ನವದೆಹಲಿ: ದೇಶದಲ್ಲಿ ಕೊರೋನಾ ಸೋಂಕಿತರ ಸಂಖ್ಯೆ ಹೆಚ್ಚುತ್ತಲೇ ಇದೆ. ನಿನ್ನೆ 95 ಇದ್ದ ಕೊರೋನಾ ಸೋಂಕಿತರ ಸಂಖ್ಯೆ ಇವತ್ತು 119ಕ್ಕೆ ಜಗಿದಿದೆ.
ರಾಜ್ಯಗಳ ಪೈಕಿ ಮಹಾರಾಷ್ಟ್ರದಲ್ಲಿ ಮಾರಕ ಸೋಂಕು ವಿಪರೀತ ವೇಗದಲ್ಲಿ ಹರಡುತ್ತಿದ್ದು 38 ಮಂದಿಗೆ ವೈರಸ್ ಹಬ್ಬಿದೆ. ಕೇರಳದಲ್ಲಿ ಸೋಂಕಿತರ ಸಂಖ್ಯೆ 24 ಆಗಿದೆ. ಲಡಾಖ್, ಜಮ್ಮು, ಭುವನೇಶ್ವರ, ಹೈದ್ರಾಬಾದ್, ತಿರುವನಂತಪುರಂನಲ್ಲಿ ಹೊಸ ಪ್ರಕರಣಗಳು ಪತ್ತೆಯಾಗಿವೆ.
ತಿರುವನಂತಪುರದಲ್ಲಿ ಸ್ಪೇನ್‍ನಿಂದ ಹಿಂತಿರುಗಿದ ವೈದ್ಯರೊಬ್ಬರಲ್ಲಿ ಸೋಂಕು ಕಂಡುಬಂದಿದ್ದು, 25 ವೈದ್ಯರು ಸೇರಿ 75 ಮಂದಿ ಮೇಲೆ ನಿಗಾ ಇಡಲಾಗಿದೆ.
ಈ ಮಧ್ಯೆ, ತ್ರಿಶ್ಯೂರಿನಲ್ಲಿ ಅಮಾನವೀಯ ಘಟನೆ ನಡೆದಿದೆ. ಸೌದಿಯಿಂದ ವಾಪಸ್ ಆದ ವೃದ್ಧದಂಪತಿಗೆ ಕೊರೋನಾ ನೆಗೆಟಿವ್ ಬಂದಿತ್ತು. ಆದರೂ ಮುಂಜಾಗ್ರತಾ ಕ್ರಮವಾಗಿ ಸ್ವಯಂ ಗೃಹಬಂಧನದಲ್ಲಿದ್ದ ವೃದ್ಧದಂಪತಿಗೆ ನೆರೆ ಹೊರೆಯವರು ಕಿರುಕುಳ ನೀಡಿದ್ದಾರೆ. ಬಾಗಿಲಿಗೆ ಬೀಗ ಹಾಕಿ ಸ್ಟಿಕ್ಕರ್ ಅಂಟಿ, ಕಿರುಕುಳ ನೀಡಿದ್ದಾರೆ. ಸಂಬಂಧ ವೃದ್ಧ ದಂಪತಿ ನೀಡಿದ ದೂರಿನ ಮೇರೆಗೆ ಪೊಲೀಸರು ನಾಲ್ವರನ್ನು ಬಂಧಿಸಿದ್ದಾರೆ.
ಗುರುಗ್ರಾಮದ ಆಸ್ಪತ್ರೆಯಿಂದ ಸೋಂಕಿತನೊಬ್ಬ ಪರಾರಿಯಾಗಿದ್ದಾನೆ. ನಗರ ಪ್ರದೇಶಗಳಿಗೆ ಸೀಮಿತವಾಗಿದ್ದ ಶಾಲಾಕಾಲೇಜುಗಳ ರಜೆಯನ್ನು ಗ್ರಾಮೀಣ ಭಾಗಕ್ಕೂ ಮಹಾರಾಷ್ಟ್ರ ಸರ್ಕಾರ ವಿಸ್ತರಿಸಿದೆ.
50ಕ್ಕೂ ಹೆಚ್ಚು ಮಂದಿ ಒಂದು ಕಡೆ ಸೇರುವಂತೆ ಇಲ್ಲ ದೆಹಲಿ ಸರ್ಕಾರ ಆದೇಶ ನೀಡಿದೆ. ಸಾರಿಗೆ ಬಸ್‍ಗಳನ್ನು ಶುದ್ಧೀಕರಿಸಲು ಸೂಚಿಸಲಾಗಿದೆ. ಕೊರೋನಾ ಬಗ್ಗೆ ಸುಳ್ಳುಸುದ್ದಿ ಹಬ್ಬಿಸಿದ ಆರೋಪದ ಮೇಲೆ ವ್ಯಕ್ತಿ ಮೇಲೆ ಎಫ್‍ಐಆರ್ ಹಾಕಿದೆ. ಕೊರೋನಾ ಬಗ್ಗೆ ಭಯ ಬೇಡ ಜಾಗ್ರತೆ ಇರಲಿ ಎಂದು ಪ್ರಧಾನಿ ಮೋದಿ ಸಂದೇಶ ನೀಡಿದ್ದಾರೆ.