-ಸಮುದ್ರಕ್ಕಿಳಿದ ಮೀನುಗಾರರು
ಕಾರವಾರ: ಲಾಕ್‍ಡೌನ್ ನಿಂದಾಗಿ ಕರಾವಳಿಯಲ್ಲಿ ಕಳೆದೊಂದು ತಿಂಗಳಿಂದ ಮೀನುಗಾರಿಕೆ ಸಂಪೂರ್ಣ ಸ್ಥಗಿತಗೊಂಡಿತ್ತು. ಉತ್ತರ ಕನ್ನಡ ಜಿಲ್ಲೆಯಲ್ಲಿ ಕೊರೊನಾ ಸೋಂಕು ಹರಡುವ ಹಿನ್ನೆಲೆಯಲ್ಲಿ ನಿರ್ಬಂಧ ವಿಧಿಸಲಾಗುತ್ತಾದರೂ ಮೀನುಗಾರಿಕೆಯನ್ನೇ ನಂಬಿಕೊಂಡಿದ್ದ ಐದು ಸಾವಿರಕ್ಕೂ ಹೆಚ್ಚು ಕುಟುಂಬಗಳು ಸಂಕಷ್ಟಕ್ಕೆ ಸಿಲುಕುವಂತಾಗಿತ್ತು. ಆದರೆ ಇದೀಗ ರಾಜ್ಯ ಸರ್ಕಾರ ಸಾಂಪ್ರದಾಯಿಕ ಮೀನುಗಾರಿಕೆಗೆ ಅವಕಾಶ ಕಲ್ಪಿಸಿದ್ದು ಮೀನುಗಾರರ ಮೊಗದಲ್ಲಿ ಮಂದಹಾಸ ಮೂಡುವಂತೆ ಮಾಡಿದ್ದು ಇಂದಿನಿಂದ ಸಮುದ್ರಕ್ಕಿಳಿದಿದ್ದಾರೆ.
Advertisement
ಇಡೀ ವಿಶ್ವವನ್ನೇ ಬೆಚ್ಚಿ ಬೀಳಿಸಿರುವ ಕೋವಿಡ್-19 ಸೋಂಕು ಹರಡುವುದನ್ನು ತಪ್ಪಿಸಲು ದೇಶದಲ್ಲಿ 21 ದಿನಗಳ ಲಾಕ್‍ಡೌನ್ ಘೋಷಣೆ ಮಾಡಲಾಗಿತ್ತು. ಇದರಿಂದ ರಾಜ್ಯದಲ್ಲಿ ಮೀನುಗಾರಿಕೆಗೆ ನಿಷೇಧ ಹೇರಿದ್ದು ಆಳಸಮುದ್ರ ಸೇರಿದಂತೆ ಸಾಂಪ್ರದಾಯಿಕ ಮೀನುಗಾರಿಕೆಗೂ ಬ್ರೇಕ್ ಬಿದ್ದಿತ್ತು. ಪರಿಣಾಮ ರೆಡ್ ಜೋನ್ ನಲ್ಲಿರುವ ಉತ್ತರಕನ್ನಡ ಜಿಲ್ಲೆಯಲ್ಲಿ ಮೀನುಗಾರಿಕೆಯನ್ನೇ ನಂಬಿಕೊಂಡು ಜೀವನ ಸಾಗಿಸುತ್ತಿದ್ದ ಐದು ಸಾವಿರಕ್ಕೂ ಹೆಚ್ಚು ಕುಟುಂಬಗಳಿಗೆ ಸಂಕಷ್ಟ ಎದುರಾಗಿತ್ತು. ಇದೀಗ ರಾಜ್ಯದಲ್ಲಿ ಲಾಕ್‍ಡೌನ್ ನಡುವೆ ಸಾಂಪ್ರದಾಯಿಕ ಮೀನುಗಾರಿಕೆಗೆ ಸದ್ಯ ಅವಕಾಶ ನೀಡಿದ್ದು ಮೀನುಗಾರರಿಗೆ ಜೀವ ಬಂದಂತಾಗಿದೆ.
Advertisement
Advertisement
ಜಿಲ್ಲೆಯ ಕರಾವಳಿ ತಾಲೂಕುಗಳಾದ ಕಾರವಾರ, ಅಂಕೋಲಾ, ಕುಮಟಾ, ಹೊನ್ನಾವರ ಹಾಗೂ ಭಟ್ಕಳ ತಾಲ್ಲೂಕುಗಳಲ್ಲಿ ಸಾವಿರಾರು ಕುಟುಂಬಗಳು ಅನಾದಿಕಾಲದಿಂದಲೂ ಸಾಂಪ್ರದಾಯಿಕ ಮೀನುಗಾರಿಕೆಯನ್ನೇ ಮಾಡಿಕೊಂಡು ಜೀವನ ಸಾಗಿಸುತ್ತಿವೆ. ಆದರೆ ಲಾಕ್‍ಡೌನ್ ವೇಳೆ ಮೀನುಗಾರಿಕೆಗೆ ನಿರ್ಬಂಧ ವಿಧಿಸಿದ್ದರಿಂದ ಊಟಕ್ಕೆ ಅಕ್ಕಿ ಸಿಗುತ್ತಿದ್ದರೂ ಸಹ ಖರ್ಚು ಮಾಡಲು ಹಣವಿಲ್ಲದೇ ಪರದಾಡುವಂತಾಗಿತ್ತು. ಇದೀಗ ಮೀನುಗಾರಿಕೆಗೆ ಅವಕಾಶ ನೀಡಿದ ಹಿನ್ನೆಲೆ ಸಣ್ಣ ದೋಣಿಗಳು ಮೀನುಗಾರಿಕೆಗೆ ತೆರಳುತ್ತಿದ್ದು ಅವು ಹಿಡಿದು ತಂದ ಮೀನುಗಳನ್ನೇ ಮಾರಾಟಕ್ಕೆ ಕೊಂಡೊಯ್ಯಲಾಗುತ್ತಿದ್ದು ಮೀನುಗಾರರ ಮೊಗದಲ್ಲಿ ಮಂದಹಾಸ ಮೂಡಿದೆ.