– ಗುಂಪಾಗಿ ಕುಳಿತವರ ಮೇಲೆ ಕೇಸ್
ಚಿಕ್ಕಮಗಳೂರು: ವ್ಯಕ್ತಿಯಿಂದ ವ್ಯಕ್ತಿಗೆ ಹರಡುತ್ತಿರುವ ಮಹಾಮಾರಿ ಕೊರೊನಾ ವೈರಸ್ ತಡೆಯಲು ಸಾಮಾಜಿಕ ಅಂತರ ಕಾಯ್ದುಕೊಳ್ಳುವಂತೆ ಇಡೀ ದೇಶವನ್ನೇ ಲಾಕ್‍ಡೌನ್ ಮಾಡಲಾಗಿದೆ. ಆದರೆ ಕೆಲವರು ಮಾತ್ರ ಗುಂಪು ಸೇರುತ್ತಿದ್ದಾರೆ. ಹೀಗೆ ಸೇರುತ್ತಿರುವವರನ್ನು ಹುಡುಕಿ ಪೊಲೀಸರು ಪ್ರಕರಣ ದಾಖಲಿಸುತ್ತಿದ್ದಾರೆ.
ಜಿಲ್ಲೆಯ ಆಲ್ದೂರು ಸಮೀಪದ ಬನ್ನೂರಿನಲ್ಲಿ ಅಂಗಡಿ ಮುಂದೆ ಸುಮಾರು ಎಂಟತ್ತು ಜನ ಗುಂಪಾಗಿ ಸೇರಿ ಹರಟೆ ಹೊಡೆಯುತ್ತಿದ್ದರು. ಇದೇ ವೇಳೆ, ಜಿಲ್ಲಾ ಕೇಂದ್ರದಿಂದ ಶೃಂಗೇರಿಗೆ ತೆರಳುತ್ತಿದ್ದ ಜಿಲ್ಲಾಧಿಕಾರಿ ಬಗಾದಿ ಗೌತಮ್ ಹಾಗೂ ಎಸ್‌ಪಿ ಹರೀಶ್ ಪಾಂಡೆ ಅಂಗಡಿ ಬಳಿಯ ಗುಂಪನ್ನು ನೋಡಿ ಗಾಡಿ ನಿಲ್ಲಿಸಿದ್ದಾರೆ. ಇದನ್ನು ಕಂಡ ಜನ ಎದ್ವೋ-ಬಿದ್ವೋ ಅಂತ ಓಡಿದ್ದಾರೆ.
Advertisement
Advertisement
ಹೀಗೆ ಓಡಿ ಹೋದವರು ಹೆಂಚಿನ ಮನೆ ಹಾಗೂ ಶೀಟಿನ ಮನೆ ಮೇಲೆ ಹತ್ತಿ ಕೂತಿದ್ದಾರೆ. ಮನೆ ಮೇಲೆ ಕೂತಿದ್ದ ಜನರಿಗೆ ಕೆಳಗಿಳಿಯುವಂತೆ ಎಷ್ಟೇ ಮನವಿ ಮಾಡಿಕೊಂಡರೂ ಕೆಳಗೆ ಇಳಿದಿಲ್ಲ. ಮನೆಯ ಒಂದು ತುದಿಯಲ್ಲಿ ಲಾಠಿ ಹಿಡಿದ ಪೊಲೀಸರು ಕೆಳಗೆ ಇಳಿಯುತ್ತಿಯೋ ಇಲ್ಲ ಮೇಲೆ ಬಂದು ಬಾರಿಸಬೇಕೋ ಎಂದು ಕೆಳಗೆ ಇಳಿಯುವಂತೆ ಹೇಳಿದ್ದಾರೆ. ಆದರೂ ಇಳಿದಿಲ್ಲ. ಹೀಗೆ ಅಧಿಕಾರಿಗಳು ಹೋಗುವವರೆಗೂ ಮನೆ ಮೇಲೆಯೇ ಕುಳಿತಿದ್ದಾರೆ. ನಂತರ ಸ್ಥಳಕ್ಕೆ ಬಂದ ಪೊಲೀಸರು ಇಬ್ಬರನ್ನು ಕೆಳಗಿಳಿಸಿದ್ದಾರೆ. ಲಾಕ್ ಡೌನ್ ಜಾರಿಯಲ್ಲಿದ್ದರೂ ಗುಂಪು ಸೇರಲು ಕಾರಣಕರ್ತರಾದ ಅಂಗಡಿ ಮಾಲೀಕ ಹಾಗೂ ಓಡಿ ಹೋದ ಇಬ್ಬರು ಸೇರಿ ಮೂವರ ಮೇಲೆ ಆಲ್ದೂರು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.