ಹಾವೇರಿ: ಲಾಕ್‍ಡೌನ್‍ನಿಂದಾಗಿ ಜಮೀನಿನಲ್ಲಿ ಬೆಳೆದಿದ್ದ ಕಲ್ಲಂಗಡಿಯನ್ನ ಮಾರಾಟ ಮಾಡಲಾಗದೆ ರೈತರೊಬ್ಬರು ಜಮೀನಿಗೆ ಕುರಿ ಬಿಟ್ಟು ಬೆಳೆ ಮೇಯಿಸಿ ಬೆಳೆಯನ್ನು ನಾಶ ಮಾಡಿದ್ದಾರೆ.
ಜಿಲ್ಲೆಯ ರಟ್ಟೀಹಳ್ಳಿ ತಾಲೂಕಿನ ಚಪ್ಪರದಹಳ್ಳಿ ಗ್ರಾಮದಲ್ಲಿ ಈ ಘಟನೆ ನಡೆದಿದೆ. ಚಪ್ಪರದಹಳ್ಳಿ ಗ್ರಾಮದ ಹನುಮಂತಪ್ಪ ಗೌಡರ ಅವರು ತಮ್ಮ ಎರಡು ಎಕ್ರೆ ಜಮೀನಿನಲ್ಲಿ ಕಲ್ಲಂಗಡಿ ಬೆಳೆದಿದ್ದರು. 40 ಸಾವಿರಕ್ಕೂ ಅಧಿಕ ಹಣ ಖರ್ಚು ಮಾಡಿ ಹನುಮಂತಪ್ಪ ಅವರು ಕಲ್ಲಂಗಡಿ ಬೆಳೆದಿದ್ದರು. ಆದರೆ ಲಾಕ್‍ಡೌನ್‍ನಿಂದ ಉತ್ತಮ ಬೆಲೆಯೂ ಸಿಗದೆ, ಬೆಳೆದ ಕಲ್ಲಂಗಡಿ ಮಾರಾಟ ಮಾಡಲೂ ಆಗದೆ ರೈತ ಬೆಳೆ ನಾಶ ಮಾಡಿದ್ದಾರೆ.
Advertisement
Advertisement
ಜಮೀನಿನಲ್ಲಿ ಬೆಳೆದಿದ್ದ ಕಲ್ಲಂಗಡಿಯನ್ನು ಗ್ರಾಮಸ್ಥರಿಗೆ ತೆಗೆದುಕೊಂಡು ಹೋಗಲು ಹೇಳಿ, ನಂತರ ಜಮೀನಿಗೆ ಕುರಿಗಳ ಹಿಂಡು ಬಿಟ್ಟು ಮೇಯಿಸೋ ಮೂಲಕ ಬೆಳೆ ನಾಶಪಡಿಸಿದ್ದಾರೆ. ಕಲ್ಲಂಗಡಿ ಉತ್ತಮ ಫಸಲು ಬಂದಿದ್ದರೂ ನಿರೀಕ್ಷಿಸಿದಷ್ಟು ಬೆಳೆಗೆ ದರ ಸಿಗದೆ, ಮಾರಾಟವೂ ಆಗದೆ ಕೈಗೆ ಬಂದ ತುತ್ತು ಬಾಯಿಗೆ ಬರದಂತಾಗಿ ರೈತ ಬೇಸತ್ತು ಈ ನಿರ್ಧಾರ ತೆಗೆದುಕೊಂಡಿದ್ದಾರೆ.