ಉಡುಪಿ: ಕೊರೊನಾ ವಿರುದ್ಧ ಹೋರಾಡುವ ಉದ್ದೇಶದಿಂದ ಜನರೇ ಭಾರತವನ್ನು ಬಂದ್ ಮಾಡಿದ್ದಾರೆ. ಮನೆಯಿಂದ ಹೊರಗೆ ಬಾರದ ಜನ ಏನು ಮಾಡುತ್ತಿದ್ದಾರೆ ಎನ್ನುವುದು ಕುತೂಹಲ ಎಲ್ಲರಲ್ಲೂ ಇದೆ. ಸದಾ ಓಡಾಡುವ ಪುರುಷರು ಮನೆಯಲ್ಲಿದ್ದೇನೆ ಮಾಡ್ತಾರೆ ಎನ್ನುವ ಒಂದು ಯಕ್ಷ ಪ್ರಶ್ನೆಯೂ ಇದೆ. ಮನೆಯಿಂದ ಹೊರಬಾರದ ಜನ ಸಿಕ್ಕಾಪಟ್ಟೆ ಬ್ಯುಸಿಯಾಗಿದ್ದಾರೆ.
ಉಡುಪಿ ನಗರದ ಲಾಲಾ ಲಜಪತ್ರಾಯ್ ರೆಸಿಡೆನ್ಷಿಯಲ್ ರಸ್ತೆಯ ಅಶ್ವಿನಿ ಕಾಮತ್ ಎಂಬವರ ಮನೆ ಮನೆಯಲ್ಲಿ ಇಡೀ ಕುಟುಂಬವೇ ಇತ್ತು. ಗಂಡ-ಹೆಂಡತಿ ಮತ್ತು ಇಬ್ಬರು ಮಕ್ಕಳು ದಿನಪೂರ್ತಿ ಹೊರಗೆ ಬಾರದೆ ತಮ್ಮ ಕೆಲಸಗಳಲ್ಲಿ ತೊಡಗಿಕೊಂಡಿದ್ದರು. ಜನತಾ ಕರ್ಫ್ಯೂ ಎಂದು ಮನೆಯೊಳಗೆ ಇದ್ದ ಕುಟುಂಬ ಉಪ್ಪಿನಕಾಯಿ ಹಾಕುವುದರಲ್ಲಿ ಬಿಸಿಯಾಗಿತ್ತು. ಕಫ್ರ್ಯೂ ಹಿನ್ನೆಲೆಯಲ್ಲಿ ಶನಿವಾರ ಸಂಜೆ ಮಾವಿನಕಾಯಿ ನಿಂಬೆಹುಳಿ ಮತ್ತಿತರ ವಸ್ತುಗಳನ್ನು ಜೋಡಿಸಿತ್ತು. ಕುಟುಂಬದ ನಾಲ್ವರು ಸದಸ್ಯರು ಮನೆಯಲ್ಲಿದ್ದುಕೊಂಡು ಉಪ್ಪಿನಕಾಯಿ ಹಾಕಿದ್ದಾರೆ. ಅಶ್ವಿನಿ ಕಾಮತ್ ಅವರ ಮಗ ಬೆಂಗಳೂರಿನಲ್ಲಿ ಎಂಬಿಎ ಪದವಿ ಮಾಡುತ್ತಿದ್ದು, ಸದ್ಯ ರಜೆ ಘೋಷಿಸಿರುವುದರಿಂದ ಉಡುಪಿಗೆ ಬಂದಿದ್ದಾರೆ. ರಜೆ ಮುಗಿಸಿ ಬೆಂಗಳೂರಿಗೆ ಹೋಗುವಾಗ ಮಗನಿಗೆ ಚಟ್ನಿಪುಡಿ ಉಪ್ಪಿನಕಾಯಿ ಗೊಜ್ಜು, ಸಾಂಬಾರು ಹುಡಿ ಸಾರು ಹುಡಿ ತಯಾರು ಮಾಡುವುದರಲ್ಲಿ ತಂಗಿ, ತಂದೆ ಮತ್ತು ತಾಯಿ ತೊಡಗಿಸಿಕೊಂಡಿದ್ದರು. ಜನತಾ ಕರ್ಫ್ಯೂ ನಿಂದ ಕೊರೊನಾ ವಿರುದ್ಧ ಒಂದು ಕಡೆಯಿಂದ ಜನ ಜಾಗೃತಿಯಾದರೆ ಇಡೀ ಕುಟುಂಬ ಮನೆಯಲ್ಲಿ ಇದ್ದು ಒಂದು ದಿನ ಕಳೆಯುವುದಕ್ಕೆ ಈ ಭಾನುವಾರ ಅವಕಾಶ ಆಯಿತು.
Advertisement
Advertisement
ಪಣಿಯಾಡಿ ನಾಗರತ್ನ ಅವರ ಮನೆಯಲ್ಲಿ ನಾಲ್ಕೈದು ಗೃಹಿಣಿಯರು ಸೇರಿ ಹಪ್ಪಳ ಮತ್ತು ಸಂಡಿಗೆಯನ್ನ ತಯಾರು ಮಾಡುತ್ತಿದ್ದರು. ಸಂಬಂಧಿಕರೇ ಆಗಿರುವ ಮೂರ್ನಾಲ್ಕು ಮಂದಿ ಜೊತೆ ಸೇರಿಕೊಂಡು ಮುಂದಿನ ಮಳೆಗಾಲಕ್ಕೆ ಬೇಕಾದ ಹಪ್ಪಳ ಮತ್ತು ಸಂಡಿಗೆಯನ್ನು ಸಿದ್ಧಪಡಿಸುವ ಪ್ಲಾನ್ ಅನ್ನು ಶನಿವಾರ ಮಾಡಿಕೊಂಡಿದ್ದರು. ಬೆಳಗ್ಗೆದ್ದು ಇದಕ್ಕೆ ಬೇಕಾದ ಎಲ್ಲಾ ತಯಾರಿಗಳನ್ನು ಮಾಡಿದ್ದರು. ಬಿಸಿಲು ಏರುತ್ತಿದ್ದಂತೆ ತಮ್ಮ ಟೆರೇಸ್ ಮೇಲೆ ಹಪ್ಪಳ ಸೆಂಡಿಗೆ ಇಟ್ಟರು. ಮನೆಯ ಮಕ್ಕಳು ಕೂಡ ತಂದೆ ತಾಯಿಗೆ ಸಹಕಾರ ನೀಡಿದರು.
Advertisement
Advertisement
ಪ್ರಧಾನಿ ಮೋದಿ ಘೋಷಿಸಿರುವ ಜನತಾ ಕರ್ಫ್ಯೂ ಹಿನ್ನೆಲೆಯಲ್ಲಿ ಉಡುಪಿಯಲ್ಲಿ ಜನ ಹೊರಗೆ ಬರಲಿಲ್ಲ. ಹಾಗಂತ ದಿನವನ್ನು ಸಂಪೂರ್ಣ ಸುಖಾಸುಮ್ಮನೆ ಕಳೆಯದೆ, ಕುಟುಂಬದ ಜೊತೆ ದಿನಪೂರ್ತಿ ಬೆರೆಯಲು ಉಪಯೋಗ ಮಾಡಿಕೊಂಡಿದ್ದಾರೆ. ಮುಂದಿನ ದಿನಗಳಲ್ಲಿ ಪರಿಸ್ಥಿತಿ ಇನ್ನಷ್ಟು ಹದಗೆಟ್ಟರೆ ಏನೆಲ್ಲ ಕ್ರಮಗಳನ್ನು ಮಾಡಬಹುದು ಎಂಬುದಕ್ಕೆ ಈ ಭಾನುವಾರ ಸಾಕಷ್ಟು ಮಂದಿಗೆ ಪರೋಕ್ಷವಾಗಿ ಪಾಠ ಕಲಿಸಿದೆ. ಎಂತಹ ವಿಷಮ ಸ್ಥಿತಿ ಬಂದರೂ ಹತಾಶರಾಗದೆ ತಮ್ಮ ಕುಟುಂಬವನ್ನು ಸಮಸ್ಯೆಗಳಿಂದ, ಕರೋನಾ ವೈರಸ್ ನಿಂದ ಹೇಗೆ ದೂರ ಇಡಬಹುದು ಎಂಬ ಬಗ್ಗೆಯೂ ಹಲವಷ್ಟು ಕುಟುಂಬ ಸದಸ್ಯರು ಕೂತು ಚರ್ಚೆ ಮಾಡಿದ್ದಾರೆ.