ಬೆಳಗಾವಿ: ಹಿರೇಬಾಗೇವಾಡಿ ಗ್ರಾಮದಲ್ಲಿ ಸೋಂಕಿತರ ಸಂಖ್ಯೆ ಹೆಚ್ಚುತ್ತಿದ್ದು, 36ಕ್ಕೆ ಏರಿಕೆಯಾಗಿದೆ. ಗ್ರಾಮದಲ್ಲಿ ಜನಜೀವನ ಅಸ್ತವ್ಯಸ್ತವಾಗಿದೆ. ಇನ್ನೊಂದೆಡೆ ಮೂಲಭೂತ ಸೌಕರ್ಯಗಳ ಕೊರತೆ ಕಾಡುತ್ತಿದೆ ಎಂದು ಶಾಸಕಿ ಲಕ್ಷ್ಮಿ ಹೆಬ್ಬಾಳ್ಕರ್ ಅಳಲು ತೋಡಿಕೊಂಡಿದ್ದಾರೆ.
ಈ ಕುರಿತು ಮಾತನಾಡಿರುವ ಅವರು, ಗ್ರಾಮದಲ್ಲಿ ಮೂಲಭೂತ ಸೌಕರ್ಯದ ಕೊರತೆ ಉಂಟಾಗಿದೆ. ಹಿರೇಬಾಗೇವಾಡಿ ಗ್ರಾಮ ಸಂಪೂರ್ಣವಾಗಿ ಸೀಲ್ ಡೌನ್ ಮಾಡಿದ್ದು, ಜನರಿಗೆ ಸಮಸ್ಯೆ ಎದುರಾಗಿದೆ. ಕೇವಲ ಅಕ್ಕಿ, ಗೋಧಿಯಿಂದ ಜೀವನ ಆಗಲ್ಲ. ಅನೇಕ ಸಾಮಗ್ರಿಗಳನ್ನು ನೀಡಬೇಕು. ಗ್ರಾಮದಲ್ಲಿ ಯಾರೊಬ್ಬರಿಗೂ ಸೋಂಕಿನ ಲಕ್ಷಣ ಇಲ್ಲ. ಆದರೆ ಸೋಂಕಿತರ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಗ್ರಾಮದಲ್ಲಿ ದೈನಂದಿನ ಜೀವನ ನಡೆಸುವುದು ಕಷ್ಟ ಆಗಿದೆ. ಜನರಲ್ಲಿ ಅನಾಥ ಪ್ರಜ್ಞೆ ಕಾಡುತ್ತಿದೆ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.
ಗ್ರಾಮದಲ್ಲಿ ಸೋಂಕಿತರ ಸಂಖ್ಯೆ 36ಕ್ಕೆ ಏರಿಕೆಯಾಗಿರುವುರಿಂದ ಜನರಲ್ಲಿ ಆತಂಕ ಮನೆಮಾಡಿದೆ. ನಾನೂ ನಾಲ್ಕು ಬಾರಿ ಗ್ರಾಮಕ್ಕೆ ಭೇಟಿ ನೀಡಿದ್ದೇನೆ. ಅನೇಕ ಸಲ ಭೇಟಿ ನೀಡಿ ಸಭೆ ಮಾಡಿದ್ದೇನೆ. ಗ್ರಾಮದ ಅನಾರೋಗ್ಯ ಪೀಡಿತರು ನಿತ್ಯ ಫೋನ್ ಮಾಡಿ ಅಳಲು ತೋಡಿಕೊಳ್ಳುತ್ತಿದ್ದಾರೆ. ಗ್ರಾಮದಲ್ಲಿ ಜಾನುವಾರುಗಳಿಗೆ ಮೇವು ಸಹ ಇಲ್ಲ. ಗ್ರಾಮದ ಸಮಸ್ಯೆ ಬಗೆಹರಿಸಬೇಕು ಎಂದು ಡಿಸಿ, ಉಸ್ತುವಾರಿ ಕಾರ್ಯದರ್ಶಿ ಗಮನಕ್ಕೆ ತಂದಿದ್ದೇನೆ. ತಕ್ಷಣಕ್ಕೆ ಗ್ರಾಮದಲ್ಲಿ ಹಾಲು ಪೂರೈಕೆಯಾಗಬೇಕು. ಈ ಕುರಿತು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರಿಗೆ ಪತ್ರ ಬರೆದಿದ್ದೇನೆ ಎಂದು ಮಾಹಿತಿ ನೀಡಿದರು.
ಕೇವಲ ಅಕ್ಕಿ, ಗೋಧಿಯಿಂದ ಜೀವನ ನಡೆಸಲು ಸಾಧ್ಯವಿಲ್ಲ. 600 ಜನ ಉದ್ಯೋಗ ಖಾತರಿಯಲ್ಲಿ ಕೆಲಸ ಮಾಡುವವರಿದ್ದಾರೆ. ಜಿಲ್ಲಾಧಿಕಾರಿಗಳು ಈವರೆಗೆ ಗ್ರಾಮಕ್ಕೆ ಭೇಟಿ ನೀಡಿಲ್ಲ. ಈ ಬಗ್ಗೆ ಗ್ರಾಮದ ಮುಖಂಡರು ನಮ್ಮ ಗಮನಕ್ಕೆ ತಂದಿದ್ದಾರೆ. ಅನಾಥ ಪ್ರಜ್ಞೆ ತೊಲಗಿಸಿ, ಜನರಲ್ಲಿ ಧೈರ್ಯ ತುಂಬಬೇಕು. ತಬ್ಲಿಘಿಗಳು ಮೊದಲು ಹೊರ ಬರಲಿಲ್ಲ. ಹೀಗಾಗಿ ಗ್ರಾಮದಲ್ಲಿ ಸೋಂಕು ತೀವ್ರವಾಗಿ ಹರಿಡಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ. ಆದರೆ ನನಗೆ ಬಂದಿರೋ ಮಾಹಿತಿ ಪ್ರಕಾರ 35 ಜನರನ್ನು ಸಾಮೂಹಿಕ ಕ್ವಾರಂಟೈನ್ ಮಾಡಿದ್ದಾರೆ. ಇದರಿಂದ ಗ್ರಾಮದಲ್ಲಿ ಸೋಂಕು ತೀವ್ರವಾಗಿ ಹರಿಡಿದೆ. ಆದರೆ ಈ ಆರೋಪವನ್ನು ಜಿಲ್ಲಾಧಿಕಾರಿ ತಳ್ಳಿ ಹಾಕಿದ್ದಾರೆ. ಗ್ರಾಮದಲ್ಲಿ ಶೀಘ್ರದಲ್ಲೇ ರ‍್ಯಾಪಿಡ್ ಟೆಸ್ಟ್ ನಡೆಸಬೇಕು. ಸರ್ಕಾರವೇ ಗ್ರಾಮದಲ್ಲಿ ತರಕಾರಿ, ದಿನಸಿ ಸರಬರಾಜು ಮಾಡಬೇಕು ಎಂದು ಲಕ್ಷ್ಮಿ ಹೆಬ್ಬಾಳ್ಕರ್ ಆಗ್ರಹಿಸಿದ್ದಾರೆ.