ಚಿತ್ರದುರ್ಗ: ನಿಮ್ಮ ಊಟ ಬೇಡ, ವಸತಿ ಬೇಡ, ನಮ್ಮೂರಿಗೆ ನಮ್ಮನ್ನು ಕಳುಹಿಸಿಬಿಡಿ ಎಂದು ಉಪವಾಸದ ಹಠಕ್ಕೆ ಬಿದ್ದಿರುವ ಯಾದಗಿರಿಯ 126 ಜನ ಕೂಲಿಕಾರರು, ಚಿತ್ರದುರ್ಗ ಜಿಲ್ಲಾಡಳಿತವನ್ನು ಭಾವನಾತ್ಮಕವಾಗಿ ಕಟ್ಟಿಹಾಕಲು ಮುಂದಾಗಿದ್ದಾರೆ.
ಇವರಲ್ಲಿ 1-3 ವರ್ಷದೊಳಗಿನ 30 ಮಕ್ಕಳು, ಒಬ್ಬರು ಗರ್ಭಿಣಿ ಇದ್ದಾರೆ. ಲಾಕ್ ಡೌನ್ ಹಿನ್ನೆಲೆಯಲ್ಲಿ ಇವರೆಲ್ಲ ಮಂಗಳವಾರ ಬೆಂಗಳೂರು ಬಿಟ್ಟು ಮಿನಿ ಬಸ್, ಟೆಂಪೋ, ಎರಡು ಕಾರುಗಳಲ್ಲಿ ಯಾದಗಿರಿಗೆ ಪ್ರಯಾಣ ಬೆಳೆಸಿದ್ದರು. ಮಾರ್ಗಮಧ್ಯೆ ಚಿತ್ರದುರ್ಗ ಜಿಲ್ಲೆ ಮೊಳಕಾಲ್ಮೂರು ತಾಲೂಕಿನ ತಮ್ಮೇನಹಳ್ಳಿ ಚೆಕ್ ಪೋಸ್ಟ್ ನಲ್ಲಿ ಅಧಿಕಾರಿಗಳು ಇವರನ್ನು ತಡೆದು ವೈದ್ಯಕೀಯ ಪರೀಕ್ಷೆಗೆ ವಶಕ್ಕೆ ಪಡೆದು ರಾಂಪುರದ ಆಶ್ರಮ ಶಾಲೆಯಲ್ಲಿ ತಾತ್ಕಾಲಿಕ ವ್ಯವಸ್ಥೆ ಕಲ್ಪಿಸಿದರು.
Advertisement
Advertisement
ಪರೀಕ್ಷೆ ಬಳಿಕ ಕಳುಹಿಸುತ್ತೇವೆ ಎಂದು ಊಟ ಕೊಟ್ಟರೆ ಬೇಡ ಎಂದರು. ಅಲ್ಲದೇ ಚಿಕ್ಕಮಕ್ಕಳಿಗೆ ಹಾಲು ಕೊಟ್ಟರೆ ಅವರಿಗೂ ಕುಡಿಸದೆ ಉಪವಾಸದ ಹಠಕ್ಕೆ ಬಿದ್ದಿದ್ದರು. ಹೀಗಾಗಿ ಅಧಿಕಾರಿ ವರ್ಗ ಎಷ್ಟೇ ಮನವಿ ಮಾಡಿದರೂ ಜಪ್ಪಯ್ಯ ಎನ್ನಿತ್ತಿಲ್ಲ. ನಮ್ಮ ಜೀವ ಇಲ್ಲೇ ಹೊದ್ರೂ ಪರವಾಗಿಲ್ಲ. ನಮ್ಮಷ್ಟಕ್ಕೆ ನಮ್ಮನ್ನು ಬಿಟ್ಟುಬಿಡಿ. ಹೇಗೋ ಊರು ಸೇರ್ತೀವಿ ಎಂದು ಅಂಗಲಾಚುತ್ತಿದ್ದಾರೆ.
Advertisement
ಕೊನೆಗೆ ಚಿತ್ರದುರ್ಗ ಜಿಲ್ಲಾಧಿಕಾರಿ ಆರ್.ವಿನೋತ್ ಪ್ರಿಯಾ ಕೂಲಿಕಾರರ ಜತೆ ದೂರವಾಣಿಯಲ್ಲಿ ಮಾತನಾಡಿ, ಗಾಬರಿ ಪಡಬೇಡಿ. ನಿಮ್ಮೂರಿಗೆ ಆದಷ್ಟು ಬೇಗ ಕಳುಹಿಸುತ್ತೇವೆ. ಮೊದಲು ಊಟ ಮಾಡಿ, ಅದಕ್ಕೂ ಮುಂಚೆ ಮಕ್ಕಳಿಗೆ ಹಾಲು ಕುಡಿಸಿ ಎಂದು ತಾತ್ಕಾಲಿಕವಾಗಿ ಅವರ ಮನವೊಲಿಸುವಲ್ಲಿ ಸಫಲರಾಗಿದ್ದಾರೆ. ಆದರೂ ಏನಾದರು ಆಗಲಿ ಊರಿಗೆ ಆದಷ್ಟು ಬೇಗ ಹೋಗಲೇಬೇಕೆಂಬ ಹಠ ಮಾತ್ರ ಅವರಲ್ಲಿ ಇನ್ನೂ ಕಡಿಮೆಯಾಗಿಲ್ಲ.