ನವದೆಹಲಿ: ಭಾರತದಲ್ಲಿ ಪ್ಲಾಸ್ಮಾ ಥೆರಪಿ ಆರಂಭಿಸಲು ಭಾರತೀಯ ವೈದ್ಯಕೀಯ ಸಂಶೋಧನಾ ಪರಿಷತ್ತು(ಐಸಿಎಂಆರ್) ಅನುಮತಿ ನೀಡಿದ್ದು ಕೇರಳದಲ್ಲಿ ಮೊದಲು ಪ್ರಾಯೋಗಿಕವಾಗಿ ಆರಂಭಿಸಲಿದ್ದು ದೇಶದ್ಯಾಂತ ಎಲ್ಲ ಕೊರೊನಾ ಆಸ್ಪತ್ರೆಗಳಲ್ಲಿ ಶೀಘ್ರದಲ್ಲಿ ಆರಂಭವಾಗುವ ಸಾಧ್ಯತೆ ಇದೆ.
ಕೊರನಾಗೆ ಲಸಿಕೆ ಇಲ್ಲದ ಹಿನ್ನೆಲೆ ಚೀನಾ ಅಮೆರಿಕಾ ಬ್ರಿಟನ್ ದೇಶಗಳಲ್ಲಿ ಕೊರೊನಾ ಚಿಕಿತ್ಸೆಗೆ ಪ್ಲಾಸ್ಮಾ ಥೆರಪಿ ಮಾಡಲಾಗಿತ್ತು. ಕೊರೊನಾ ವೈರಸ್ ನಿಯಂತ್ರಿಸುವಲ್ಲಿ ಥೆರಪಿ ಸಹಾಯಕವಾಗುವುದು ಸಾಬೀತಾದ ಮೇಲೆ ದೇಶದಲ್ಲೂ ಆರಂಭಿಸಲು ಒತ್ತಡ ಕೇಳಿ ಬಂದಿತ್ತು. ಈ ಬಗ್ಗೆ ಪರಿಶೀಲನೆ ನಡೆಸಿರುವ ಐಸಿಎಂಆರ್ ಈಗ ಅನುಮತಿ ನೀಡಿದೆ.
ಕೊರೊನಾದಿಂದ ಚೇತರಿಸಿಕೊಂಡ ವ್ಯಕ್ತಿಯ ರಕ್ತದಲ್ಲಿ ಆ್ಯಂಟಿಬಾಡಿಗಳು ಇರುತ್ತವೆ. ಅವು ರೋಗ ನಿರೋಧಕ ಶಕ್ತಿ ಹೊಂದಿರುತ್ತವೆ. ಆ ಪ್ಲಾಸ್ಮಾವನ್ನು ತೆಗೆದು ಸೋಂಕಿತ ಅಥವಾ ಸೋಂಕು ಶಂಕೆ ಹೊಂದಿರುವ ವ್ಯಕ್ತಿಗೆ ನೀಡುವುದನ್ನೇ ಪ್ಲಾಸ್ಮಾ ಥೆರಪಿ ಎನ್ನಲಾಗುತ್ತದೆ. ಪ್ಲಾಸ್ಮಾ ಥೆರಪಿಗೆ ಒಳಗಾದ ವ್ಯಕ್ತಿಗಳು ಬೇಗನೆ ಕೊರೊನಾದಿಂದ ಗುಣಮುಖರಾಗುವುದು ವಿದೇಶಗಳಲ್ಲಿ ಸಾಬೀತಾಗಿದೆ.
ಸೋಂಕು ಮುಕ್ತವಾದ ವ್ಯಕ್ತಿ ಚೇತರಿಸಿಕೊಂಡ 28 ದಿನಗಳ ಬಳಿಕ ಪ್ಲಾಸ್ಮಾವನ್ನು ದಾನ ಮಾಡಬಹುದು, ಮೊದಲ ಪರೀಕ್ಷೆಯಲ್ಲಿ ಪಾಸಿಟಿವ್ ಬಂದು, 2ನೇ ಪರೀಕ್ಷೆಯಲ್ಲಿ ನೆಗೆಟಿವ್ ಬಂದವರು ಕೂಡಾ ದಾನ ಮಾಡಬಹುದಾಗಿದ್ದು ದಾನಿಯೊಬ್ಬನ ಪ್ಲಾಸ್ಮಾವನ್ನು ಅದೇ ರಕ್ತದ ಗುಂಪಿನ ರೋಗಿಗಳಿಗೆ ಮಾತ್ರ ನೀಡಬಹುದು ಎಂದು ತಜ್ಞರು ಹೇಳಿದ್ದಾರೆ.
ಏನಿದು ಪ್ಲಾಸ್ಮಾ ಥೆರಪಿ?
ಕೊರೊನಾದಿಂದ ಗುಣಮುಖರಾದ ವ್ಯಕ್ತಿಯಲ್ಲಿ ರೋಗನಿರೋಧಕ ಶಕ್ತಿ ಜಾಸ್ತಿ ಇರುತ್ತದೆ. ಅವರ ರಕ್ತ ಕಣಗಳನ್ನು ಬೇರ್ಪಡಿಸಿ ಸೋಂಕಿತರ ಚಿಕಿತ್ಸೆಗೆ ಬಳಸಲಾಗುತ್ತದೆ. ಕೊರೊನಾ ವೈರಸ್ಸಿನೊಂದಿಗೆ ಹೋರಾಡಿದ ಪರಿಣಾಮ ಈ ರಕ್ತಕ್ಕೆ ವೈರಸ್ ಗಳನ್ನು ತಡೆಯುವ ಶಕ್ತಿ ಇರುತ್ತದೆ. ಹೀಗಾಗಿ ಪ್ಲಾಸ್ಮಾ ಥೆರಪಿ ನೀಡಿದರೆ ಉತ್ತಮ ಎಂಬ ಅಭಿಪ್ರಾಯಕ್ಕೆ ಬರಲಾಗಿದೆ.
ಪ್ರಯೋಗ ನಡೆದಿದೆಯೇ?
ಚೀನಾದಲ್ಲೂ ಕೂಡ ಕೊರೊನಾ ನಿಯಂತ್ರಣಕ್ಕೆ ಸೋಂಕಿನಿಂದ ಗುಣಮುಖರಾದ ವ್ಯಕ್ತಿಯ ಪ್ಲಾಸ್ಮಾವನ್ನೇ ಬಳಸಲಾಗಿದೆ. ಚೀನಾದ 2 ವೈದ್ಯರ ತಂಡ 2 ಪ್ರತ್ಯೇಕ ಆಸ್ಪತ್ರೆಗಳಲ್ಲಿ 15 ಮಂದಿ ಸೋಂಕಿತರಿಗೆ ಮೊದಲು ಈ ಪರೀಕ್ಷೆ ನಡೆಸಿ ಅವರಲ್ಲಿ ಸುಧಾರಣೆ ಕಂಡದ್ದನ್ನು ದಾಖಲಿಸಿವೆ.
ಒಬ್ಬನಿಂದ ಎಷ್ಟು ಮಂದಿಗೆ ನೀಡಬಹುದು?
ಒಬ್ಬನಿಂದ ಇಷ್ಟೇ ಮಂದಿಗೆ ನೀಡಬಹುದು ಎಂದು ಹೇಳಲು ಸಾಧ್ಯವಿಲ್ಲ. ಎಷ್ಟು ಪ್ರಮಾಣದಲ್ಲಿ ಪ್ಲಾಸ್ಮಾ ಸಿಗುತ್ತದೆ ಎಂಬುದರ ಮೇಲೆ ಎಷ್ಟು ಮಂದಿಗೆ ನೀಡಬಹುದು ಎನ್ನುವ ಲೆಕ್ಕಾಚಾರವನ್ನು ಹಾಕಲಾಗುತ್ತದೆ. ಒಬ್ಬನಿಂದ ಕನಿಷ್ಟ ಇಬ್ಬರು ಗರಿಷ್ಟ 5 ಮಂದಿಗೆ ಪ್ಲಾಸ್ಮಾ ನೀಡಬಹುದು. ಒಬ್ಬ ರೋಗಿಯನ್ನು ಗುಣಪಡಿಸಲು ಅಂದಾಜು 200-250 ಎಂಎಲ್ ಪ್ಲಾಸ್ಮಾ ಬೇಕಾಗುತ್ತದೆ.
ಎಷ್ಟು ದಿನಗಳ ನಂತರ ಪ್ಲಾಸ್ಮಾ ಸಂಗ್ರಹಿಸಬಹುದು?
ಇದು ಬಹಳ ಕಠಿಣ ಪ್ರಶ್ನೆ. ಕೊರೊನಾ ವಾಸಿಯಾದ ನಂತರವು ಸೋಂಕು ಬಂದಿದೆ ಎನ್ನುವ ವರದಿಗಳು ಚೀನಾದಲ್ಲಿ ದಾಖಲಾಗಿದೆ. ಹೀಗಾಗಿ ರೋಗಿ ಸಂಪೂರ್ಣವಾಗಿ ಗುಣವಾದ 28 ದಿನಗಳ ನಂತರ ಪ್ಲಾಸ್ಮಾವನ್ನು ಸಂಗ್ರಹಿಸಬಹುದು ಎನ್ನುವ ಲೆಕ್ಕಾಚಾರಕ್ಕೆ ಬರಲಾಗಿದೆ.
ಯಾರಿಗೆ ನೀಡಬಹುದು?
ಕೊರೊನಾ ಪೀಡಿತ ಎಲ್ಲರಿಗೆ ಈ ಥೆರಪಿಯ ಅಗತ್ಯವಿಲ್ಲ. ರೋಗ ನಿರೋಧಕ ಶಕ್ತಿಯನ್ನು ಹೊಂದಿರುವ ವ್ಯಕ್ತಿಗಳು ಉತ್ತಮ ಆಹಾರ, ಔಷಧಿ, ತಮ್ಮಲ್ಲಿನ ದೃಢ ವಿಶ್ವಾಸದಿಂದಲೇ ಗುಣಮುಖರಾಗುತ್ತಾರೆ. ಆದರೆ ಗಂಭೀರವಾಗಿರುವ ರೋಗಿಗಳಿಗೆ ನೀಡಲು ಯಾವುದೇ ಔಷಧ ಇಲ್ಲದ ಕಾರಣ ಈ ಥೆರಪಿ ಮಾಡಬಹುದು. ಈ ಥೆರಪಿ ಮೂಲಕ ರೋಗಿಯನ್ನು 5-7 ದಿನಗಳಲ್ಲಿ ಗುಣಪಡಿಸಬಹುದು ಎನ್ನುವ ಅಭಿಪ್ರಾಯಕ್ಕೆ ಬರಲಾಗಿದೆ.