ರಾಯಚೂರು: ಗ್ರೀನ್ ಝೋನ್ ನಲ್ಲಿರುವ ಜಿಲ್ಲೆಯ ಜನ ಯುದ್ಧ ಗೆದ್ದ ಸಂಭ್ರಮದಲ್ಲಿರುವಂತೆ ಬೆಳಗ್ಗೆ, ಮಧ್ಯಾಹ್ನ, ರಾತ್ರಿ ಎಲ್ಲಾ ವೇಳೆಯೂ ರಸ್ತೆಗಿಳಿದು ಓಡಾಡುತ್ತಲೇ ಇದ್ದಾರೆ. ಕನಿಷ್ಠ ಸುಡುಬಿಸಿಲಿಗೂ ಹೆದರುತ್ತಿಲ್ಲಾ, ಕೊರೊನಾ ಭೀತಿಯಂತೂ ಮಾಯಾವಾಗಿಬಿಟ್ಟಿದೆ. ಹೀಗಾಗಿ ರಾಯಚೂರಿನಲ್ಲಿ ಜಿಲ್ಲಾಡಳಿತ ಹಾಗೂ ಪೊಲೀಸರಿಗೆ ಜನರ ನಿಯಂತ್ರಣ ದೊಡ್ಡ ತಲೆನೋವಾಗಿದೆ.
Advertisement
ಬಿಸಿಲನಾಡು ರಾಯಚೂರು ಜಿಲ್ಲೆಯಲ್ಲಿ ಈಗ ತಾಪಮಾನ 40 ಡಿಗ್ರಿ ಸೆಲ್ಸಿಯಸ್ ದಾಟುತ್ತಿದೆ. ಹವಾಮಾನ ಇಲಾಖೆ ಪ್ರಕಾರ ಇನ್ನೆರಡು ದಿನದಲ್ಲಿ 44 ಡಿಗ್ರಿ ಸೆಲ್ಸಿಯಸ್ ದಾಟಿದರೂ ಅಚ್ಚರಿಯಿಲ್ಲ. ಹೀಗಾಗಿ ಉತ್ತರ ಕರ್ನಾಟಕ ಜನ ಈ ವಾರ ಆದಷ್ಟು ಬಿಸಿಲಿನ ತಾಪಮಾನದಿಂದ ನಿಮ್ಮನ್ನ ನೀವು ರಕ್ಷಿಸಿಕೊಳ್ಳಿ ಅಂತ ಎಚ್ಚರಿಸಿದೆ. ಆದ್ರೆ ಜನ ಮಾತ್ರ ಯಾರ ಮಾತನ್ನೂ ಕೇಳುತ್ತಿಲ್ಲ. ಲಾಕ್‍ಡೌನ್ ಸಡಿಲವಾದದ್ದೇ ತಡ ಮನೆಯನ್ನೇ ಮರೆತು ಬೀದಿಯಲ್ಲೆ ಉಳಿದಂತೆ ಓಡಾಡುತ್ತಿದ್ದಾರೆ. ಎಲ್ಲಿ ನೋಡಿದ್ರು ಜನರ ಓಡಾಟವೇ ಕಾಣಿಸುತ್ತಿದೆ. ಜಿಲ್ಲೆ ಇನ್ನೂ ಗ್ರೀನ್ ಝೋನ್ ನಲ್ಲಿರುವುದರಿಂದ ಜಿಲ್ಲಾಡಳಿತವೂ ಸಹ ಲಾಕ್‍ಡೌನ್ ಸಂಪೂರ್ಣ ಸಡಿಲಿಕೆ ಮಾಡಿದೆ. ಹೀಗಾಗಿ ಜನರ ಓಡಾಟಕ್ಕೆ ಬ್ರೇಕ್ ಇಲ್ಲದಂತಾಗಿದೆ. ಆಟೋ, ರಿಕ್ಷಾಗಳು ಜನರನ್ನ ತುಂಬಿಸಿಕೊಂಡು ಓಡಾಡುತ್ತಿವೆ. ಮಾರ್ಕೆಟ್ ನಲ್ಲಿ ನಿಲ್ಲಲು ಸಹ ಜಾಗವಿಲ್ಲದಷ್ಟು ಜನಜಂಗುಳಿಯಿದೆ. ಲಾಕ್‍ಡೌನ್ ಸಡಿಲಿಕೆ ಆಗುತ್ತಿದ್ದಂತೆ ಸಾಮಾಜಿಕ ಅಂತರವೂ ಕಾಣೆಯಾಗಿದೆ. ಇನ್ನೂ ಕೆಲವರು ಮಾಸ್ಕ್ ಹಾಕಿದರೆ ಉಳಿದವರು ಹಾಗೇ ಓಡಾಡುತ್ತಿದ್ದಾರೆ.
Advertisement
Advertisement
ಇತ್ತ ಕೊರೊನಾ ಭೀತಿಯೂ ಇಲ್ಲ ಅತ್ತ ಬಿಸಿಲಿನ ಭಯವೂ ಇಲ್ಲ. ಮಧ್ಯಾಹ್ನವಾಗುತ್ತಿದ್ದಂತೆ ನೆತ್ತಿಸುಡುವ ಬಿಸಿಲು ಬರುತ್ತಿದ್ದರೂ ಜನ ಯಾವುದನ್ನೂ ಲೆಕ್ಕಿಸದೇ ಓಡಾಡುತ್ತಿದ್ದಾರೆ. ಗುಂಪುಗುಂಪಾಗಿ ವ್ಯಾಪಾರ ಮಾಡುತ್ತಿದ್ದಾರೆ. ಬೈಕ್ ಸವಾರರಂತೂ ಅತೀಯಾಗಿ ಓಡಾಡುತ್ತಿದ್ದು, ಟ್ರಾಫಿಕ್ ಸಮಸ್ಯೆ ಉಂಟಾಗುತ್ತಿದೆ. ಸುಡುಬಿಸಿಲನ್ನೇ ಮದ್ಯದಂಗಡಿಗಳ ಮುಂದೆ ಕ್ಯೂ ನಿಂತು ಮದ್ಯ ಕೊಳ್ಳುತ್ತಿದ್ದಾರೆ. ಈ ಬೇಸಿಗೆ ಕಾಲದಲ್ಲೇ ಅತೀ ಹೆಚ್ಚು ತಾಪಾಮಾನ ದಾಖಲಾಗುತ್ತಿದ್ದರೂ ಜನ ಹೆದರುತ್ತಿಲ್ಲ. ಗುಳೆಹೋದ ಕೂಲಿಕಾರ್ಮಿಕರು, ಅಂತರರಾಜ್ಯ ಗಡಿಗಳ ಭೀತಿ ಜಿಲ್ಲೆಗೆ ಇದ್ದರೂ ಸಹ ಎಲ್ಲವೂ ನಿರಾತಂಕವಾಗಿ ನಡೆದಿದೆ.
Advertisement
ಒಟ್ಟಿನಲ್ಲಿ, ಹಸಿರು ವಲಯದಲ್ಲಿದ್ದರೂ ರಾಯಚೂರು ಜಿಲ್ಲೆಯಲ್ಲಿ ಲಾಕ್‍ಡೌನ್ ಸಂಪೂರ್ಣ ಸಡಲಿಕೆಯಾಗಿರುವುದು ಒಂದೆಡೆ ಆತಂಕವನ್ನೂ ಸೃಷ್ಠಿಸಿದೆ. ಕನಿಷ್ಠ ಜನ ಸೇರುವ ಕಡೆಗಳಲ್ಲಿ ಸಾಮಾಜಿಕ ಅಂತರ ಕಾಪಾಡುವ ಕೆಲಸವಾಗಬೇಕಿದೆ. ಜಿಲ್ಲಾಡಳಿತ ಸೂಕ್ತ ಕ್ರಮಕ್ಕೆ ಮುಂದಾಗಬೇಕು ಅಂತ ಸಾರ್ವಜನಿಕರೇ ಒತ್ತಾಯಿಸುತ್ತಿದ್ದಾರೆ.