ರಾಮನಗರ: ಮಹಾಮಾರಿ ಕೊರೊನಾ ವೈರಸ್ ದೇಶಾದ್ಯಂತ ವ್ಯಾಪಿಸಿದ್ದು, ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿಯವರ ಪುತ್ರ ನಿಖಿಲ್ ಕುಮಾರಸ್ವಾಮಿ ವಿವಾಹ ಕಾರ್ಯಕ್ರಮಕ್ಕೂ ಇದರ ಬಿಸಿ ತಟ್ಟಿದೆ. ಹೀಗಾಗಿ ವಿವಾಹ ಕಾರ್ಯಕ್ರಮವನ್ನು ರಾಮನಗರದಿಂದ ಬೆಂಗಳೂರಿನ ಅರಮನೆ ಮೈದಾನಕ್ಕೆ ಶಿಫ್ಟ್ ಮಾಡಲಾಗುತ್ತಿದೆ.
ಮದುವೆಗಾಗಿ ಕಳೆದ 1 ತಿಂಗಳಿನಿಂದ ಮಾಡಲಾಗುತ್ತಿದ್ದ ಸ್ಥಳದ ಸಿದ್ಧತೆಯ ಕಾರ್ಯವನ್ನು ಸ್ಥಗಿತಗೊಳಿಸಲಾಗಿದೆ. ಅಲ್ಲದೆ ಈಗಾಗಲೇ ಹಾಕಿದ್ದ ಸೆಟ್, ಟೆಂಟ್ ಗಳ ತೆರವು ಸಹ ನಡೆಯುತ್ತಿದ್ದು, ಮದುವೆ ಸಿದ್ಧತೆಗಾಗಿ ತಂದಿದ್ದ ವಸ್ತುಗಳನ್ನು ಮರಳಿ ಸಾಗಿಸಲಾಗುತ್ತಿದೆ.
ರಾಮನಗರ-ಚನ್ನಪಟ್ಟಣದ ಜನತೆಗೆಲ್ಲ ಭಾರಿ ಭೋಜನ ಹಾಕಿಸಬೇಕು. ನನ್ನ ಕ್ಷೇತ್ರದ ಮತದಾರರ ಋಣ ತೀರಿಸಬೇಕು ಎಂದು ಆಸೆ ಇಟ್ಟುಕೊಂಡಿದ್ದ ಮಾಜಿ ಸಿಎಂ ಎಚ್.ಡಿ.ಕುಮಾರಸ್ವಾಮಿ, ರಾಮನಗರ ಹೊರವಲಯದ ಜನಪದ ಲೋಕದ ಬಳಿ ಅದ್ಧೂರಿ ಸೆಟ್ ನಲ್ಲಿ ಮದುವೆ ಮಾಡಲು ಸಿದ್ಧತೆ ನಡೆಸಿದ್ದರು. ಆದರೆ ಕೊರೊನಾ ಭೀತಿಯಿಂದಾಗಿ ನಿಖಿಲ್ ಕುಮಾರಸ್ವಾಮಿಯವರ ಮದುವೆ ಬೆಂಗಳೂರಿಗೆ ವರ್ಗಾವಣೆ ಆಗುತ್ತಿದೆ.
ಚನ್ನಪಟ್ಟಣ-ರಾಮನಗರದ ನಡುವಿನ ಹೆದ್ದಾರಿ ಬದಿಯಲ್ಲಿ ಸುಮಾರು 90ಕ್ಕೂ ಹೆಚ್ಚು ಎಕರೆ ಪ್ರದೇಶದಲ್ಲಿ ನಿಖಿಲ್ ಮದುವೆ ನಡೆಸಬೇಕು ಎಂದು ನಿರ್ಧರಿಸಲಾಗಿತ್ತು. ಮದುವೆಗೆ ಸುಮಾರು 8 ಲಕ್ಷಕ್ಕೂ ಹೆಚ್ಚು ಮಂದಿ ಸೇರುವ ಸಾಧ್ಯತೆಗಳಿದ್ದ ಹಿನ್ನೆಲೆಯಲ್ಲಿ ಮದುವೆಯನ್ನೇ ಬೆಂಗಳೂರಿಗೆ ವರ್ಗಾವಣೆ ಮಾಡಲಾಗುತ್ತಿದೆ.
ನಿಖಿಲ್ ಕುಮಾರಸ್ವಾಮಿ ಮತ್ತು ರೇವತಿ ಕಲ್ಯಾಣ ಏಪ್ರಿಲ್ 17ರಂದು ನಿಶ್ಚಯವಾಗಿದೆ. ರಾಮನಗರ-ಚನ್ನಪಟ್ಟಣ ಮಧ್ಯೆ ಭಾಗದ ಜಾನಪದ ಲೋಕದಲ್ಲಿ ಮದುವೆ ಮಾಡುವುದು ಎಂದು ಎಚ್.ಡಿ.ಕುಮಾರಸ್ವಾಮಿ ನಿಶ್ಚಯ ಮಾಡಿದ್ದರು.
ಅಲ್ಲದೇ ಕುಮಾರಸ್ವಾಮಿ ಮತ್ತು ಪತ್ನಿ ಅನಿತಾ ಕುಮಾರಸ್ವಾಮಿ ಕೂಡ ಮದುವೆ ಮಾಡಬೇಕೆಂದಿದ್ದ ಜಾಗವನ್ನು ನೋಡಿ, ಪೂಜೆಯನ್ನು ಕೂಡ ಮಾಡಿದ್ದರು. ರೇವತಿ ಪೋಷಕರ ಜೊತೆ ಶಿವರಾತ್ರಿ ಹಬ್ಬದಂದು ಭೂಮಿಗೆ ಶಕ್ತಿ ತುಂಬುವ ವಿಶೇಷ ಪೂಜೆ ಕೂಡಾ ನಡೆಸಿದ್ರು. ಅಲ್ಲದೇ ವಾಸ್ತುಪ್ರಕಾರ ಕಲ್ಯಾಣ ಮಂಟಪದ ಅದ್ದೂರಿ ಸೆಟ್ ನಿರ್ಮಾಣಕ್ಕೆ ಗುದ್ದಲಿ ಪೂಜೆ ಮಾಡಲಾಗಿತ್ತು.