ಹುಬ್ಬಳ್ಳಿ: ವಾಣಿಜ್ಯ ನಗರಿಯಲ್ಲಿ ಎರಡು ದಿನಗಳ ಹಿಂದೆ ನಡೆದ ಕಲ್ಲು ತೂರಾಟದ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿ, ಯಾರೋ ಒಬ್ಬರು ಮಾಡಿರುವ ತಪ್ಪಿಗೆ ಸಮುದಾಯವನ್ನು ದೂರುವುದು ಸರಿಯಲ್ಲ ಎಂದು ಅಂಜುಮನ್ ಇಸ್ಲಾಂ ಸಂಸ್ಥೆ ಅಧ್ಯಕ್ಷ ಅಸಮಾನಧಾನ ಹೊರಹಾಕಿದ್ದಾರೆ.
ಹುಬ್ಬಳ್ಳಿ ಸರ್ಕ್ಯೂಟ್ ಹೌಸ್ಸಿನಲ್ಲಿ ಬಸವರಾಜ್ ಹೊರಟ್ಟಿ ಹಾಗೂ ಶಾಸಕ ಪ್ರಸಾದ್ ಅಬ್ಬಯ್ಯ ನೇತೃತ್ವದಲ್ಲಿ ಸರ್ವಧರ್ಮ ಸಭೆಯನ್ನು ಹಮ್ಮಿಕೊಳ್ಳಲಾಯಿತು. ಕೊರೊನಾ ವೈರಸ್ ಭೀತಿ ಹಿನ್ನೆಲೆ ದೇಶಾದ್ಯಂತ ಲಾಕ್‍ಡೌನ್ ಸಂದರ್ಭದಲ್ಲಿ ಕಲ್ಲು ತೂರಾಟ ನಡೆದಿದ್ದು, ರಾಜ್ಯದಲ್ಲಿ ಹಲವು ಸಮಾಜದ ನಡುವೆ ವೈಮನಸ್ಸು ಉಂಟಾಗುವ ಪ್ರಕರಣ ಹೆಚ್ಚಾಗುತ್ತಿದೆ. ಅಲ್ಲದೇ ಮೊನ್ನೆಯಷ್ಟೇ ಹುಬ್ಬಳ್ಳಿಯಲ್ಲಿ ಸಾಮೂಹಿಕ ಪ್ರಾರ್ಥನೆಗಾಗಿ ತೆರಳಿದ್ದವರಿಂದ ಪೊಲೀಸರ ಮೇಲೆ ಹಲ್ಲೆ ಪ್ರಕರಣ ದಾಖಲಾಗಿದೆ. ಸಮಾಜದಲ್ಲಿ ಕೋಮುವಾದ ಸೃಷ್ಟಿಸುವ ಲಕ್ಷಣಗಳು ಗೋಚರಿಸುತ್ತಿವೆ. ಇಂತಹ ಬೆಳವಣಿಗೆಗಳಿಗೆ ಕಡಿವಾಣ ಹಾಕಿ ಸೌಹಾರ್ದತೆಯಿಂದ ಸರ್ವಧರ್ಮ ಸಮನ್ವಯ ರೀತಿಯಲ್ಲಿ ಜೀವನ ನಡೆಸಬೇಕು ಎಂದು ಸಭೆಯಲ್ಲಿ ತೀರ್ಮಾನ ಕೈಗೊಳ್ಳಲಾಗಿದೆ.
Advertisement
Advertisement
ಇದೇ ವೇಳೆ ಮಾತನಾಡಿದ ಅಂಜುಮನ್ ಇಸ್ಲಾಂ ಸಂಸ್ಥೆ ಅಧ್ಯಕ್ಷ ಯೂಸುಫ್ ಸವಣೂರ ಅವರು, ಕೊರೊನಾ ವೈರಸ್ ಭೀತಿ ಹಿನ್ನೆಲೆಯಲ್ಲಿ ದೇಶಾದ್ಯಂತ ಲಾಕ್‍ಡೌನ್ ಆದೇಶ ಘೋಷಣೆಯಾಗಿದ್ದರೂ ಮಂಟೂರ ರಸ್ತೆಯಲ್ಲಿರುವ ಅರಳಿಕಟ್ಟಿ ಕಾಲೋನಿಯಲ್ಲಿ ನಮಾಝ್ ವಿಷಯಕ್ಕೆ ಸಂಬಂಧಿಸಿದಂತೆ ನಡೆದ ಕಲ್ಲು ತೂರಾಟ ಪ್ರಕರಣ ಖಂಡನೀಯವಾಗಿದೆ. ಇದರ ಬಗ್ಗೆ ಅಂಜುಮನ್ ಇಸ್ಲಾಂ ಸಂಸ್ಥೆಯು ಸೂಕ್ತ ಕ್ರಮ ಕೈಗೊಳ್ಳಲಿದೆ. ಇದರಲ್ಲಿ ಯಾರು ಕೂಡ ಕೋಮುವಾದ ಸೃಷ್ಟಿಸಬಾರದು. ಹುಬ್ಬಳ್ಳಿ-ಧಾರವಾಡ ಮಹಾನಗರದಲ್ಲಿ ಹಿಂದೂ ಮುಸ್ಲಿಂ ಭಾಂದವರು ಸಹೋದರರಂತೆ ಜೀವನ ನಡೆಸುತ್ತಿದ್ದಾರೆ. ಕೆಲವು ವಿಕೃತ ಮನಸ್ಥಿತಿಯವರು ಇಂತಹ ಕೃತ್ಯ ಎಸಗಿದ್ದಾರೆ. ಆದರೇ ಯಾವುದೇ ಪ್ರಕರಣಕ್ಕೆ ಇಸ್ಲಾಂ ಧರ್ಮ ಪ್ರೇರಣೆ ನೀಡಿಲ್ಲ ಎಂದು ಹೇಳಿದರು.
Advertisement
Advertisement
ಈಗಾಗಲೇ ಹುಬ್ಬಳ್ಳಿ-ಧಾರವಾಡದ ಅಂಜುಮನ್ ಇಸ್ಲಾಂ ಸಂಸ್ಥೆಯೊಂದಿಗೆ ಚರ್ಚೆ ನಡೆಸಲಾಗಿದೆ. ಸಮಾಜದಲ್ಲಿ ಒಳ್ಳೆಯ ರೀತಿಯ ವಾತಾವರಣ ನಿರ್ಮಾಣವಾಗಬೇಕು. ನಾವು ಸರ್ಕಾರದ ಆದೇಶವನ್ನ ಕಟ್ಟುನಿಟ್ಟಾಗಿ ಪಾಲಿಸುತ್ತಿದ್ದೇವೆ. ಈಗಾಗಲೇ 130 ಮಸೀದಿಗಳನ್ನು ಸಹ ಬಂದ್ ಮಾಡಿದ್ದೇವೆ. ಯಾವ ಮಸೀದಿಯಲ್ಲೂ ಸಾಮೂಹಿಕವಾಗಿ ಪ್ರಾರ್ಥನೆ ಮಾಡುತ್ತಿಲ್ಲ. ಯಾರೂ ಸಹ ಮನೆ ಬಿಟ್ಟು ಹೊರಬರಬಾರದು. ಏಪ್ರಿಲ್ 8ರಂದು ಇರುವ ಶಭೇ ಭರಾತ್ ಹಬ್ಬದಂದು ಸಹ ಯಾರು ಸಹ ಮನೆಯಿಂದ ಹೊರಗೆ ಬರಬಾರದು. ಯಾರೂ ಖಬರಸ್ಥಾನಕ್ಕೂ ಸಹ ಹೋಗಬಾರದು. ಅಂಜುಮನ್ ಇಸ್ಲಾಂ ಸಂಸ್ಥೆಯಿಂದಲೇ ಖಬರಸ್ಥಾನ ಸ್ವಚ್ಚತಾ ಕಾರ್ಯ ನಡೆಯುತ್ತಿದೆ ಎಂದು ಮನವಿ ಮಾಡಿಕೊಂಡರು.
ಸರ್ಕಾರದ ಲಾಕ್ ಡೌನ್ ಆದೇಶವನ್ನ ನಾವೂ ಕಟ್ಟುನಿಟ್ಟಾಗಿ ಪಾಲಿಸುತ್ತೇವೆ. ಆದರೆ ಯಾರೋ ಒಬ್ಬರು ಮುಸ್ಲಿಂರು ಮಾಡಿರೋ ತಪ್ಪಿಗೆ ಈಡೀ ಸಮುದಾಯಕ್ಕೆ ಕಪ್ಪು ಚುಕ್ಕೆ ಇಡಬಾರದು. ಮುಸ್ಲಿಂ ಸಮಾಜದ ಮುಖಂಡರು ಸಮಾಜದಲ್ಲಿ ಜಾಗೃತೆ ಮೂಡಿಸಲು ಜಿಲ್ಲಾಡಳಿತ ಅವಕಾಶ ಕಲ್ಪಿಸುತ್ತಿಲ್ಲ ಎಂದು ಹೇಳಿದರು. ಸಭೆಯಲ್ಲಿ ಮಾಜಿ ಸಚಿವ ಎ.ಎಂ ಹಿಂಡಸಗೇರಿ, ವಿಪ ಸದಸ್ಯ ಶ್ರೀನಿವಾಸ ಮಾನೆ, ಅಂಜುಮನ್ ಇಸ್ಲಾಂ ಸಂಸ್ಥೆಯ ಮುಖಂಡರು ಹಾಗೂ ಹಲವು ಜನಪ್ರತಿನಿಧಿಗಳು ಭಾಗಿಯಾಗಿದ್ದರು.