-ಕಲಬುರಗಿ ಬಸ್ ನಿಲ್ದಾಣ ಖಾಲಿ ಖಾಲಿ
-ಧಾರವಾಡದಿಂದ 15 ಸಾವಿರ ವಿದ್ಯಾರ್ಥಿಗಳು ಊರಿಗೆ ಪ್ರಯಾಣ
ಬೆಂಗಳೂರು: ಕೊರೊನಾ ವೈರಸ್ ಮಹಾಮಾರಿ ಇಡೀ ಕರುನಾಡು ಭಾಗರ್ಶ ಸ್ತಬ್ಧವಾಗಿದೆ. ಕಲಬುರಗಿ ಮತ್ತೋರ್ವನಿಗೆ ಕೊರೊನಾ ದೃಢಪಡುತ್ತಿದ್ದಂತೆ ಜನತೆ ಆತಂಕದಲ್ಲಿದ್ದಾರೆ. ಕಲಬುರಗಿ ಜಿಲ್ಲೆಯಲ್ಲಿ ಸೆಕ್ಷನ್ 133 ಜಾರಿಯಾಗಿದ್ದು, ಜನರಿಗೆ ಮನೆಯಿಂದ ಹೊರ ಬರದಂತೆ ಜಿಲ್ಲಾಧಿಕಾರಿ ಬಿ.ಶರತ್ ಮನವಿ ಮಾಡಿಕೊಂಡಿದ್ದಾರೆ.
Advertisement
ಕಲಬುರಗಿ: ಜಿಲ್ಲಾಡಳಿತದ ಕಟ್ಟು ನಿಟ್ಟಿನ ಆದೇಶಕ್ಕೆ ತಲೆ ಬಾಗಿದ ಕಲಬುರಗಿ ಜನತೆ ಮನೆಯಿಂದ ಹೊರ ಬರುತ್ತಿಲ್ಲ. ಹೀಗಾಗಿ ನಗರ ಸ್ತಬ್ಧವಾಗಿದೆ. ಅಲ್ಲದೆ ನಗರಕ್ಕೆ ಸದ್ಯ ಯಾರು ಬರಬೇಡಿ ಮತ್ತು ಹೊರಗಡೆ ಹೋಗಬೇಡಿ ಅಂತ ಜಿಲ್ಲಾಧಿಕಾರಿ ಆದೇಶ ನೀಡಿದ್ದಾರೆ. ಹೀಗಾಗಿ ನಗರದಲ್ಲಿ ಬಸ್ ಸಂಚಾರ ತೀರಾ ಕಡಿಮೆ ಮಾಡಲಾಗಿದೆ. ಇನ್ನೂ ಬೇರೆ ಕಡೆಯಿಂದ ಜಿಲ್ಲೆಗೆ ಬರುತ್ತಿರುವ ಬಸ್ ಗಳನ್ನು ಹೊರತುಪಡಿಸಿ, ಬೇರೆ ಯಾವ ಬಸ್ ಗಳು ಸಹ ಸಂಚಾರ ಮಾಡುತ್ತಿಲ್ಲ. ಹೀಗಾಗಿ ಕೇಂದ್ರದ ಬಸ್ ನಿಲ್ದಾಣ ಬಿಕೋ ಎನ್ನುತ್ತಿದೆ.
Advertisement
Advertisement
ಕಲಬುರಗಿ ನಗರದಿಂದ ಬೇರೆ ಪ್ರದೇಶಗಳಿಗೆ ತೆರಳುವ ರೈಲುಗಳ ಸಂಖ್ಯೆಗಳನ್ನು ತಗ್ಗಿಸುವ ಚಿಂತನೆ ಸಹ ಮಾಡಲಾಗುತ್ತಿದೆ. ಇದರ ಮಧ್ಯೆ ಪ್ರಯಾಣಿಕರ ಸಂಖ್ಯೆ ಸಹ ಕುಸಿತ ಕಂಡಿದೆ. ಹೊರ ರಾಜ್ಯ ಮತ್ತು ಜಿಲ್ಲೆಗಳಿಂದ ಬರುವ ಪ್ರಯಾಣಿಕರ ಸ್ಕ್ರೀನ್ ಮಾಡಲಾಗುತ್ತಿದೆ.
Advertisement
ಧಾರವಾಡ: ಕೊರೊನಾ ಭಯಕ್ಕೆ ಧಾರವಾಡದ ಹಾಸ್ಟೇಲ್ ವಿದ್ಯಾರ್ಥಿಗಳು ಜಾಗ ಖಾಲಿ ಮಾಡಿದ್ದಾರೆ. ಧಾರವಾಡ ನಗರದ ಸಪ್ತಾಪೂರದಲ್ಲಿ ಬಹುತೇಕ ಕೋಚಿಂಗ್ ಕ್ಲಾಸ್‍ಗಳಿವೆ. ಆದರೆ ಆ ಕ್ಲಾಸ್ ಗಳೆಲ್ಲವೂ ಈಗ ಬಂದ್ ಮಾಡಲಾಗಿದ್ದು, ಸದ್ಯ ವಿದ್ಯಾರ್ಥಿಗಳು ತಮ್ಮ ತಮ್ಮ ಊರಿಗೆ ವಾಪಸ್ ಆಗುತ್ತಿದ್ದಾರೆ. ಮಹಾಮಾರಿ ಕೊರೊನಾ ಭಯದಿಂದ ಎಲ್ಲ ಕೋಚಿಂಗ್ ಕ್ಲಾಸಿನ ಮಾಲೀಕರು ವಿದ್ಯಾರ್ಥಿಗಳಿಗೆ ತಮ್ಮ ಊರಿಗೆ ವಾಪಸ್ ಆಗಲು ಹೇಳಿದ್ದಾರೆ. ಎರಡೇ ದಿನಗಳಲ್ಲಿ ಸಪ್ತಾಪೂರ ಬಡಾವಣೆಯಿಂದ 15 ಸಾವಿರ ವಿದ್ಯಾರ್ಥಿಗಳು ಕಾಲ್ಕಿತ್ತಿದ್ದಾರೆ. ಇನ್ನೂ ಕೆಲವು ವಿದ್ಯಾರ್ಥಿಗಳು ಇಂದು ಹಾಗೂ ನಾಳೆ ನಗರದಿಂದ ತೆರಳಲಿದ್ದಾರೆ.
ಚಾಮರಾಜನಗರ: ಗಡಿ ಜಿಲ್ಲೆ ಚಾಮರಾಜನಗರದಲ್ಲಿ ಕೊರೊನಾ ಭೀತಿ ಹಿನ್ನೆಲೆಯಲ್ಲಿ ಚೆಕ್ ಪೋಸ್ಟ್ ನಲ್ಲಿ ಹೊರರಾಜ್ಯದಿಂದ ಬರುವ ಪ್ರಯಾಣಿಕರ ಮೇಲೆ ಹದ್ದಿನ ಕಣ್ಣಿಡಲಾಗಿದೆ. ಆದರಲ್ಲೂ ಕೇರಳ, ತಮಿಳುನಾಡಿನಿಂದ ಬರುವ ಪ್ರಯಾಣಿಕರ ಮೇಲೆ ನಿಗಾ ವಹಿಸಿದ್ದು ಕಾರು, ಬಸ್ಸು, ಬೈಕಿನಿಂದ ಬರುವ ವ್ಯಕ್ತಿಗಳ ತಪಾಸಣೆ ನಡೆಸ್ತಿದ್ದಾರೆ. ಇದರ ಜೊತೆಗೆ ಕೊರೊನಾ ಬಗ್ಗೆ ಜಾಗೃತಿ ಮೂಡಿಸುತ್ತಿದ್ದಾರೆ. ಜಾಗೃತಿ ಕಾರ್ಯದಲ್ಲಿ ಆರೋಗ್ಯ ಇಲಾಖೆ ಜೊತೆಗೆ ಪೊಲೀಸ್ ಇಲಾಖೆ ಕೂಡ ಕೈ ಜೋಡಿಸಿದೆ.
ಮೈಸೂರು: ನಗರದ ಪ್ರಮುಖ ವಾಯು ವಿಹಾರ ಕೇಂದ್ರವಾದ ಲಿಂಗಾಂಬುದಿ ಪಾಳ್ಯ ಕೆರೆ ಪ್ರವೇಶಕ್ಕೆ ನಿಷೇಧ ಹೇರಲಾಗಿದೆ. ಸರ್ಕಾರದ ನಿರ್ದೇಶನದಂತೆ ಸಾರ್ವಜನಿಕ ಪ್ರವೇಶ ನಿಷೇಧಿಸಲಾಗಿದ್ದು, ಇನ್ನೂ ಒಂದು ವಾರ ಕಾಲ ಕೆರೆ ಏರಿ ಮೇಲೆ ಯಾರು ವಾಕಿಂಗ್ ಮಾಡುವಂತಿಲ್ಲ. ಹೀಗಾಗಿ ವಾಯುವಿಹಾರಿಗಳಿಗೂ ಕೊರೋನಾದ ಏಫೆಕ್ಟ್ ತಟ್ಟಿದೆ. ಕಳೆದ ಕೆಲ ದಿನಗಳಿಂದ ಮೈಸೂರಿನ ಪ್ರವಾಸೋದ್ಯಮಕ್ಕೆ ಭಾರೀ ಹೊಡೆತ ಬಿದ್ದಿದ್ದು, ಪ್ರವಾಸಿಗರ ಸಂಖ್ಯೆ ಗಣನೀಯವಾಗಿ ಇಳಿಕೆಯಾಗಿದೆ.
ಬೀದರ್: ಸರ್ಕಾರ ಮುನ್ನೆಚ್ಚರಿಕೆ ಕ್ರಮವಾಗಿ ಉದ್ಯಾನವನ ಸೇರಿದಂತೆ ಹೆಚ್ಚು ಜನರು ಸೇರುವ ಪ್ರದೇಶಗಳನ್ನು ಬಂದ್ ಮಾಡಿದೆ. ಆದ್ರೆ ಬೀದರ್ ನಗರದ ಬರಿದ್ ಶಾಹಿ ಉದ್ಯಾನವನದಲ್ಲಿ ಪ್ರತಿದಿನ ಸಾವಿರಾರು ಜನ ಸೇರುತ್ತಿದ್ದರು. ಇಂದು ಸಹ ಸರ್ಕಾರ ಆದೇಶಕ್ಕೆ ಗೌರವ ನೀಡದೇ ಎಂದಿನಂತೆ ವ್ಯಾಯಾಮ ಮತ್ತು ಯೋಗಾಸನಗಳಲ್ಲಿ ತೊಡಗಿಕೊಂಡಿದ್ದಾರೆ. ಉದ್ಯಾನವನ ಮುಂದೆ ನಾಮಫಲಕ ಹಾಕಿ ಬಂದ್ ಮಾಡಿದ್ರೂ, ಯಾವುದನ್ನ ಲೆಕ್ಕಿಸದ ಸಾರ್ವಜನಿಕರು ಒಂದೆಡೆ ಸೇರಿ ವ್ಯಾಯಾಮ ಮಾಡುತ್ತಿದ್ದಾರೆ.
ಶಿವಮೊಗ್ಗ: ಪ್ರತಿದಿನ ಭಾರೀ ಸಂಖ್ಯೆಯಲ್ಲಿ ಪ್ರಯಾಣಿಕರು ಸಾರಿಗೆ ಬಸ್ ನಲ್ಲಿ ಪ್ರಯಾಣಿಸುತ್ತಿದ್ದರು. ಆದರೆ ಕೊರೊನಾ ಭೀತಿಯಿಂದಾಗಿ ಶಿವಮೊಗ್ಗದ ಬಸ್ ನಿಲ್ದಾಣ ಖಾಲಿ ಖಾಲಿಯಾಗಿದೆ. ಪ್ರಯಾಣಿಕರಿಲ್ಲದೇ ಬಿಕೋ ಎನ್ನುತ್ತಿದೆ. ಪ್ರಯಾಣಿಕರಿಲ್ಲದಿದ್ದರೂ ಸಾರಿಗೆ ಇಲಾಖೆ ಸಂಚಾರದಲ್ಲಿ ಯಾವುದೇ ವ್ಯತ್ಯಯ ಉಂಟಾಗಿಲ್ಲ. ಬಸ್ ಗಳು ಎಂದಿನಂತೆ ಖಾಲಿ ಖಾಲಿಯಾಗಿಯೇ ಸಂಚರಿಸುತ್ತಿವೆ.
ಇದೇ ರೀತಿ ಉಡುಪಿ, ದಕ್ಷಿಣ ಕನ್ನಡ, ಚಿಕ್ಕಮಗಳೂರು, ವಿಜಯಪುರ, ಬಾಗಲಕೋಟೆ, ಉತ್ತರ ಕನ್ನಡ ಹೀಗೆ ರಾಜ್ಯದ ಎಲ್ಲ ಜಿಲ್ಲೆಗಳಲ್ಲಿ ಬಂದ್ ವಾತಾವರಣ ನಿರ್ಮಾಣವಾಗಿದೆ. ಕೊರೊನಾ ಭೀತಿಯಿಂದ ಜನತೆ ಆತಂಕಕ್ಕೊಳಗಾಗಿದ್ದಾರೆ.