ಕಲಬುರಗಿ: ಕೊರೊನಾ ವೈರಸ್ ಶಂಕಿತ ಕಲಬುರಗಿಯ 76 ವರ್ಷದ ಮೊಹ್ಮದ್ ಹುಸೇನ್ ಸಿದ್ದಿಕಿ ಸಾವನ್ನಪ್ಪಿದ್ದಾರೆ.
ಫೆಬ್ರವರಿ 29ರಂದು ಸೌದಿಯಿಂದ ವೃದ್ಧ ಮೊಹ್ಮದ್ ಹುಸೇನ್ ಸಿದ್ದಿಕಿ ಕಲಬುರಗಿ ನಗರಕ್ಕೆ ಬಂದಿದ್ದರು. ಮಾರ್ಚ್ 5ರಂದು ಸಿದ್ಧಿಕಿ ಅವರಿಗೆ ಜ್ವರ ಮತ್ತು ಕೆಮ್ಮು ಕಾಣಿಸಿಕೊಂಡ ಹಿನ್ನೆಲೆಯಲ್ಲಿ ನಗರದ ಜಿಮ್ಸ್ ಆಸ್ಪತ್ರೆಗೆ ದಾಖಲಿಸಿದ್ದರು. ನಂತರ ಕೊರೊನಾ ಲಕ್ಷಣಗಳು ಕಂಡು ಬಂದ ಹಿನ್ನೆಲೆಯಲ್ಲಿ ವಿಶೇಷ ವಾರ್ಡ್ ನಲ್ಲಿರಿಸಿ ಚಿಕಿತ್ಸೆ ನೀಡಲಾಗಿತ್ತು.
Advertisement
Advertisement
ಸಿದ್ದಿಕಿ ಅವರ ಗಂಟಲು ದ್ರವ ಸಂಗ್ರಹಿಸಿ ಬೆಂಗಳೂರು ವಿಕ್ಟೋರಿಯಾ ಆಸ್ಪತ್ರೆ ಲ್ಯಾಬ್‍ಗೆ ಕಳಿಸಲಾಗಿತ್ತು. ಆದರೆ ವರದಿಗೂ ಮುನ್ನವೇ ಹೆಚ್ಚಿನ ಚಿಕಿತ್ಸೆಗಾಗಿ ಕುಟುಂಬಸ್ಥರು ಸಿದ್ದಿಕಿಯವರನ್ನು ಹೈದರಾಬಾದ್ ಆಸ್ಪತ್ರೆಗೆ ಶಿಫ್ಟ್ ಮಾಡಿದ್ದರು. ಸಿದ್ದಿಕಿ ಸಾವನ್ನಪ್ಪಿರುವ ಬೆನ್ನಲ್ಲೇ ಅಧಿಕಾರಿಗಳು ಕುಟುಂಬಸ್ಥರ ಆರೋಗ್ಯದ ಮೇಲೆ ನಿಗಾ ಇರಿಸಿದ್ದಾರೆ. ಜಿಲ್ಲೆಯಲ್ಲಿ ಕೊರೊನಾ ವೈರಸ್ ಹರಡದಂತೆ ಜಿಲ್ಲಾಡಳಿತ ಕಟ್ಟೆಚ್ಚರ ವಹಿಸಿದೆ.
Advertisement
Advertisement
ಕೊರೊನಾ ವೈರಸ್ ನಿಂದ ಸಿದ್ದಿಕಿ ಮೃತಪಟ್ಟಿರುವ ಹಿನ್ನೆಲೆಯಲ್ಲಿ ಅಂತ್ಯಕ್ರಿಯೆ ಮುಗಿಯುವವರೆಗೂ ಕಲಬುರಗಿ ತಾಲೂಕು ಆರೋಗ್ಯ ಅಧಿಕಾರಿಗಳಾದ ಡಾ. ಶರಣಬಸಪ್ಪ ಕ್ಯಾತನಾಳ ಹಾಗೂ ಅವರ ತಂಡ ಉಸ್ತುವಾರಿ ವಹಿಸಿಕೊಂಡು ಎಲ್ಲಾ ರೀತಿಯ ಮುಂಜಾಗ್ರತಾ ಮತ್ತು ನಿಯಂತ್ರಣ ಕ್ರಮ ಕೈಗೊಳ್ಳುವುದಾಗಿ ಕಲಬುರಗಿ ಜಿಲ್ಲಾಧಿಕಾರಿ ಅಧಿಕೃತ ಜ್ಞಾಪನಾ ಪತ್ರದಲ್ಲಿ ಉಲ್ಲೇಖಿಸಿದ್ದಾರೆ.
ಭಾರತದಲ್ಲಿ ಕೊರೊನಾ ಪೀಡಿತರ ಸಂಖ್ಯೆ 61ಕ್ಕೆ ಹೆಚ್ಚಳವಾಗಿದೆ. ಈಗಾಗಲೇ ಭಾರತೀಯ ಮೂಲದ ವ್ಯಕ್ತಿಯೊಬ್ಬರು ಬ್ರಿಟನ್ ನಲ್ಲಿ ಮೃತಪಟ್ಟಿದ್ದಾರೆ. ಇತ್ತ ಪುಣೆಯಲ್ಲಿ ಮತ್ತೆ ಮೂರು ಹೊಸ ಪ್ರಕರಣಗಳು ಪತ್ತೆಯಾಗಿದ್ದು, ಕೇರಳದಲ್ಲಿ 12 ಜನಕ್ಕೆ ತಗುಲಿದ್ದ ಕೊರೊನಾ ಒಂದೇ ದಿನದಲ್ಲಿ 19ಕ್ಕೆ ಹೆಚ್ಚಾಗಿದೆ. ನಿನ್ನೆಯಷ್ಟೇ ಸಿಎಂ ಪಿಣರಾಯಿ ವಿಜಯನ್ ಅವರು ಸಭೆ ನಡೆಸಿ ಕೈಗೊಳ್ಳಬೇಕಾದ ಕ್ರಮಗಳ ಬಗ್ಗೆ ಚರ್ಚಿಸಿ, 7ನೇ ತರಗತಿವರೆಗೆ ಎಲ್ಲ ಶಾಲೆಗಳಿಗೆ ರಜೆ ಘೋಷಿಸಿದ್ದರು. ಅಲ್ಲದೆ ಮಾ.31ರ ವರೆಗೆ ಚಿತ್ರಮಂದಿರಗಳನ್ನು ಬಂದ್ ಮಾಡುವ ಕುರಿತು ಕೂಡ ಸರ್ಕಾರ ನಿರ್ಧಾರ ಕೈಗೊಂಡಿದೆ.