Bengaluru City
ವಿಧಾನಸೌಧಕ್ಕೂ ಕೊರೊನಾ ಆತಂಕ- ಇಂದಿನಿಂದ ಸಾರ್ವಜನಿಕರಿಗೆ ಕಲಾಪ ವೀಕ್ಷಣೆ ಬಂದ್

ಬೆಂಗಳೂರು: ಕೊರೊನಾ ಆತಂಕ ವಿಧಾನಸೌಧಕ್ಕೂ ಕಾಲಿಟ್ಟಿದೆ. ವಿಧಾನಸಭೆ ಕಲಾಪ ವೀಕ್ಷಿಸಲು ಬರುವ ಸಾರ್ವಜನಿಕರಿಗೆ ಇಂದಿನಿಂದ ಪ್ರವೇಶಕ್ಕೆ ನಿಷೇಧ ಹೇರಲಾಗಿದೆ. ಇಂದಿನಿಂದ 4 ದಿನಗಳ ಕಾಲ ಅಂದರೆ ಮಾರ್ಚ್ 17 ರಿಂದ 20 ರವರೆಗೆ ಸಾರ್ವಜನಿಕರಿಗೆ ನಿಷೇಧ ಹೇರಿ ಸ್ಪೀಕರ್ ವಿಶ್ವೇಶ್ವರ ಕಾಗೇರಿ ಆದೇಶಿಸಿದ್ದಾರೆ.
ಈ ಹಿನ್ನೆಲೆಯಲ್ಲಿ ವಿಧಾನಸೌಧದಲ್ಲಿ ಇಂದು ಕೆಲವಷ್ಟೇ ಸಾರ್ವಜನಿಕರು ಬಂದಿದ್ರು. ವಿಧಾನಸಭೆ ಪ್ರೇಕ್ಷಕರ ಗ್ಯಾಲರಿಯಂತೂ ಖಾಲಿ ಖಾಲಿಯಾಗಿತ್ತು. ಸ್ಪೀಕರ್ ಗ್ಯಾಲರಿಯೂ ಖಾಲಿ ಇತ್ತು. ನಿನ್ನೆ ಸದನದಲ್ಲಿ ಈ ಕುರಿತು ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ ಪ್ರಕಟಣೆ ಹೊರಡಿಸಿದ್ದರು.
ಕೊರೊನಾ ಹಿನ್ನೆಲೆಯಲ್ಲಿ ನಾಲ್ಕು ದಿನಗಳ ಕಾಲ ಗ್ಯಾಲರಿಗೆ ಸಾರ್ವಜನಿಕರ ಪ್ರವೇಶ ನಿಷೇಧಿಸಲಾಗಿದೆ. ಶಾಸಕರು ಹಾಗೂ ಸಚಿವರು ಸಹ ಗ್ಯಾಲರಿ ಪ್ರವೇಶ ಕೋರಿ ಮನವಿ ಸಲ್ಲಿಸಬಾರದು. ಪಾಸ್ ಸಹ ವಿತರಿಸಬಾರದು ಎಂದು ಸ್ಪೀಕರ್ ಕಾಗೇರಿ ಸೋಮವಾರ ಹೇಳಿದ್ದರು.
