ಬೆಳಗಾವಿ: ಕೊರೊನಾ ಮಹಾಮಾರಿ ಇಡೀ ದೇಶವನ್ನೇ ತಲ್ಲಣಗೊಳಿಸಿದ್ದು, ಜನ ಪರದಾಡುವಂತಾಗಿದೆ. ಹಲವರು ತುತ್ತು ಅನ್ನವೂ ಸಿಗದೆ ಸಂಕಷ್ಟ ಎದುರಿಸುತ್ತಿದ್ದಾರೆ. ಈ ಸಾಲಿಗೆ ಇದೀಗ ಲೈಂಗಿಕ ಕಾರ್ಯಕರ್ತೆಯರೂ ಸೇರಿಕೊಂಡಿದ್ದು, ನಾಲ್ಕು ದಿನಗಳಿಂದ ಊಟವಿಲ್ಲದೆ ಗೋಳಿಡುತ್ತಿದ್ದಾರೆ.
ಕೊರೊನಾ ಲಾಕ್‍ಡೌನ್ ನಿಂದಾಗಿ ಲೈಂಗಿಕ ಕಾರ್ಯಕರ್ತೆಯರಿಗೂ ಸಂಕಷ್ಟ ಎದುರಾಗಿದ್ದು, ಕುಂದಾನಗರಿ ಬೆಳಗಾವಿಯಲ್ಲಿ ಒಂದು ಹೊತ್ತು ಊಟ ಸಿಗದೆ ಕಳೆದ ನಾಲ್ಕು ದಿನಗಳಿಂದ ಕೇವಲ ನೀರು ಕುಡಿದು ಬದುಕುತ್ತಿದ್ದಾರೆ. ತುತ್ತು ಅನ್ನಕ್ಕಾಗಿ ತುದಿಗಾಲಲ್ಲಿ ನಿಂತಿದ್ದು, ಮಹಿಳೆಯರ ಬಳಿ ನಾವು ಹೋದಾಗ ನಿಮಗೆ ಕೈ ಮುಗಿಯುತ್ತೇವೆ ಒಂದೊತ್ತು ಊಟ ಕೊಡಿಸಿ ಎಂದು ಗಳ ಗಳನೆ ಅತ್ತಿದ್ದಾರೆ. ಅವರ ಕಣ್ಣೀರಿನ ಕಥೆ ಕರಳು ಹಿಂಡುವಂತಿದ್ದು, ಈ ಕುರಿತು ತಮ್ಮ ಅಳಲು ತೋಡಿಕೊಂಡಿದ್ದಾರೆ.
ಈ ಮೂಲಕ ಲೈಂಗಿಕ ಕಾರ್ಯಕರ್ತೆಯರು ತಮ್ಮ ಅಳಲು ತೋಡಿಕೊಂಡಿದ್ದು, ಊಟ ನೀಡುವಂತೆ ಅಂಗಲಾಚಿದ್ದಾರೆ. ರೇಷನ್ ಕಾರ್ಡ್ ಇಲ್ಲ, ನಾವಿಲ್ಲಿಗೆ ಬಂದು 10-15 ವರ್ಷಗಳಾಯಿತು. ಬಾಡಿಗೆ ಮನೆಯಲ್ಲಿದ್ದೆವು, ಬಾಡಿಗೆ ಕಟ್ಟದ್ದಕ್ಕೆ ಮನೆಯ ವಸ್ತುಗಳನ್ನು ಹೊರಗೆ ಹಾಕುತ್ತೇವೆ ಎಂದು ಮಾಲೀಕರು ಬೆದರಿಕೆ ಹಾಕುತ್ತಿದ್ದಾರೆ. ಬೇರೆಯವರ ಬಳಿ ನಮ್ಮ ಕಷ್ಟ ಹೇಳಿದರೆ ಆಡಿಕೊಂಡು ನಗುತ್ತಾರೆ ಎಂದು ತಮ್ಮ ಅಳಲು ತೋಡಿಕೊಂಡಿದ್ದಾರೆ.