ಉಡುಪಿ: ರಾಜ್ಯ ಸರ್ಕಾರದ ಆದೇಶಕ್ಕೆ ಉಡುಪಿಯಲ್ಲಿ ಕವಡೆ ಕಾಸಿನ ಕಿಮ್ಮತ್ತಿಲ್ಲದಂತಾಗಿದೆ. ರಾಜ್ಯದಲ್ಲಿ ಕೊರೊನಾ ವೈರಸ್ ಅಟ್ಟಹಾಸ ಮೆರೆಯುತ್ತಿದ್ದು, ಒಂದು ವಾರ ಕರ್ನಾಟಕವನ್ನು ಬಂದ್ ಮಾಡಲು ರಾಜ್ಯ ಸರ್ಕಾರ ಆದೇಶಿಸಿದೆ. ಆದರೆ ಬಿಗ್ ಬಜಾರ್ ಮಾತ್ರ ಬಂದ್ ಆಗಿಲ್ಲ.
Advertisement
ಸಾವಿರಾರು ಮಂದಿ ವ್ಯಾಪಾರ ಮಾಡುವ ಮಾಲ್ ಗಳನ್ನು ಬಂದ್ ಮಾಡಲು ಸರ್ಕಾರ ಆದೇಶಿಸಿದೆ. ಉಡುಪಿಯ ಬಿಗ್ ಬಜಾರ್ ಇದಾವುದಕ್ಕೂ ಕ್ಯಾರೇ ಎನ್ನದೆ ಬಾಗಿಲು ತೆರೆದಿದೆ. ಜನಹಿತ ಕಾಪಾಡುವ ಬದಲು ಶನಿವಾರದ ಭರ್ಜರಿ ವ್ಯಾಪಾರ ಬೇಟೆಯಲ್ಲಿ ತೊಡಗಿದೆ. ಈ ಕುರಿತು ಪ್ರಶ್ನಿಸಿದರೆ, ಜಿಲ್ಲಾಧಿಕಾರಿಗಳಿಂದ ಅಥವಾ ತಹಶೀಲ್ದಾರರಿಂದ ಯಾವುದೇ ಲಿಖಿತ ಆದೇಶ ಬರದೆ ಇರುವುದರಿಂದ ವ್ಯಾಪಾರ ಮಾಡುತ್ತಿದ್ದೇವೆ ಎಂದು ಬಿಗ್ ಬಜಾರ್ ನ ಸಿಬ್ಬಂದಿ ತಿಳಿಸಿದ್ದಾರೆ.
Advertisement
Advertisement
ಬಿಗ್ ಬಜಾರ್ ವಾರಾಂತ್ಯದ ಭರ್ಜರಿ ವ್ಯಾಪಾರ ಮಾಡುವ ಆಲೋಚನೆ ಮಾಡಿದೆ, ಇದಕ್ಕೆ ತಕ್ಕಂತೆ ಸಾರ್ವಜನಿಕರು ಸಹ ಸರಕು ಕೊಳ್ಳಲು ಬಿಗ್ ಬಜಾರ್‍ಗೆ ತೆರಳಿದ್ದಾರೆ. ಈ ಮೂಲಕ ಸಾರ್ವಜನಿಕರು ಸಹ ಸರ್ಕಾರದ ಆದೇಶವನ್ನು ನಿರ್ಲಕ್ಷಿಸಿದ್ದಾರೆ. ಜನಸಂದಣಿ ಉಂಟಾಗುವ ದೊಡ್ಡ ಮಾಲ್ ಗಳಿಗೆ ಸಾರ್ವಜನಿಕರು ಹೋಗಬೇಡಿ ಎಂದು ಸರ್ಕಾರ ಹೇಳಿತ್ತು. ಸ್ವತಃ ಸಿಎಂ ಬಿಎಸ್ ಯಡಿಯೂರಪ್ಪ ಸುದ್ದಿಗೋಷ್ಠಿ ನಡೆಸಿ ಜನರಲ್ಲಿ ವಿನಂತಿ ಮಾಡಿಕೊಂಡಿದ್ದರು. ಆದರೆ ಇದಾವುದನ್ನೂ ಲೆಕ್ಕಿಸದ ಜನ, ನೂರಾರು ಸಂಖ್ಯೆಯಲ್ಲಿ ಬಿಗ್ ಬಜಾರ್ ಮುಂದೆ ಬೆಳಗ್ಗಿನಿಂದಲೇ ಜಮಾಯಿಸಿ ಖರೀದಿಯಲ್ಲಿ ತೊಡಗಿದ್ದಾರೆ. ಜನ ಕಡಿಮೆ ಇರುವ ಸಣ್ಣ ಪುಟ್ಟ ಕಿರಾಣಿ ಅಂಗಡಿಗಳಿಗೆ ಹೋಗುವ ಬದಲು, ಬಿಗ್ ಬಜಾರಿಗೆ ಮುಗಿಬಿದ್ದಿದ್ದಾರೆ.