– ಮಹಾರಾಷ್ಟ್ರ ಮಾರುಕಟ್ಟೆಗೆ ನಿರ್ಬಂಧ
ಚಿಕ್ಕಬಳ್ಳಾಪುರ: ಹೂ, ಹಣ್ಣು, ತಾಜಾ ತರಕಾರಿಗಳಿಗೆ ಫೇಮಸ್ ಆಗಿರುವ ಬರದನಾಡು ಚಿಕ್ಕಬಳ್ಳಾಪುರ ಜಿಲ್ಲೆಯ ರೈತರು ಹನಿ ಹನಿ ನೀರುಣಿಸಿ ಬೆಳೆದಿದ್ದ ದ್ರಾಕ್ಷಿ ಬೆಳೆಗೂ ಕೊರೊನಾ ಕಂಟಕ ಎದುರಾಗಿದೆ.
ಕೊರೊನಾ ಎಫೆಕ್ಟ್ ಹಾಗೂ ಮಹಾರಾಷ್ಟ್ರ ಮಾರುಕಟ್ಟೆ ನಿಯಂತ್ರಣದಿಂದ ರಾಜ್ಯದ ದ್ರಾಕ್ಷಿಯನ್ನು ಕೇಳುವವರೇ ಇಲ್ಲದಂತಾಗಿದ್ದು, ಸಾವಿರಾರು ಎಕರೆ ಪ್ರದೇಶದಲ್ಲಿ ಬೆಳೆದ ದ್ರಾಕ್ಷಿ ತೋಟಗಳಲ್ಲೇ ಕೊಳೆಯುವ ಸ್ಥಿತಿ ಎದುರಾಗಿದೆ. ಇದರಿಂದಾಗಿ ಬೆಳೆಗಾರರು ಕಂಗಾಲಾಗಿದ್ದಾರೆ. ಚಿಕ್ಕಬಳ್ಳಾಪುರವೊಂದರಲ್ಲೇ ಸುಮಾರು 3- 4 ಸಾವಿರ ಎಕರೆ ಪ್ರದೇಶದಲ್ಲಿ ಬೆಳದ ತರಹೇವಾರಿ ದ್ರಾಕ್ಷಿಯನ್ನು ಇದೀಗ ಕೇಳುವವರೇ ಇಲ್ಲದಂತಾಗಿದ್ದು, ಮಣ್ಣುಪಾಲಾಗುತ್ತಿವೆ.
Advertisement
Advertisement
ಇದರಿಂದ ಸುಮಾರು 150-200 ಕೋಟಿ ರೂಪಾಯಿ ಮೌಲ್ಯದ ದ್ರಾಕ್ಷಿ ಬೆಳೆ ಹಾನಿಗೊಳಗಾಗುತ್ತಿದೆ. ಬರಪೀಡಿದ ಚಿಕ್ಕಬಳ್ಳಾಪುರ ಜಿಲ್ಲೆಯ ದ್ರಾಕ್ಷಿ ಬೆಳೆಗಾರರು ಹತ್ತಾರು ಕೊಳವೆ ಬಾವಿಗಳನ್ನು ಕೊರೆದು ನೀರು ಸಿಗದೇ ಟ್ಯಾಂಕರ್ ಗಳ ಮೂಲಕ ತೋಟಗಳಿಗೆ ನೀರು ಹಾಯಿಸಿದ್ದರು. ಇದರ ನಡುವೆ ಸಾಲ ಮಾಡಿ ಹನಿ ನೀರಿನಲ್ಲೇ ಸಮೃದ್ಧ ದ್ರಾಕ್ಷಿ ಬೆಳೆದಿದ್ದರು. ಆದರೆ ರಾಜ್ಯದ ದ್ರಾಕ್ಷಿಗೆ ಮಹಾರಾಷ್ಟ್ರ ಮಾರುಕಟ್ಟೆ ನಿಯಂತ್ರಣ ಹೇರಿದೆ. ಇತ್ತ ಮಹಾಮಾರಿ ಕೊರೊನಾ ವೈರಸ್ ಎಫೆಕ್ಟ್ ನಿಂದ ರೈತರು ದ್ರಾಕ್ಷಿ ಕಟಾವು ಮಾಡಲಾಗದೆ ತೋಟಗಳಲ್ಲೇ ಬಿಟ್ಟಿದ್ದಾರೆ.
Advertisement
ಸರ್ಕಾರ ಸ್ಪೀರಿಟ್ ಕಂಪನಿಗಳ ಸ್ಥಾಪನೆಗೆ ಮುಂದಾದರೆ ಸಂಕಷ್ಟಕ್ಕೊಳಗಾದ ದ್ರಾಕ್ಷಿ ಬೆಳೆಗಾರರು ಆತಂಕದಿಂದ ಪಾರಾಗಬಹುದು ಎಂದು ದ್ರಾಕ್ಷಿ ವ್ಯಾಪಾರಿ ನಾರಾಯಣಸ್ವಾಮಿ ಅಳಲು ತೋಡಿಕೊಂಡಿದ್ದಾರೆ. ಅಲ್ಲದೆ ಮಹಾರಾಷ್ಟ್ರದ ಜೊತೆಗೆ ಉತ್ತಮ ನಂಟು ಹೊಂದಿರುವ ತೋಟಗಾರಿಕಾ ಸಚಿವ ನಾರಾಯಣಗೌಡರು ರಾಜ್ಯದ ದ್ರಾಕ್ಷಿ ಬೆಳೆಗಾರರ ನೆರವಿಗೆ ಧಾವಿಸಬೇಕು ಎಂದು ರೈತರು ಮನವಿ ಮಾಡಿಕೊಂಡಿದ್ದಾರೆ.
Advertisement
ಕಳೆದ ಬಾರಿ ಮಹಾರಾಷ್ಟ್ರದಲ್ಲಿ ಸುರಿದ ಭಾರಿ ಮಳೆಗೆ ಅಲ್ಲಿನ ರೈತರು ಯಥೇಚ್ಛವಾಗಿ ದ್ರಾಕ್ಷಿ ಬೆಳೆದಿದ್ದಾರೆ. ಅಲ್ಲದೆ ಕೊರೊನಾ ಎಫೆಕ್ಟ್ ನಿಂದಾಗಿ ಮಹಾರಾಷ್ಟ್ರ ಮಾರುಕಟ್ಟೆ ಪ್ರವೇಶಕ್ಕೆ ರಾಜ್ಯದ ದ್ರಾಕ್ಷಿಗೆ ಕಡಿವಾಣ ಹಾಕಲಾಗಿದೆ. ಇಷ್ಟು ದಿನ ಕೆ.ಜಿಗೆ 60-80 ರೂಪಾಯಿ ಇದ್ದ ದ್ರಾಕ್ಷಿಯನ್ನು ಇದೀಗ 15 ರೂಪಾಯಿಗೂ ಕೇಳೋರಿಲ್ಲದಂತಾಗಿದೆ ಎಂದು ರೈತರು ನೋವು ತೋಡಿಕೊಂಡಿದ್ದಾರೆ.