ಬೆಳಗಾವಿ: ಜಿಲ್ಲೆಯಲ್ಲಿ ತಬ್ಲಿಘಿಗಳಿಂದಾಗಿ ಒಮ್ಮಿಂದೊಮ್ಮೆಲೆ ಕೊರೊನಾ ಸೋಂಕಿತರ ಸಂಖ್ಯೆ ಡಬಲ್ ಆಗಿದೆ. ಆದರೆ ಇದರ ನಡುವೆ ಬೆಳಗಾವಿಯಲ್ಲಿ ಸಂತಸದ ಸುದ್ದಿಯೊಂದಿದೆ.
ಹೌದು. ಒಂದು ತಿಂಗಳ ಲಾಕ್ ಡೌನ್ ಸಮಯವನ್ನು ಉಪಯೋಗಿಸಿಕೊಂಡ ಬೆಳಗಾವಿಯ ಮಾರಿಹಾಳ ಗ್ರಾಮಸ್ಥರಿಗೆ ರಸ್ತೆ ನಿರ್ಮಿಸೋದು ಅವಶ್ಯಕವಿತ್ತು. ಆದರೆ ಹಳ್ಳಿಯನ್ನೂ ಬಿಡದ ಈ ಮಹಾಮಾರಿ ಕೊರೊನಾದಿಂದ ಯಾವುದೇ ಕೆಲಸ ಆಗ್ತಿರಲಿಲ್ಲ. ಇದೀಗ ಸರ್ಕಾರ ಮಾಡಲಾಗದ ಕೆಲಸಕ್ಕೆ ಗ್ರಾಮಸ್ಥರು ಕೈ ಹಾಕಿದ್ದು, ರಸ್ತೆ ಕೆಲಸ ಮುಗಿಸಿ ಇತರರಿಗೂ ಮಾದರಿ ಆಗಿದ್ದಾರೆ.
Advertisement
Advertisement
ಬೆಳಗಾವಿಯಲ್ಲೂ ಕೊರೊನಾ ತಾಂಡವವಾಡ್ತಿದೆ. ಹಿರೇಬಾಗೇವಾಡಿ ಗ್ರಾಮವೊಂದರಲ್ಲೇ ಬರೋಬ್ಬರಿ 36 ಸೋಂಕಿತರಿದ್ದಾರೆ. ಇಂತಹ ಸಂದಿಗ್ಧ ಪರಿಸ್ಥಿತಿಯಲ್ಲಿ ಕೂಡ ತಮ್ಮೂರಿನ ಜನರ ಮನವೊಲಿಸಿದ ಮಾರಿಹಾಳ ಗ್ರಾಮಸ್ಥರು ರಸ್ತೆ ನಿರ್ಮಾಣ ಕಾರ್ಯಕ್ಕೆ ಕೈ ಹಾಕೇ ಬಿಟ್ಟರು. ತಿಂಗಳಗಟ್ಟಲೇ ಅಲ್ಲ ಕೇವಲ 10 ದಿನಗಳ ಹಿಂದೆಯಷ್ಟೇ ಒಂದು ಸಭೆ ಸೇರಿ ರಸ್ತೆ ನಿರ್ಮಾಣದ ಬಗ್ಗೆ ಚರ್ಚಿಸಿದರು. ಆ ಸಭೆಯ ಫಲದಿಂದ ಇದೀಗ 2 ಕಿ.ಮೀ ರಸ್ತೆ ನಿರ್ಮಾಣವಾಗಿದೆ.
Advertisement
Advertisement
ಮಾರಿಹಾಳ ಗ್ರಾಮದಿಂದ ಒಂದು ಕಿ.ಮೀ ದೂರದಲ್ಲಿರುವ ಈ ರಸ್ತೆ ಇಳಿಜಾರಿನಲ್ಲಿರುವುದರಿಂದ ಕಳೆದ ವರ್ಷ ಸುರಿದ ಭಾರೀ ಮಳೆಗೆ ಕೊಚ್ಚಿಕೊಂಡು ಹೋಗಿತ್ತು. ರಸ್ತೆ ಹಾಳಾಗಿದ್ದರಿಂದ ಅಕ್ಕಪಕ್ಕದ ಜಮೀನಿನಲ್ಲಿ ಬೆಳೆ ಬೆಳೆದ ರೈತರು ಮಾರುಕಟ್ಟೆಗೆ ಸಾಗಿಸಲಾಗದೆ ಕೈಗೆ ಬಂದ ಬೆಳೆಯನ್ನೇ ಕಳೆದುಕೊಂಡಿದ್ದರು. ಹೀಗಾಗಿ ಗ್ರಾಮದ ಮುಖಂಡರೆಲ್ಲ ಸೇರಿ ಚಂದಾ ಎತ್ತಿದ್ರು. ಕೆಲವರು ಟ್ರ್ಯಾಕ್ಟರ್ ತಂದರೆ ಉಳಿದವರು ಬುಟ್ಟಿ, ಗುದ್ದಲಿ, ಶಲಾಕೆ ಹಿಡಿದು ಕೆಲಸಕ್ಕೆ ಇಳಿದರು.
ಸದ್ಯ ಈಗ ರಸ್ತೆಗೆ ಹಾಕಿದ ಮಣ್ಣು ಕೆಂಪು ಮಣ್ಣಾಗಿದ್ದು ಇದು ಮಳೆಗಾಲದಲ್ಲಿ ಕೂಡ ಜಾರುವುದಿಲ್ಲ ಮತ್ತು ಗಟ್ಟಿಯಾಗಿ ನಿಲ್ಲುತ್ತೆ. ಸದ್ಯ ಎರಡು ಕಿಲೋ ಮೀಟರ್ ರಸ್ತೆ ಮುಗಿದಿದ್ದು ಅರ್ಧ ಕಿಲೋ ಮೀಟರ್ ಅಷ್ಟೇ ಬಾಕಿ ಇದೆ. ಅದನ್ನ ಇನ್ನೆರಡು ದಿನಗಳಲ್ಲಿ ಮುಗಿಸುತ್ತೇವೆ ಎಂದು ಗ್ರಾಮಸ್ಥರು ಹೇಳುತ್ತಿದ್ದಾರೆ.
ಒಟ್ಟಿನಲ್ಲಿ ರಸ್ತೆ ನಿರ್ಮಾಣದಿಂದ ಗ್ರಾಮಸ್ಥರಲ್ಲಿ ಸಂತಸ ಮನೆಮಾಡಿದ್ದು, ಲಾಕ್‍ಡೌನ್ ಸಮಯದಲ್ಲಿ ರಸ್ತೆ ಕೆಲಸವನ್ನ ಮಾಡಿ ಮುಗಿಸಿ ಮಾರಿಹಾಳ ಗ್ರಾಮಸ್ಥರು ಇತರರಿಗೂ ಮಾದರಿಯಾಗಿದ್ದಾರೆ.