ಬೆಂಗಳೂರು: ರಾಜ್ಯ ಸೇರಿದಂತೆ ದೇಶದಲ್ಲಿ ಸದ್ಯ ಓಮಿಕ್ರಾನ್ ಉಪತಳಿ ಜೆಎನ್.1 (JN.1) ಸದ್ದು ಜೋರಾಗಿದೆ. ಈ ನಡುವೆ ಮತ್ತೊಂದು ಅಚ್ಚರಿ ವಿಚಾರ ಹೊರಬಿದ್ದಿದ್ದು, ಹೊಸ ಉಪತಳಿ ಸೋಂಕು ಪತ್ತೆಗೂ ಮುನ್ನ ಓಮಿಕ್ರಾನ್‌ನ 6 ಉಪತಳಿಗಳು ಸದ್ದಿಲ್ಲದೆ ಬಂದು ಹೋಗಿವೆ.
ಹೌದು, ದೇಶದಲ್ಲಿ ಸದ್ಯ ಕೊರೊನಾ (Corona Virus) ರೂಪಾಂತರಿ ತಳಿ ಜೆಎನ್.1 ತಲ್ಲಣಗೊಳಿಸುತ್ತಿದೆ. ಆದರೆ ಕಳೆದೊಂದು ವರ್ಷದಲ್ಲಿ ಎರಡು ತಿಂಗಳಿಗೆ ಒಂದರಂತೆ ಕೊರೊನಾ ರೂಪಾಂತರಿ ಓಮಿಕ್ರಾನ್‌ನ 6 ಉಪತಳಿಗಳು ಬಂದು ಹೋಗಿರುವುದು ಜನರಿಗೆ ಗೊತ್ತೇ ಇಲ್ಲ. ಇದೀಗ ಅದೇ ಸಾಲಿಗೆ ಜೆಎನ್.1 ರೂಪಾಂತರಿ ಸಹ ಸೇರಿಕೊಂಡಿದೆ. ಆದರೆ ಕೊಂಚ ಹೆಚ್ಚು ಸದ್ದು ಮಾಡುವ ಮೂಲಕ ಆತಂಕಕ್ಕೆ ಕಾರಣವಾಗುತ್ತಿದೆ. ಇದನ್ನೂ ಓದಿ: ಕೊರೊನಾಗೆ ಇಬ್ಬರು ಬಲಿ – 74 ಪಾಸಿಟಿವ್, ಬೆಂಗಳೂರಿನಲ್ಲೇ 57 ಮಂದಿಗೆ ಸೋಂಕು
ಕೊರೊನಾ ಮೊದಲ ಅಲೆಯ ಬಳಿಕ ಆರೋಗ್ಯ ಇಲಾಖೆ ರಾಜ್ಯ ಕಣ್ಗಾವಲು ಪಡೆಯನ್ನು ತೀವ್ರಗೊಳಿಸಿದೆ. ಸೋಂಕು ದೃಢವಾದ ಯಾವ ವ್ಯಕ್ತಿಯ ಮಾದರಿಗಳಲ್ಲಿ ಸಿಟಿ ವ್ಯಾಲ್ಯೂ 25ಕ್ಕಿಂತ ಕಡಿಮೆ ಇರುತ್ತದೆಯೋ ಆ ಮಾದರಿಗಳನ್ನು ನಿರಂತರವಾಗಿ ಜಿನೋಮ್ ಸೀಕ್ವೆನ್ಸಿಂಗ್ ಪರೀಕ್ಷೆಗೆ ಒಳಪಡಿಸಲಾಗುತ್ತಿದೆ. ಕಳೆದ ಮೂರು ಅಲೆಯಲ್ಲಿ ಅತ್ಯಧಿಕ ರೂಪಾಂತರಿ ವೈರಸ್‌ಗಳಲ್ಲಿ ಅತ್ಯಧಿಕ ಪ್ರಮಾಣದಲ್ಲಿ ಉಪತಳಿಗಳು ವರದಿಯಾಗಿರುವುದು ಓಮಿಕ್ರಾನ್‌ನಲ್ಲಿ ಮಾತ್ರ.
ಇಲ್ಲಿ ಸೋಂಕಿನ ಹರಡುವಿಕೆ ಪ್ರಮಾಣ ದ್ವಿಗುಣಗೊಂಡಿದ್ದು, ಸಾವು ಹಾಗೂ ಆಸ್ಪತ್ರೆಗೆ ದಾಖಲಾದ ಪ್ರಕರಣಗಳು ತುಂಬಾ ಕಡಿಮೆ ಇತ್ತು. ರಾಜ್ಯದಲ್ಲಿ ಇದುವರೆ ಜೆಎನ್.1 ಸೇರಿದಂತೆ 6 ರೂಪಾಂತರಿ ಹಾಗೂ 6 ಉಪತಳಿಗಳು ವರದಿಯಾಗಿವೆ. ಮೊದಲ ಎರಡು ಅಲೆಯಲ್ಲಿ ಕೊರೊನಾ ರೂಪಾಂತರಿ ಆಲ್ಫಾ, ಬೇಟಾ, ಡೆಲ್ಟಾ, ಇತರೆ ಇಟಿಎ, ಕಪ್ಪಾ, ಪಂಗೋ ವರದಿಯಾಗಿದ್ದರೂ ತಕ್ಷಣವೇ ಅಂತ್ಯ ಕಂಡಿವೆ. ಆದರೆ 2023 ರಲ್ಲಿ ಓಮಿಕ್ರಾನ್ ರೂಪಾಂತರಿ ತಳಿ ವರದಿಯಾಗಿದ್ದು, ತದನಂತರದ ದಿನದಲ್ಲಿ ಓಮಿಕ್ರಾನ್ ಸಬ್-ವೇರಿಯಂಟ್‌ಗಳಾದ ಬಿಎ 1.1.5, ಬಿ.ಎ.1, ಬಿ.ಎ2, ಬಿ.ಎ.3, ಬಿ.ಎ.4, ಬಿ.ಎ.5 ಹಾಗೂ ಬಿ.ಎ.5 ಎಕ್ಸ್ಬಿಬಿ ವರದಿಯಾಗಿದೆ. ಇದನ್ನೂ ಓದಿ: ಹೊಸ ವರ್ಷಕ್ಕೆ ಗೈಡ್‌ಲೈನ್ಸ್ ಬಿಡುಗಡೆ – ಪೊಲೀಸ್ ಇಲಾಖೆಯಿಂದ ಭರ್ಜರಿ ಸಿದ್ಧತೆ
ಓಮಿಕ್ರಾನ್‌ನ ಉಪತಳಿಗಳು ಬೇರೆ ಬೇರೆ ವೇಷಗಳಲ್ಲಿ ಪತ್ತೆಯಾದರೂ ಆರೋಗ್ಯದ ಮೇಲೆ ಯಾವುದೇ ರೀತಿಯಾದ ವ್ಯತಿರಿಕ್ತ ಪರಿಣಾಮ ಬೀರಿಲ್ಲ ಅನ್ನೋದು ಸದ್ಯ ನಿಟ್ಟುಸಿರಿನ ವಿಚಾರ. ಇಲ್ಲಿತನಕ 20 ಸಾವಿರ ಮಂದಿಗೆ ರೂಪಾಂತರಿ ಸಂಬಂಧ ರಾಜ್ಯದಲ್ಲಿ ಜಿನೋಮ್ ಸೀಕ್ವೆನ್ಸಿಂಗ್‌ಗೆ ಕಳುಹಿಸಲಾದ ಕೋವಿಡ್ ಸೋಂಕಿತರ ಮಾದರಿಗಳಲ್ಲಿ 20,304 ಮಂದಿಯಲ್ಲಿ ರೂಪಾಂತರಿ ಹಾಗೂ ಉಪತಳಿಗಳು ವರದಿಯಾಗಿವೆ. 14,199 ಮಂದಿಯಲ್ಲಿ ಓಮಿಕ್ರಾನ್, 9928 ಮಂದಿಯಲ್ಲಿ ಒಮಿಕ್ರಾನ್ ಉಪತಳಿ ಬಿಎ 2, 1873 ಮಂದಿಯಲ್ಲಿ ಬಿಎ1, 1007 ಮಂದಿಯಲ್ಲಿ ಎಕ್ಸ್ಬಿಬಿ ಉಪತಳಿ ವರದಿಯಾಗಿದ್ದು, ಉಳಿದ ಉಪತಳಿ ಹೆಚ್ಚಾಗಿ ಪತ್ತೆಯಾಗಿಲ್ಲ. ಒಟ್ಟಾರೆ ಸದ್ದಿಲ್ಲದೇ 6 ಉಪತಳಿಗಳು ಬಂದು ಹೋಗಿವೆ. ಆದರೂ ಯಾವುದೇ ಸಮಸ್ಯೆ ಆಗದಿರೋದು ನೆಮ್ಮದಿ ವಿಚಾರ.