ಸೂಪರ್ ಮಾರ್ಕೆಟ್ ತೆರೆಯಲು ಅನುಮತಿ – ಜಿಲ್ಲಾಧಿಕಾರಿಗಳ ಜೊತೆ ಸಿಎಂ ಸಭೆ

Public TV
2 Min Read
bsy meeting

ಬೆಂಗಳೂರು: ಅಗತ್ಯ ವಸ್ತುಗಳ ಖರೀದಿಗೆ ಅನುಕೂಲ ಕಲ್ಪಿಸಲು ಸೂಪರ್ ಮಾರ್ಕೆಟ್ ತೆರೆಯಲು ರಾಜ್ಯ ಸರ್ಕಾರ ಅನುಮತಿ ನೀಡಿದೆ. ಮುನ್ನೆಚ್ಚರಿಕೆಯ ಕ್ರಮಕೈಗೊಳ್ಳುವಾಗ ಸಾರ್ವಜನಿಕರಿಗೆ ತೊಂದರೆ ನೀಡಬಾರದು ಎಂದು ನಿರ್ದೇಶನ ನೀಡಲಾಗಿದೆ.

ಕೊರೊನಾ ವೈರಸ್ ಸೋಂಕು ತಡೆಗಟ್ಟುವ ನಿಟ್ಟಿನಲ್ಲಿ ರಾಜ್ಯ ಸರ್ಕಾರ ಮಾರ್ಚ್ 13 ರಂದು ಹೊರಡಿಸಿದ ಆದೇಶಗಳನ್ನು ಜಿಲ್ಲೆಗಳಲ್ಲಿ ಕಟ್ಟುನಿಟ್ಟಾಗಿ ಜಾರಿಗೆ ತಂದಿರುವ ಬಗ್ಗೆ ಪರಿಶೀಲನೆಗಾಗಿ ಇಂದು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರು ಜಿಲ್ಲಾಧಿಕಾರಿಗಳ ಜೊತೆಗೆ ವಿಡಿಯೋ ಕಾನ್ಫರೆನ್ಸ್ ನಡೆಸಿದರು.

bsy meeting 2

ಉಪ ಮುಖ್ಯಮಂತ್ರಿ ಗೋವಿಂದ ಎಂ. ಕಾರಜೋಳ, ಗೃಹ ಸಚಿವ ಬಸವರಾಜ ಬೊಮ್ಮಾಯಿ, ವೈದ್ಯಕೀಯ ಶಿಕ್ಷಣ ಸಚಿವ ಡಾ. ಕೆ. ಸುಧಾಕರ್, ಸರ್ಕಾರದ ಮುಖ್ಯ ಕಾರ್ಯದರ್ಶಿ ಟಿ ಎಂ. ವಿಜಯ ಭಾಸ್ಕರ್, ಆರೋಗ್ಯ ಇಲಾಖೆ ಸರ್ಕಾರದ ಅಪರ ಮುಖ್ಯ ಕಾರ್ಯದರ್ಶಿ ಜಾವೇದ್ ಅಖ್ತರ್ ಮತ್ತು ಇತರ ಹಿರಿಯ ಅಧಿಕಾರಿಗಳು ಉಪಸ್ಥಿತರಿದ್ದರು.

ಸಭೆಯಲ್ಲಿ ಏನು ಚರ್ಚೆಯಾಗಿದೆ?
ಕೋವಿಡ್ 19 ಶಂಕಿತ ಪ್ರಕರಣಗಳನ್ನು ಜಿಲ್ಲಾ ಮಟ್ಟದ ಆಸ್ಪತ್ರೆಯಲ್ಲಿಯೇ ನಿರ್ವಹಿಸಲು ಸೂಚಿಸಲಾಯಿತು. ಸರ್ಕಾರ ಹೊರಡಿಸಿರುವ ಮಾರ್ಗಸೂಚಿಗಳನ್ನು, ಆದೇಶಗಳನ್ನು ನಿಗದಿತ ಅವಧಿಯ ವರೆಗೆ ಕಟ್ಟುನಿಟ್ಟಾಗಿ ಜಾರಿಯಾಗಿರುವ ಬಗ್ಗೆ ಸೂಕ್ತ ಮೇಲ್ವಿಚಾರಣೆ ವಹಿಸಬೇಕು ಎಂದು ಸೂಚನೆ ನೀಡಲಾಗಿದೆ.

ಮಂಡ್ಯ, ಮೈಸೂರು, ವಿಜಯಪುರ, ಬಳ್ಳಾರಿ, ಕೊಪ್ಪಳ, ಕೊಡಗು ಜಿಲ್ಲೆಗಳಲ್ಲಿ ಪ್ರವಾಸಿ ತಾಣಗಳಿಗೆ ಪ್ರವೇಶ ನಿಷೇಧ ಮಾಡಲಾಗಿದೆ. ಹೋಮ್ ಸ್ಟೇಗಳ ಬಗ್ಗೆ ವಿಶೇಷ ನಿಗಾ ವಹಿಸಲು ಸೂಚಿಸಲಾಯಿತು. ಹೊರದೇಶದಿಂದ ಬಂದವರನ್ನು ಹೋಂ ಕ್ವಾರಂಟೈನ್‍ನಲ್ಲಿಟ್ಟಿರುವ ಬಗ್ಗೆ ಮಾಹಿತಿ ಪಡೆಯಲಾಗಿದೆ. ವಿದೇಶಿ ಪ್ರವಾಸಿಗರು, ವಿದೇಶ ಪ್ರಯಾಣದಿಂದ ಹಿಂತಿರುಗಿದವರ ಮೇಲೆ ತೀವ್ರ ನಿಗಾ ವಹಿಸಲಾಗುತ್ತಿದೆ.

ಪ್ರತಿ ದಿನ ಜಿಲ್ಲಾ ಮಟ್ಟದ ಟಾಸ್ಕ್ ಫೋರ್ಸ್ ಸಭೆ ನಡೆಸಿ ಜಿಲ್ಲೆಯಲ್ಲಿನ ಪರಿಸ್ಥಿತಿ ಅವಲೋಕಿಸಲು ಸೂಚನೆ ನೀಡಲಾಗಿದೆ. ಸರ್ಕಾರಿ ವೈದ್ಯಕೀಯ ಕಾಲೇಜು ಇಲ್ಲದ ಜಿಲ್ಲೆಗಳಲ್ಲಿ ಖಾಸಗಿ ವೈದ್ಯಕೀಯ ಕಾಲೇಜುಗಳ ಸಹಕಾರ ಪಡೆಯಲು ಸೂಚಿಸಲಾಗಿದೆ.

corona final

ರಾಜ್ಯದ ಗಡಿ ಭಾಗಗಳಲ್ಲಿ ರೈಲ್ವೆ ನಿಲ್ದಾಣ, ಬಸ್ ನಿಲ್ದಾಣಗಳಲ್ಲಿ ಹೆಲ್ಪ್ ಡೆಸ್ಕ್ ಸ್ಥಾಪನೆ, ಚೆಕ್‍ಪೋಸ್ಟ್ ಗಳಲ್ಲಿ ಪ್ರಯಾಣಿಕರ ಸ್ಕ್ರೀನಿಂಗ್‍ಗೆ ಕ್ರಮ ವಹಿಸಲು ಸೂಚಿಸಲಾಗಿದೆ. ಜಾತ್ರೆ, ಸಂತೆಗಳನ್ನು ನಿಷೇಧಿಸಲಾಗಿದೆ. ದೊಡ್ಡ ಪ್ರಮಾಣದಲ್ಲಿ ದೇವಸ್ಥಾನಗಳಿಗೆ ಜನರು ಭೇಟಿ ನೀಡುವ ಹಿನ್ನೆಲೆಯಲ್ಲಿ ಸೂಕ್ತ ಮುನ್ನೆಚ್ಚರಿಕೆ ತೆಗೆದುಕೊಳ್ಳುವಂತೆ ಸೂಚನೆ ನೀಡಲಾಗಿದೆ.

Corona 6

ಔಷಧಿಗಳನ್ನು ಕರ್ನಾಟಕ ಡ್ರಗ್ಸ್ ಲಾಜಿಸ್ಟಿಕ್ಸ್ ಸಂಸ್ಥೆಯಿಂದ ಪಡೆಯಲು ಸೂಚಿಸಲಾಗಿದೆ. ರೈಲು ನಿಲ್ದಾಣ, ಬಸ್ ನಿಲ್ದಾಣ, ವಿಮಾನ ನಿಲ್ದಾಣಗಳಲ್ಲಿ ಸ್ಕ್ರೀನಿಂಗ್ ನಡೆಸಲಾಗುತ್ತಿದೆ. ಬೀದರ್, ವಿಜಯಪುರ ಜಿಲ್ಲೆಗಳಿಗೆ ಹೆಚ್ಚುವರಿ ವೆಂಟಿಲೇಟರ್ ಒದಗಿಸಲು ಬೇಡಿಕೆ ಸಲ್ಲಿಕೆಯಾಗಿದೆ. ಮಂಗಳೂರು, ಕಲಬುರಗಿ ಸೇರಿದಂತೆ ಹಲವೆಡೆ, ಕೇಂದ್ರ ಸರ್ಕಾರದ ಮಾರ್ಗಸೂಚಿಯಂತೆ ಹೆಚ್ಚುವರಿ ಪ್ರಯೋಗಾಲಯ ಸ್ಥಾಪಿಸಲಾಗುವುದು. ಬೆಂಗಳೂರಿನಲ್ಲಿ ಹೆಚ್ಚಿನ ಸೌಲಭ್ಯ ಸೂಚನೆ ನೀಡಲಾಗಿದ್ದು, ಶುದ್ಧ ಕುಡಿಯುವ ನೀರು ಸರಬರಾಜಿಗೆ ಗಮನ ನೀಡಲು ಸೂಚಿಸಲಾಗಿದೆ.

Share This Article
Leave a Comment

Leave a Reply

Your email address will not be published. Required fields are marked *