ಬೆಂಗಳೂರು: ದೇಶಾದ್ಯಂತ ಲಾಕ್ ಡೌನ್ ಆದೇಶ ಮಾಡಿದ್ರೂ ಜನ ಕ್ಯಾರೇ ಅಂತಿಲ್ಲ. ಮೋದಿ ಆದೇಶದ ಬೆನ್ನಲ್ಲೇ ಎಚ್ಚೆತ್ತುಕೊಂಡ ಪೊಲೀಸ್ ಇಲಾಖೆ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳುತ್ತಿದೆ. ಆದರೂ ಕೆಲವರು ಕುಂಟು ನೆಪಗಳನ್ನು ಹೇಳಿಕೊಂಡು ಮನೆಯಿಂದ ಹೊರಬರುತ್ತಿದ್ದಾರೆ.
ಬುಧವಾರ ತಾತ ತೀರಿಕೊಂಡಿದ್ದಾರೆ. ಅಜ್ಜಿಗೆ ಹುಷಾರಿಲ್ಲ ಅಂತ ಹೇಳಿಕೊಂಡು ಬಂದರೆ, ಇಂದು ವಿವಿಧ ರೀತಿಯ ನೆಪಗಳನ್ನು ಹೇಳಿಕೊಂಡು ತಿರುಗಾಡುತ್ತಿದ್ದಾರೆ. ವಿಜಯನಗರದಲ್ಲಿ ಇಂದು ಇಂತದ್ದೇ ಪ್ರಸಂಗವೊಂದು ನಡೆಯಿತು. ಇಂದು ಎಲ್ಲರೂ ಮಟನ್, ಚಿಕನ್ ತರಲು ರಸ್ತೆಗಿಳಿದರೆ ಇಲ್ಲೊಬ್ಬ ಒಬ್ಬಟ್ಟು ತರಲು ಅಜ್ಜಿ ಮನೆಗೆ ಹೋಗಿದ್ದನಂತೆ. ಕಾರು ಅಡ್ಡ ಹಾಕಿ ವಿಜಯ ನಗರ ಪೊಲೀಸರು ವಿಚಾರಿಸಿದಾಗ ಯುವಕ ಒಬ್ಬಟ್ಟಿನ ಕಥೆ ಹೇಳಿದ್ದಾನೆ.
”ಅಜ್ಜಿ ಒಬ್ಬಟ್ಟು ಕೊಡ್ತೀನಿ ಬಾ ಎಂದು ಹೇಳಿದ್ದರು. ಅದಕ್ಕೆ ಹೋಗಿದ್ದೆ” ಅಂತ ಬಾಕ್ಸ್ ತೋರಿಸಿದ್ದಾನೆ. ಆದರೆ ಬಾಕ್ಸಿನಲ್ಲಿ ಒಂದೇ ಒಂದು ಒಬ್ಬಟ್ಟು ಕಂಡ ಪೊಲೀಸರೇ ಗಲಿಬಿಲಿಯಾಗಿದ್ದಾರೆ. ಇದರಿಂದ ಸಿಟ್ಟಿಗೆದ್ದ ಪೊಲೀಸರು, ಒಂದು ಒಬ್ಬಟ್ಟು ತರೋಕೆ ಕಾರು ತಗೊಂಡು ಅಜ್ಜಿ ಮನೆಗೆ ಹೋಗಿದ್ದೀಯಾ ಎಂದು ಫುಲ್ ಕ್ಲಾಸ್ ತೆಗೆದುಕೊಂಡಿದ್ದಾರೆ. ಅಲ್ಲದೆ ಬುದ್ಧಿ ಹೇಳಿ ಕಳುಹಿಸಿದ್ದಾರೆ. ಇನ್ನೊಮ್ಮೆ ಸುಳ್ಳು ಹೇಳಿಕೊಂಡು ರಸ್ತೆಗಿಳಿದರೆ ಕಾರ್ ಸೀಜ್ ಮಾಡುವುದಾಗಿ ಎಚ್ಚರಿಕೆ ನೀಡಿದ್ದಾರೆ.
ಸದ್ಯ ಇದೀಗ ವಿಜಯನಗರ ಟ್ರಾಫಿಕ್ ಪೊಲೀಸರು ಸಾಲು ಸಾಲು ಗಾಡಿಗಳನ್ನು ಸೀಜ್ ಮಾಡಿದ್ದಾರೆ. ಅನಗತ್ಯವಾಗಿ ರಸ್ತೆಗಳಿದ ವಾಹನ ಸವರರ ಬೈಕ್ ಸೀಜ್ ಮಾಡುತ್ತಿದ್ದಾರೆ. ಆದರೂ ಹಳೆಯ ಲೆಟರ್, ಆರ್ಡರ್ ಕಾಪಿಗಳನ್ನ ತೋರಿಸಿ ಪೊಲೀಸರನ್ನ ಯಾಮಾರಿಸಲು ಯತ್ನಿಸುತ್ತಿದ್ದಾರೆ.