– ಕೈಗೆ ಬಂದ ತುತ್ತು ಬಾಯಿಗಿಲ್ಲ
ಚಿತ್ರದುರ್ಗ: ಕೊರೊನಾ ತುರ್ತು ಪರಿಸ್ಥಿತಿ ಹಿನ್ನೆಲೆ ಕಟಾವಿಗೆ ಬಂದ ಕರ್ಬೂಜ ಹಣ್ಣನ್ನು ಮಾರುಕಟ್ಟೆಗೆ ಕೊಂಡೊಯ್ಯಲಾಗದೆ ಸಂಪೂರ್ಣ ಹಾನಿಯಾಗಿರುವ ಘಟನೆ ಚಿತ್ರದುರ್ಗ ಜಿಲ್ಲೆಯಲ್ಲಿ ನಡೆದಿದೆ.
ಜಿಲ್ಲೆಯ ಚಳ್ಳಕೆರೆ ತಾಲೂಕಿನ ಹುಲಿಕುಂಟೆ ಗ್ರಾಮದ ರೈತ ಜಯ್ಯಣ್ಣ ಅವರು 3 ಎಕರೆ ಜಮೀನಿನಲ್ಲಿ ಸುಮಾರು 40 ಟನ್ ಕರ್ಬೂಜ ಬೆಳೆದಿದ್ದರು. ಅಲ್ಲದೆ ಹಾಲಗೊಂಡನಹಳ್ಳಿಯಲ್ಲಿ ತಿಪ್ಪೇಸ್ವಾಮಿಯವರು 4 ಎಕರೆ ಜಮೀನನಲ್ಲಿ ಸುಮಾರು 50 ಟನ್ ಕರ್ಬೂಜ ಬೆಳೆದಿದ್ದು, ಇದೀಗ ಕಟಾವಿಗೆ ಬಂದಿದೆ ಆದರೆ ಸೂಕ್ತ ಮಾರುಕಟ್ಟೆ ವ್ಯವಸ್ಥೆ ಸಿಗದ ಹಿನ್ನೆಲೆ ಫಸಲು ಕೊಳೆಯುವಂತಾಗಿದೆ.
ಅತಿ ಕಡಿಮೆ ಅವಧಿ ಅಂದರೆ ಕೇವಲ 60 ದಿನಗಳಲ್ಲಿ ಬೆಳೆ ಕೈಗೆ ಬರುವ ತಳಿಯನ್ನು ಬಿತ್ತನೆ ಮಾಡಿದ್ದರು. ಅಲ್ಲದೆ ಯುಗಾದಿ, ರಾಮನವಮಿ ಹಾಗೂ ಜಾತ್ರೆಗಳ ಸೀಸನ್ ಇರೋದ್ರಿಂದ ಉತ್ತಮ ಬೆಲೆ ಸಿಗುತ್ತದೆ ಎಂಬ ನಿಟ್ಟಿನಿನಲ್ಲಿ ಅಪಾರ ಲಾಭದ ನಿರೀಕ್ಷೆಯಲ್ಲಿ ಅನ್ನದಾತರು ಇದ್ದರು. ಕೊರೊನಾ ವೈರಸ್ ಅವರ ಆಸೆಗೆ ತಣ್ಣೀರೆರಚಿದೆ.
ಇಡೀ ವಿಶ್ವದಲ್ಲೇ ತಾಂಡವವಾಡ್ತಿರುವ ಕೊರೊನಾ ವೈರಸ್, ದೇಶದಲ್ಲಿಯೂ ತನ್ನ ಕಬಂದಬಾಹು ಚಾಚುತ್ತಿದ್ದು, ಹೀಗಾಗಿ ಇಡೀ ದೇಶವನ್ನೇ ಲಾಕ್‍ಡೌನ್ ಮಾಡಲಾಗಿದೆ. ಪರಿಣಾಮ ರೈತರ ಕೈಗೆ ಬಂದ ತುತ್ತು ಬಾಯಿಗೆ ಬಾರದ ಸ್ಥಿತಿಯಾಗಿದೆ. ಅಪಾರ ಲಾಭ ಗಳಿಸುವ ನಿರೀಕ್ಷೆಯಲ್ಲಿದ್ದ ರೈತರು ಈಗ ಕರ್ಬೂಜವನ್ನು ಕಟಾವು ಮಾಡಲಾಗದೇ ಹಣ್ಣುಗಳು ಜಮೀನಲ್ಲೇ ಕೊಳೆತು ಹೋಗ್ತಿವೆ. ಹೀಗಾಗಿ ಸಾಲದ ಸುಳಿಗೆ ಸಿಲುಕಿದ್ದಾರೆ. ಸರ್ಕಾರವೇ ಶೀಘ್ರದಲ್ಲಿ ಹಣ್ಣುಗಳನ್ನು ಖರೀದಿಸಬೇಕು. ಇಲ್ಲವೆ ಬೆಳೆನಷ್ಟ ಪರಿಹಾರ ನೀಡಬೇಕೆಂದು ಆಗ್ರಹಿಸಿದ್ದಾರೆ.