– ಸೋಂಕಿನ ಭೀತಿಯಲ್ಲೂ ಖದೀಮರ ಕೈಚಳಕ
ಪ್ಯಾರಿಸ್: ಚೀನಾದಲ್ಲಿ ಮರಣ ಮೃದಂಗ ಬಾರಿಸುತ್ತಿರುವ ಮಹಾಮಾರಿ ಕೊರೋನಾ ವೈರಸ್ ವಿಶ್ವದಾದ್ಯಂತ ಹರಡುತ್ತಿದೆ. ವೈರಸ್‍ಗೆ ಹೆದರಿ ಜನರು ಮಾಸ್ಕ್‌ಗಳ ಮೊರೆ ಹೊಗುತ್ತಿದ್ದಾರೆ. ಆದರೆ ಕೊರೊನಾ ವೈರಸ್ ಸೋಂಕಿತ ದೇಶಗಳಲ್ಲಿ ಮಾಸ್ಕ್‌ಗಳಿಗಾಗಿ ಹಾಹಾಕಾರ ಶುರುವಾಗಿದೆ. ಇದನ್ನೇ ಲಾಭವನ್ನಾಗಿಸಿಕೊಂಡ ಖದೀಮರು ಕೊರೊನಾ ಭೀತಿ ನಡುವೆಯೂ ಮಾಸ್ಕ್‌ಗಳ ಕಳ್ಳತನ ಆರಂಭಿಸಿದ್ದಾರೆ.
ದಕ್ಷಿಣ ಫ್ರೆಂಚ್ ನಗರದ ಮಾರ್ಸಿಲ್ಲೆಯಲ್ಲಿ ಈ ಘಟನೆ ನಡೆದಿದೆ. ಮಾರ್ಸಿಲ್ಲೆಯ ಆಸ್ಪತ್ರೆಯಲ್ಲಿ ಖದೀಮರು 2 ಸಾವಿರ ಮಾಸ್ಕ್‌ಗಳ ಕಳ್ಳತನ ಮಾಡಿದ್ದಾರೆ. ಆಸ್ಪತ್ರೆ ಸಿಬ್ಬಂದಿ ಹಾಗೂ ರೋಗಿಗಳಿಗೆ ನೀಡಲಾಗುತ್ತಿದ್ದ ಮಾಸ್ಕ್‌ಗಳನ್ನು ಕಳ್ಳತನ ಮಾಡಲಾಗಿದೆ ಎಂದು ಆಸ್ಪತ್ರೆಯ ಮೂಲಗಳು ತಿಳಿಸಿವೆ.
ಮಾಸ್ಕ್‌ಗಳು ಕಳ್ಳತನವಾಗಿರುವ ಹಿನ್ನೆಲೆ ಆಸ್ಪತ್ರೆಯ ಅಧಿಕಾರಿಗಳು ಆಂತರಿಕ ತನಿಖೆ ಆರಂಭಿಸಿದ್ದಾರೆ ಎನ್ನಲಾಗಿದೆ. ಸದ್ಯದ ಪರಿಸ್ಥಿತಿ ನಿಭಾಯಿಸಲು ಅಗತ್ಯ ಮಾಸ್ಕ್‌ಗಳು ಆಸ್ಪತ್ರೆಯಲ್ಲಿದೆ. ಇಷ್ಟು ದಿನ ಕೊರೊನಾ ಸೋಂಕಿತರ ಬಗ್ಗೆ ತಲೆಕೆಡಿಸಿಕೊಂಡಿದ್ದ ಆಸ್ಪತ್ರೆ ಸಿಬ್ಬಂದಿಗೆ ಇದೀಗ ಮಾಸ್ಕ್ ಹಾಗೂ ಸ್ಯಾನಿಟೈಸಿಂಗ್ ಹ್ಯಾಂಡ್ ಜೆಲ್‍ಗಳನ್ನು ರಕ್ಷಣೆ ಮಾಡುವುದೇ ತಲೆನೋವಾಗಿ ಬಿಟ್ಟಿದೆ. ಆದ್ದರಿಂದ ಈ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳುವುದಾಗಿ ಅಧಿಕಾರಿಗಳು ಹೇಳಿದ್ದಾರೆ.
ಮಹಾಮಾರಿ ಕೊರೊನಾ ಫ್ರೆಂಚ್‍ನಲ್ಲಿ ಈವರೆಗೆ 4 ಮಂದಿಯನ್ನು ಬಲಿಪಡೆದಿದೆ. 204 ಮಂದಿಗೆ ಸೋಂಕು ತಗುಲಿರುವುದು ದೃಢಪಟ್ಟಿದೆ. ಈ ಹಿಂದೆ ಜಪಾನ್‍ನ ಪಶ್ಚಿಮ ನಗರ ಕೋಬೆಯ ಆಸ್ಪತ್ರೆಯಲ್ಲಿ ಖದೀಮರು 6 ಸಾವಿರ ಮಾಸ್ಕ್‌ಗಳ ಮೇಲೆ ಕಣ್ಣಾಕಿದ್ದರು.
ಈವರೆಗೆ ಚೀನಾದಲ್ಲಿ 2,981 ಮಂದಿ ಕೊರೊನಾ ವೈರಸ್‍ಗೆ ಬಲಿಯಾಗಿದ್ದಾರೆ. 80,270 ಮಂದಿಗೆ ಕೊರೊನಾ ತಗುಲಿದ್ದು, ಸುಮಾರು 49,856 ಸೋಂಕಿತ ರೋಗಿಗಳು ಗುಣಮುಖರಾಗಿ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾರೆ.