ಚಿಕ್ಕಮಗಳೂರು: ರಾಜ್ಯದಲ್ಲಿ ದಿನೇ ದಿನೇ ಕೊರೊನಾ ವೈರಸ್ ಹೆಚ್ಚಾಗುತ್ತಿದೆ. ಇದೀಗ ಮುಂಬೈನಿಂದ ಬಂದಿರುವ ಮಹಿಳೆ ಕಂಡು ಚಿಕ್ಕಮಗಳೂರು ಜಿಲ್ಲೆಯ ಕಡೂರು ಪಟ್ಟಣದ ಜನ ಆತಂಕಕ್ಕೀಡಾಗಿದ್ದಾರೆ.
ಕಡೂರಿ ಪಟ್ಟಣದ ಜೈನ ಮಂದಿರದ ಬಳಿ ನಿಂತಿದ್ದ ಮಹಿಳೆ ತೀವ್ರವಾದ ಕೆಮ್ಮಿನಿಂದ ಬಳಲುತ್ತಿದ್ದಳು. ಇದನ್ನ ಕಂಡು ಆತಂಕಕ್ಕೀಡಾದ ಸ್ಥಳೀಯರು ಕಡೂರು ಪೊಲೀಸರಿಗೆ ಮಾಹಿತಿ ನೀಡಿದರು. ಮಾಹಿತಿ ತಿಳಿದು ಸ್ಥಳಕ್ಕೆ ಬಂದ ಪೊಲೀಸರು ಮಹಿಳೆಯನ್ನು ವಿಚಾರಿಸಿದಾಗ ಸರಿಯಾಗಿ ಯಾವುದೇ ಮಾಹಿತಿ ನೀಡಿಲ್ಲ.
ಸುಮಾರು 30 ವರ್ಷದ ಮಹಿಳೆ ಪೊಲೀಸರ ಪ್ರಶ್ನೆಗೆ ಒಂದೊಂದು ಬಾರಿ ಒಂದೊಂದು ಉತ್ತರ ನೀಡಿದ್ದಳು. ಹಾಗಾಗಿ ಪೊಲೀಸರು ಆಕೆಯನ್ನ ಆರೋಗ್ಯ ಸಿಬ್ಬಂದಿಯ ಜೊತೆ ಆಸ್ಪತ್ರೆಗೆ ಕರೆದುಕೊಂಡು ಹೋಗಿ ಆಕೆಯ ಗಂಟಲು ದ್ರವ ಹಾಗೂ ರಕ್ತದ ಮಾದರಿಯನ್ನ ಪರೀಕ್ಷೆಗೆಂದು ಶಿವಮೊಗ್ಗ ಕಳಿಸಿದ್ದಾರೆ. ಬಳಿಕ ಮಹಿಳೆಯನ್ನು ಚಿಕ್ಕಮಗಳೂರಿನ ಮಧುವನ ಲೇಔಟ್‍ನಲ್ಲಿರುವ ಕ್ವಾರಂಟೈನ್ ಘಟಕಕ್ಕೆ ಬಿಟ್ಟಿದ್ದಾರೆ.
ಮಹಿಳೆ ಕಡೂರಿನ ಎರಡು-ಮೂರು ಏರಿಯಾಗಲ್ಲಿ ಓಡಾಡಿರುವ ಹಿನ್ನೆಲೆಯಲ್ಲಿ ಮುಂಜಾಗೃತ ಕ್ರಮವಾಗಿ ಜೈನ ಮಂದಿರ, ಐಬಿ ರಸ್ತೆ ಸೇರಿದಂತೆ ಮೂರು ಏರಿಯಾಗಳನ್ನ ಸಂಪೂರ್ಣ ಲಾಕ್‍ಡೌನ್ ಮಾಡಿದ್ದಾರೆ. ಮೂರು ಏರಿಯಾಗಳಲ್ಲೂ ಪೊಲೀಸರು ತೀವ್ರ ಬಂದೋಬಸ್ತ್ ಕಲ್ಪಿಸಿದ್ದಾರೆ.
ಜನ ಅನಾವಶ್ಯಕವಾಗಿ ಮನೆಯಿಂದ ಹೊರಬಾರದಂತೆ ಎಚ್ಚರವಹಿಸಿದ್ದಾರೆ. 37 ದಿನಗಳಿಂದ ಜಿಲ್ಲೆಯಲ್ಲಿ ಒಂದೇ ಒಂದು ಕೊರೊನಾ ಪಾಸಿಟಿವ್ ಪ್ರಕರಣ ಪತ್ತೆಯಾಗಿರಲಿಲ್ಲ. ಆದರೆ ಇದೀಗ ಮಹಿಳೆಯಿಂದ ಜಿಲ್ಲೆಯ ಜನ ಕೂಡ ಆತಂಕಕ್ಕೀಡಾಗಿದ್ದಾರೆ.