– ಜಾಗೃತಿ ಮೂಡಿಸಿದರೂ ಕೇಳದ್ದಕ್ಕೆ ಕ್ರಮ
– ತುರ್ತು ಸಂದರ್ಭದಲ್ಲಿ ಮಾತ್ರ ಹೊರ ಬರಲು ಸೂಚನೆ
ಕೋಲ್ಕತ್ತಾ: ಕೊರೊನಾ ಮಹಾಮಾರಿ ಹಿನ್ನೆಲೆ ದೇಶಾದ್ಯಂತ ಮೇ 3ರ ವರೆಗೆ ಲಾಕ್‍ಡೌನ್ ಘೋಷಿಸಲಾಗಿದ್ದು, ಕಡ್ಡಾಯವಾಗಿ ಮಾಸ್ಕ್ ಧರಿಸುವಂತೆ ಕೇಂದ್ರ ಸರ್ಕಾರ ತಿಳಿಸಿದೆ. ಆದರೆ ಬಹುತೇಕರು ಇದನ್ನು ಪಾಲಿಸುತ್ತಿಲ್ಲ. ಇದನ್ನರಿತ ಪೊಲೀಸರು ಕಠಿಣ ಕ್ರಮ ಕೈಗೊಳ್ಳುತ್ತಿದ್ದು, ಕೋಲ್ಕತ್ತಾದಲ್ಲಿ ಮಾಸ್ಕ್ ಧರಿಸದವರನ್ನು ಬಂಧಿಸಿದ್ದಾರೆ.
ಮಾಸ್ಕ್ ಧರಿಸದವರ ವಿರುದ್ಧ ಕೋಲ್ಕತ್ತಾ ಪೊಲೀಸರು ಕಟ್ಟುನಿಟ್ಟಿನ ಕ್ರಮ ಕೈಗೊಳ್ಳುತ್ತಿದ್ದು, ಮಂಗಳವಾರದಿಂದ ಬುಧವಾರ ಬೆಳಗ್ಗೆ ವರೆಗೆ ಮಾಸ್ಕ್ ಧರಿಸದ 180 ಜನರ ವಿರುದ್ಧ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಐಪಿಸಿ ಸೆಕ್ಷನ್ 188(ಸಾರ್ವಜನಿಕ ಸೇವಕರ ಆದೇಶ ಉಲ್ಲಂಘನೆ) ಹಾಗೂ ಸೆಕ್ಷನ್ 66(ಸಾರ್ವಜನಿಕ ಬೀದಿಗಳಲ್ಲಿ ಅಪರಾಧ ಎಸಗುವುದು) ಅಡಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.
Advertisement
Advertisement
ರಾಜ್ಯ ಸರ್ಕಾರ ಮಾಸ್ಕ್ ಧರಿಸುವುದನ್ನು ಕಡ್ಡಾಯಗೊಳಿಸಿದ ನಂತರ ಆರೋಪಿಗಳು ಇದಕ್ಕೆ ಬೆಲೆ ಕೊಡದೆ ಓಡಾಡಿದ್ದು, ಹೀಗಾಗಿ 180 ಜನರ ವಿರುದ್ಧ ಪ್ರಕರಣ ದಾಖಲಿಸಲಾಗಿದೆ. ಮಂಗಳವಾರ ಸಂಜೆ ವೇಳೆಗೆ 138 ಜನರನ್ನು ಕೋಲ್ಕತ್ತಾ ಪೊಲೀಸರು ಬಂಧಿಸಿದ್ದರು ಎಂದು ಹಿರಿಯ ಪೊಲೀಸ್ ಅಧಿಕಾರಿ ತಿಳಿಸಿದ್ದಾರೆ.
Advertisement
ಮಾಸ್ಕ್ ಧರಿಸುವುದರಿಂದ ಆಗುವ ಪ್ರಯೋಜನಗಳ ಕುರಿತು ಜಾಗೃತಿ ಅಭಿಯಾನ ನಡೆಸಲಾಗಿತ್ತು. ಈ ಮೂಲಕ ಸಾರ್ವಜನಿಕರಿಗೆ ಅರಿವು ಮೂಡಿಸಲಾಗಿತ್ತು. ಆದರೂ ಕೆಲವರು ಮಾಸ್ಕ್ ಧರಿಸದೇ ಓಡಾಡಿದ್ದು, ಇಂತಹವರ ವಿರುದ್ಧ ಕ್ರಮ ಕೈಗೊಳ್ಳಲಾಗಿದೆ ಎಂದು ತಿಳಿಸಿದ್ದಾರೆ.
Advertisement
ಲಾಕ್‍ಡೌನ್ ನಿಯಮಗಳನ್ನು ಉಲ್ಲಂಘಿಸಿದ್ದಕ್ಕಾಗಿ ಬುಧವಾರ 488 ಜನರನ್ನು ಬಂಧಿಸಲಾಗಿದ್ದು, 93 ವಾಹನಗಳನ್ನು ಸಹ ವಶಪಡಿಸಿಕೊಂಡಿದ್ದೇವೆ. ತುರ್ತು ಸಂದರ್ಭದಲ್ಲಿ ಮಾತ್ರ ಹೊರಗಡೆ ಬರುವಂತೆ ಸೂಚಿಸಲಾಗಿದೆ. ಆದರೂ ಜನ ಬೇಕಾಬಿಟ್ಟಿಯಾಗಿ ಓಡಾಡಿದ್ದಾರೆ. ಇಂತಹವರ ವಿರುದ್ಧ ಕ್ರಮ ಕೈಗೊಂಡಿದ್ದೇವೆ ಎಂದು ತಿಳಿಸಿದ್ದಾರೆ.
ಮನೆಯಿಂದ ಹೊರಗೆ ಕಾಲಿಡುವುದಾದರೆ ಮಾಸ್ಕ್ ಧರಿಸಿ ಹೊರ ಬನ್ನಿ ಎಂದು ಪ್ರಧಾನಿ ಮೋದಿ ತಮ್ಮ ಭಾಷಣದಲ್ಲಿ ಹೇಳಿದ್ದಾರೆ. ಈ ನಿಟ್ಟಿನಲ್ಲಿ ಎಲ್ಲ ರಾಜ್ಯ ಸರ್ಕಾರಗಳು ಸಹ ಕಠಿಣ ಕ್ರಮವನ್ನು ವಹಿಸುತ್ತಿವೆ. ಲಾಕ್‍ಡೌನ್ ನಿಯಮಗಳನ್ನು ಕಡ್ಡಾಯವಾಗಿ ಜಾರಿಗೆ ತರಲಾಗುತ್ತಿದೆ. ಪೊಲೀಸರು ಕಟ್ಟುನಿಟ್ಟಿನ ಕ್ರಮ ಕೈಗೊಳ್ಳುತ್ತಿದ್ದಾರೆ. ಆದರೂ ಸಹ ಸಾರ್ವಜನಿಕರು ಲಾಕ್‍ಡೌನ್ ನಿಯಮಗಳನ್ನು ಉಲ್ಲಂಘಸಿದ್ದು, ಮಾಸ್ಕ್ ಧರಿಸದೆ ಉಡಾಫೆಯಿಂದ ವರ್ತಿಸುತ್ತಿದ್ದಾರೆ.