ಬೆಂಗಳೂರು: ಲಾಕ್ ಡೌನ್ ಹಿನ್ನೆಲೆ ಆಹಾರ ಧಾನ್ಯ, ಊಟ ಸಿಗದೆ 30ಕ್ಕೂ ಹೆಚ್ಚು ಜನ ನರಳಾಡುತ್ತಿರುವ ಘಟನೆ ಬೆಂಗಳೂರು ಹೊರ ವಲಯದ ನೆಲಮಂಗಲದ ಹೊನ್ನಗಂಗಯ್ಯನ ಪಾಳ್ಯದಲ್ಲಿ ನಡೆದಿದೆ.
ಸುಮಾರು ಮೂರು ದಿನಗಳಿಂದ ಊಟ ಸಿಗದೆ ಹಕ್ಕಿಪಿಕ್ಕಿಯ ಜನ ನರಳಾಡುತ್ತಿದ್ದು, ತಾಲೂಕು ಆಡಳಿತ ಇತ್ತ ಗಮನಹರಿಸಿಲ್ಲ. ಕೊರೊನಾ ಭೀತಿಯಿಂದ ದೇಶವನ್ನೇ ಲಾಕ್‍ಡೌನ್ ಮಾಡಿರುವ ಹಿನ್ನೆಲೆ ದವಸ ಧಾನ್ಯ ಸಿಗದೆ ಜನ ಪರದಾಡುತ್ತಿದ್ದಾರೆ. ಮೂರು ದಿನಗಳಿಂದ ಊಟವಿಲ್ಲದೆ ಹಕ್ಕಿಪಿಕ್ಕಿ ಜನಾಂಗದವರು ಪರಿತಪಿಸುತ್ತಿದ್ದರೂ ಈ ಕುಟುಂಬಗಳಿಗೆ ತಾಲೂಕು ಆಡಳಿತ ನೆರವು ನೀಡಲು ಮುಂದಾಗಿಲ್ಲ.
Advertisement
Advertisement
ಲಾಕ್‍ಡೌನ್ ಹಿನ್ನೆಲೆ ರಾಷ್ಟ್ರೀಯ ಹೆದ್ದಾರಿ ಸಂಪೂರ್ಣ ಸ್ತಬ್ಧವಾಗಿದ್ದು, ವಾಹನ ಸಂಚಾರ ತೀರಾ ವಿರಳವಾಗಿದೆ. ತುರ್ತು ಪರಿಸ್ಥಿತಿಯ ವಾಹನಗಳು ಮಾತ್ರ ಸಂಚರಿಸುತ್ತಿದ್ದು, ನೆಲಮಂಗಲದ ಜಾಸ್ ಟೋಲ್ ಮೂಲಕ ಓಡಾಡುತ್ತಿವೆ. ತುಮಕೂರು-ಬೆಂಗಳೂರು ರಾಷ್ಟ್ರೀಯ ಹೆದ್ದಾರಿ 4ರಲ್ಲಿ ರಾತ್ರಿ ಪೀಣ್ಯ ಪೊಲೀಸರು ವಾಹನಗಳನ್ನು ತಡೆ ಹಿಡಿದ ಹಿನ್ನೆಲೆ ರಾಷ್ಟ್ರೀಯ ಹೆದ್ದಾರಿಯಲ್ಲಿ ವಾಹನಗಳ ಸಂಚಾರ ವಿರಳವಾಗಿದೆ. ಅತ್ತ ನೆಲಮಂಗಲ ಪೊಲೀಸರು ಸಹ ವಾಹನಗಳ ತಪಾಸಣೆ ಕೈಗೊಂಡಿದ್ದಾರೆ.