– ಚಿಕನ್, ಮಟನ್, ಬಾರ್ ಬಂದ್
– ಹೋಟೆಲ್, ದಿನಸಿ ಅಂಗಡಿ ಎಂದಿನಂತೆ
ಕೋಲಾರ: ಕೊರೊನಾ ಆತಂಕ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದ್ದು, ಕೋಲಾರ ಜಿಲ್ಲೆಯಾದ್ಯಂತ ನಿಷೇಧಾಜ್ಞೆ ಜಾರಿ ಮಾಡಿ ಜಿಲ್ಲಾಧಿಕಾರಿ ಸಿ.ಸತ್ಯಭಾಮ ಆದೇಶ ಹೊರಡಿಸಿದ್ದಾರೆ. ಅಲ್ಲದೆ ಜಿಲ್ಲೆಯ ಗಡಿಯಲ್ಲಿ ಕೊರೊನಾ ಚೆಕ್ ಪೋಸ್ಟ್ ತೆರೆಯಲು ಸೂಚಿಸಿದ್ದಾರೆ.
ಜಿಲ್ಲೆಯಲ್ಲಿ ಈವರೆಗೆ ಯಾವುದೇ ಕೊರೊನಾ ಸೋಂಕಿತರು ಪತ್ತೆಯಾಗಿಲ್ಲ, ಆದರೂ ಸೋಂಕು ಹರಡದಂತೆ ಸಾಕಷ್ಟು ಮುನ್ನೆಚ್ಚರಿಕಾ ಕ್ರಮಗಳನ್ನು ಜಿಲ್ಲಾಡಳಿತ ತೆಗೆದುಕೊಂಡಿದೆ. ಹೀಗಾಗಿ ಮುಂದಿನ ಆದೇಶದ ವರೆಗೆ ಜಿಲ್ಲೆಯಲ್ಲಿ ಸೆಕ್ಷನ್ 144 ಜಾರಿ ಮಾಡಲಾಗಿದೆ. ಹೀಗಾಗಿ ಜನರು ಒಟ್ಟಿಗೆ ಸೇರುವಂತಿಲ್ಲ, ಯಾವುದೇ ಸಂತೆ, ಜಾತ್ರೆ, ರಥೋತ್ಸವಗಳನ್ನು ಮಾಡುವಂತಿಲ್ಲ, ಸಭೆ ಸಮಾರಂಭಗಳನ್ನು ಕೂಡಾ ಮಾಡುವಂತಿಲ್ಲ, ಮಾಡಿದರೂ ಹೆಚ್ಚು ಜನ ಸೇರುವಂತಿಲ್ಲ ಎಂದು ಆದೇಶದಲ್ಲಿ ತಿಳಿಸಲಾಗಿದೆ.
Advertisement
Advertisement
ಕೋಲಾರ ಆಂಧ್ರ ಮತ್ತು ತಮಿಳುನಾಡಿನ ಗಡಿ ಜಿಲ್ಲೆಯಾಗಿರುವ ಹಿನ್ನೆಲೆ ಆಂಧ್ರ ಮತ್ತು ತಮಿಳುನಾಡಿನ ಗಡಿ ಸಂಪರ್ಕ ಮಾಡುವ ಜಿಲ್ಲೆಯ 6 ಕಡೆಗಳಲ್ಲಿ ಕೊರೊನಾ ಚೆಕ್ ಪೋಸ್ಟ್‍ಗಳನ್ನು ಹಾಕಲಾಗಿದ್ದು, ಅಲ್ಲಿ ಆರೋಗ್ಯ ಇಲಾಖೆ ಹಾಗೂ ಪೊಲೀಸ್ ಇಲಾಖೆ ಸಿಬ್ಬಂದಿ ತಪಾಸಣೆ ನಡೆಸಲಿದ್ದಾರೆ. ಜೊತೆಗೆ ಈ ವರೆಗೆ ಜಿಲ್ಲೆಯಲ್ಲಿ ಹೊರ ದೇಶಗಳಿಂದ ಬಂದಿರುವ ಒಟ್ಟು 36 ಜನರ ಮೇಲೆ ಆರೋಗ್ಯ ಇಲಾಖೆ ನಿಗಾವಹಿಸಿದೆ. ಪ್ರತಿನಿತ್ಯ ಕೊರೊನಾಗೆ ಸಂಬಂದಿಸಿದಂತೆ ಸಭೆ ಕರೆಯಲಾಗುತ್ತಿದ್ದು, ನಿತ್ಯ ಜಿಲ್ಲೆಗೆ ಬರುವ, ಹೋಗುವವರ ಮೇಲೆ ನಿಗಾ ವಹಿಸಲು ಅಗತ್ಯ ಕ್ರಮಗಳನ್ನು ಕೈಗೊಳ್ಳಲಾಗಿದೆ.
Advertisement
Advertisement
ಕೋಲಾರ ಉಪ ಕಾರಾಗೃಹದಲ್ಲೂ ಖೈದಿಗಳ ಸಂದರ್ಶನ ರದ್ದು ಮಾಡಲಾಗಿದೆ. ಕೊರೊನಾ ಸೋಂಕು ಹರಡದಂತೆ ಜಿಲ್ಲೆಯಲ್ಲಿ ನೈರ್ಮಲ್ಯ ಕಾಪಾಡುವ ದೃಷ್ಟಿಯಿಂದ ಈಗಾಗಲೇ ಜಿಲ್ಲೆಯ ಎಲ್ಲ ಪುರಸಭೆ ಹಾಗೂ ನಗರಸಭೆಗಳು ಮಾಂಸದಂಗಡಿಗಳು ಹಾಗೂ ಬೀದಿ ಬದಿ ವ್ಯಾಪಾರಿಗಳ ಅಂಗಡಿಗಳನ್ನು ಬಂದ್ ಮಾಡುವಂತೆ ಆದೇಶ ಹೊರಡಿಸಿದ್ದಾರೆ.
ಜನರಿಗೆ ತೊಂದರೆಯಾಗದಂತೆ ಹೋಟೆಲ್, ದಿನಸಿ ಅಂಗಡಿ, ಬೇಕರಿಗಳು ಸೇರಿದಂತೆ ದಿನ ಬಳಕೆ ವಸ್ತುಗಳಿಗೆ ಯಾವುದೇ ತೊಂದರೆಯಾಗದಂತೆ ಕ್ರಮ ಕೈಗೊಳ್ಳಲಾಗಿದೆ. ಒಂದೆಡೆ ಕೊರೊನಾ ಆತಂಕ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಅದೇ ರೀತಿ ಬೇಸಿಗೆಯ ತಾಪಮಾನ ಕೂಡಾ ಹೆಚ್ಚಾಗುತ್ತಿದ್ದು, ಜನ ಮನೆಯಿಂದ ಹೊರಬರಲು ಹೆದರುತ್ತಿದ್ದಾರೆ. ಮನೆಯಲ್ಲೂ ಇರಲಾಗದ ಪರಿಸ್ಥಿತಿ ನಿರ್ಮಾಣವಾಗಿದ್ದು, ಜನರು ಕನಸು, ಮನಸಲ್ಲೂ ಕೊರೊನಾ ಕೊರೊನಾ ಎನ್ನುವಂತಾಗಿದೆ.