೊತೆಗಿದ್ದು, ನಮ್ಮಿಬ್ಬರಿಗೂ ತುಂಬಾ ಭಯವಾಗುತ್ತಿದೆ. ಆದರೆ ಭಯವಾಗುತ್ತಿರುವುದು ನಮಗೆ ಒಳ್ಳೆಯದೇ ಆಗಿದೆ. ಭಯವಾಗುತ್ತಿರುವುದರಿಂದಲೇ ನಾವು ಬದುಕಿದ್ದೇವೆ ಎಂದು ಹೇಳಿಕೊಂಡಿದ್ದಾರೆ. ಅಲ್ಲದೆ ಕೊನೆಗೆ ಮಾರಲ್ ಆಫ್ ದಿ ಸ್ಟೋರಿ ಇಸ್, ‘ಕೆ ಹಮ್ ಡರ್ ಗಯಾ’ ಎಂದು ಹೇಳಿಕೊಂಡಿದ್ದಾರೆ. ನೀವು ಮನೆಯಲ್ಲಿರಿ, ಸುರಕ್ಷಿತವಾಗಿರಿ ಎಂದು ಇದೇ ವೇಳೆ ಕೇಳಿಕೊಂಡಿದ್ದಾರೆ.
Be Home n Be Safe @NirvanKhan15 #IndiaFightsCorona pic.twitter.com/3erbteJtz6
— Salman Khan (@BeingSalmanKhan) April 5, 2020
ಆದರೆ ಮನೆಯಲ್ಲಿ ತಂದೆ ಸಲೀಂ ಖಾನ್ ಒಬ್ಬರೇ ಇದ್ದು, ಅವರನ್ನು ನೋಡಿ 3 ವಾರಗಳಾಯಿತು ಎಂದು ಸಲ್ಮಾನ್ ಅಳಲು ತೋಡಿಕೊಂಡಿದ್ದಾರೆ. ಆದರೂ ಸದ್ಯದ ಪರಿಸ್ಥಿತಿಯಲ್ಲಿ ಇದ್ದಲ್ಲೇ ಇರುವುದು ಒಳ್ಳೆಯದು ಎಂದು ಸಲ್ಮಾನ್ ಅಭಿಪ್ರಾಯ ಪಟ್ಟಿದ್ದಾರೆ. ಇತ್ತೀಚೆಗೆ ಸಲ್ಲು ತಮ್ಮ ಸಂಬಂಧಿಕರ ಅಂತ್ಯಸಂಸ್ಕಾರದಲ್ಲಿಯೂ ಭಾಗವಹಿಸಿರಲಿಲ್ಲ. ಈ ಮೂಲಕ ಸ್ಟೇ ಹೋಮ್ ಪಾಲಿಸಿಯನ್ನು ಕಟ್ಟು ನಿಟ್ಟಾಗಿ ಪಾಲಿಸುತ್ತಿದ್ದಾರೆ. ಇತ್ತೀಚೆಗಷ್ಟೇ ಸಲ್ಮಾನ್ ಖಾನ್ ಸಿನಿಮಾ ದಿನಗೂಲಿ ಕಾರ್ಮಿಕರಿಗೆ ಸಹಾಯ ಹಸ್ತ ಚಾಚಿದ್ದರು. ಈ ಮೂಲಕ ಇತರರಿಗೆ ಮಾದರಿಯಾಗಿದ್ದರು. ಇದೀಗ ಸ್ವಯಂ ದಿಗ್ಬಂಧನವನ್ನು ಕಟ್ಟುನಿಟ್ಟಾಗಿ ಪಾಲಿಸುವ ಮೂಲಕ ಸಹ ಮೆಚ್ಚುಗೆಗೆ ಪಾತ್ರರಾಗಿದ್ದಾರೆ.