ಚಿಕ್ಕಮಗಳೂರು: ದಿನದಿಂದ ದಿನಕ್ಕೆ ಕೊರೊನಾ ಸೋಂಕಿತರ ಸಂಖ್ಯೆ ಹಾಗೂ ಜನರ ಆತಂಕ ಹೆಚ್ಚಾಗ್ತಾನೆ ಇದೆ. ಈ ಹಿನ್ನೆಲೆ ಸರ್ಕಾರ ಕೂಡ ಪ್ರವಾಸಿ ತಾಣಗಳಿಗೆ ನಿಷೇಧ ಹೇರಿದೆ. ಹೋಮ್ ಸ್ಟೇ, ರೆಸಾರ್ಟ್ ಗಳನ್ನು ಏಪ್ರಿಲ್ 15ರ ತನಕ ಬಂದ್ ಮಾಡುವಂತೆ ಆದೇಶಿಸಲಾಗಿದೆ. ಆದರೆ ಕಾಫಿನಾಡಿಗೆ ಬರ್ತಿರೋ ಪ್ರವಾಸಿಗರ ಸಂಖ್ಯೆ ಇಳಿಮುಖವಾಗಿಲ್ಲ. ಹೀಗಾಗಿ ಬಂದ ಪ್ರವಾಸಿಗರನ್ನು ಕೈಮರ ಚೆಕ್ ಪೋಸ್ಟ್ ನಲ್ಲಿ ವಾಪಸ್ ಕಳುಹಿಸಲಾಗುತ್ತಿದೆ.
ದೂರದಿಂದ ಬಂದಿದ್ದೇವೆ, ಮುಳ್ಳಯ್ಯನಗಿರಿ, ಸೀತಾಳಯ್ಯನಗಿರಿ, ದತ್ತಪೀಠಕ್ಕೆ ಹೋಗುತ್ತಿದ್ದೇವೆ, ಬೇಗ ಹೋಗಿ ಬರುತ್ತೇವೆ ಎಂದು ಚೆಕ್ ಪೋಸ್ಟ್ ಸಿಬ್ಬಂದಿ ಬಳಿ ಪ್ರವಾಸಿಗರು ಗೋಗರೆದರು. ಆದರೆ ಸ್ಥಳದಲ್ಲೇ ಬೀಡು ಬಿಟ್ಟಿರೋ ಚೆಕ್ ಪೋಸ್ಟ್ ಸಿಬ್ಬಂದಿ ಹಾಗೂ ಪೊಲೀಸರು ಯಾರೊಬ್ಬರನ್ನೂ ಒಳಗೆ ಬಿಡುತ್ತಿಲ್ಲ. ಇನ್ನೊಂದು ತಿಂಗಳು ಬರಬೇಡಿ ಎಂದು ವಾಪಸ್ ಕಳುಹಿಸುತ್ತಿದ್ದಾರೆ.
ಬುಧವಾರ ಕೂಡ ಸುಮಾರು 50ಕ್ಕೂ ಹೆಚ್ಚು ವಾಹನಗಳು ಬಂದಿವೆ. ಹಾವೇರಿ, ಬಾಗಲಕೋಟೆ, ಚಿತ್ರದುರ್ಗದಿಂದ ಬಂದಿದ್ದೇವೆ ಎಂದು ಸಿಬ್ಬಂದಿಗಳ ಮನವೊಲಿಕೆಗೆ ಯತ್ನಿಸಿದ್ದಾರೆ. ಆದರೆ ಸಿಬ್ಬಂದಿ ಗಿರಿಭಾಗದಲ್ಲಿ ವಾಸವಿರೋರಿಗೆ ಮಾತ್ರ ಓಡಾಟಕ್ಕೆ ಅವಕಾಶ ಕಲ್ಪಿಸಿದ್ದು, ಬೇರೆ ಯಾರಿಗೂ ಅವಕಾಶ ಕಲ್ಪಿಸುತ್ತಿಲ್ಲ.
ಯಾರೂ ಎಲ್ಲೂ ಹೋಗ್ಬೇಡಿ, ಅನಗತ್ಯ ಪ್ರವಾಸ ರದ್ದುಗೊಳಿಸಿ, ಮನೆಯಲ್ಲೇ ಇರಿ ಎಂದು ಸರ್ಕಾರ ಹಾಗೂ ಜಿಲ್ಲಾಡಳಿತ ಸೂಚಿಸಿದೆ. ಮುಂಜಾಗೃತಾ ಕ್ರಮವಾಗಿ ಸರ್ಕಾರ ರಜೆ ನೀಡಿದೆ. ಆದರೆ ಪ್ರವಾಸಿಗರು ಕಾಫಿನಾಡಿಗೆ ಬರ್ತಾನೆ ಇದ್ದಾರೆ. ಬಂದವರು ಅಲ್ಲಿಂದ ಬಂದ್ವಿ, ಇಲ್ಲಿಂದ ಬಂದ್ವಿ ಅಂತ ಸಪ್ಪೆ ಮುಖ ಹಾಕ್ಕೊಂಡು ವಾಪಸ್ ಹೋಗುತ್ತಿದ್ದಾರೆ.