ಕೋಲಾರಕ್ಕೆ ಕೊರೊನಾ ಭಯ!- ಕೆಜಿಎಫ್‍ಗೆ ಹೊಂದಿಕೊಂಡಿರುವ ವಿ.ಕೋಟಾದಲ್ಲಿ 5 ಪ್ರಕರಣ

Public TV
2 Min Read
KLR CORONA

ಕೋಲಾರ: ಲಾಕ್‍ಡೌನ್ ಸಡಿಲಿಕೆ ಹಾಗೂ ಗಡಿ ರಾಜ್ಯಗಳಲ್ಲಿ ಪತ್ತೆಯಾಗಿರುವ ಕೊರೊನಾ ಪ್ರರಕಣಗಳ ಸಂಖ್ಯೆಯಿಂದ ಜಿಲ್ಲೆಯ ಜನರದಲ್ಲಿ ಆತಂಕ ಮೂಡಿದ್ದು, ಗ್ರೀನ್ ಝೋನ್‍ನಲ್ಲಿರುವ ಜಿಲ್ಲೆ ತನ್ನ ಬಣ್ಣ ಬದಲಿಸುವ ಭಯ ಶುರುವಾಗಿದೆ.

ರಾಜ್ಯದಲ್ಲಿ ಗ್ರೀನ್ ಝೋನ್‍ನಲ್ಲಿರುವ ಜಿಲ್ಲೆಗಳ ಪೈಕಿ ಕೋಲಾರವೂ ಒಂದು. ಆದರೆ ಕೋಲಾರ ಗ್ರೀನ್ ಝೋನ್‍ನಲ್ಲಿದ್ದರು ಡೇಂಜರ್ ಝೋನ್‍ನಲ್ಲಿರುವ ಜಿಲ್ಲೆಗಳೊಂದಿಗೆ ಗಡಿ ಹಂಚಿಕೊಂಡಿದೆ. ಜಿಲ್ಲೆಯ ನೆರೆಯ ಆಂಧ್ರಪ್ರದೇಶ ಹಾಗೂ ತಮಿಳುನಾಡಿನ ಸುತ್ತಲೂ ಕೊರೊನಾ ಮಹಾಮಾರಿ ತನ್ನ ಅಟ್ಟಹಾಸ ಮೆರೆಯುತ್ತಿದೆ. ಆಂಧ್ರದ ಗಡಿ ಭಾಗವಾದ ಚಿತ್ತೂರು ಜಿಲ್ಲೆಯ ವಿ.ಕೋಟೆ ಬಳಿ ಐದು ಜನರಲ್ಲಿ ಕೊರೊನಾ ಸೋಂಕು ಪತ್ತೆಯಾಗಿದೆ. ನಮ್ಮ ರಾಜ್ಯದ ಗಡಿಗೆ ಕೇವಲ ಒಂದು ಕಿ.ಮೀ. ದೂರದ ಪ್ರದೇಶದಲ್ಲಿ ಕೊರೊನಾ ಸೋಂಕು ಪತ್ತೆಯಾಗಿದೆ.

KLR V KOTA a

ಸೋಂಕಿತ ವ್ಯಕ್ತಿ ಕೋಲಾರ ಜಿಲ್ಲೆಯ ಗಡಿಯ ಮೂರು ಹೋಬಳಿ ಕೇಂದ್ರದಲ್ಲಿ ಓಡಾಡಿರುವ ಟ್ರಾವಲ್ ಹಿಸ್ಟರಿ ಭಯ ಸೃಷ್ಠಿಸಿದೆ. ತರಕಾರಿ ಮಾರಾಟ ಮಾಡುವ ವ್ಯಕ್ತಿಯಲ್ಲಿ ಸೋಂಕು ಕಾಣಿಸಿಕೊಂಡಿದೆ. ಈತ ಚೆನ್ನೈನ ಮಾರುಕಟ್ಟೆಗೆ ಹೋದಾಗ ಸೋಂಕು ತಗುಲಿರಬಹುದೆಂದು ಹೇಳಲಾಗುತ್ತಿದೆ. ಕೋಲಾರ ಜಿಲ್ಲೆಯ ಮೂರು ಹೋಬಳಿಗಳ ರೈತರಿಂದ ತರಕಾರಿ ಖರೀದಿ ಮಾಡಿ, ನಂತರ ಅವರಿಗೆ ಹಣ ಕೊಡಲು ಸೋಂಕಿತ ವ್ಯಕ್ತಿ ಬಂದು ಹೋಗಿರುವುದಾಗಿ ತಿಳಿದು ಬಂದಿದೆ. ಇದರ ಜೊತೆಗೆ ಆಂಧ್ರದ ವಿ.ಕೋಟ ಪ್ರದೇಶವನ್ನು ಕಂಟೈನ್ಮೆಂಟ್ ಪ್ರದೇಶ ಎಂದು ಗುರುತಿಸಲು ಸಿದ್ಧತೆ ಮಾಡುಕೊಂಡಿದ್ದು, ಆ ವ್ಯಾಪ್ತಿಗೆ ನಮ್ಮ ಜಿಲ್ಲೆಯ ಕೆಲವು ಗ್ರಾಮಗಳು ಒಳಪಡುವ ಸಾಧ್ಯತೆ ಹೆಚ್ಚಾಗಿದೆ.

ಮಾಲೂರು ಮೂಲದ ವ್ಯಕ್ತಿ ಗುಜರಾತ್‍ನ ಗೋದ್ರಾದಿಂದ ಕೋಲಾರಕ್ಕೆ ಬರುತ್ತಿದ್ದ 15 ಜನರ ಪೈಕಿ ಒಬ್ಬರಲ್ಲಿ ಕೊರೊನಾ ಸೋಂಕು ಖಚಿತವಾಗಿದೆ. ಸೋಂಕಿತನಿಗೆ ಬೆಂಗಳೂರಿನ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡುತ್ತಿದ್ದು, ಆತನ ಪ್ರಥಮ ಸಂಪರ್ಕದಲ್ಲಿದ್ದವರನ್ನು ಬೆಂಗಳೂರಿನಲ್ಲೇ ಕ್ವಾರಂಟೈನ್ ಮಾಡಲಾಗಿದೆ. ಜಿಲ್ಲೆಯ ಕೃಷ್ಣಗಿರಿ ಜಿಲ್ಲೆಗೆ ಹೊಂದಿಕೊಂಡಂತೆ ಸೂಳಿಗೆರೆ, ಬೇರಿಕೆ ಪ್ರದೇಶಗಳಲ್ಲೂ ಸೋಂಕಿತ ವ್ಯಕ್ತಿಗಳಿದ್ದು, ಅವರು ಕೂಡಾ ನಮ್ಮ ಜಿಲ್ಲೆಯ ಗಡಿಗೆ ಸಮೀಪವಿರುವ ಕಾರಣ ಈ ಭಾಗದಿಂದಲೂ ಸೋಂಕು ಜಿಲ್ಲೆಗೆ ಹರಡುವ ಆತಂಕ ಹೆಚ್ಚಾಗಿದೆ.

KLR V KOTA

ಇದು ಅಂತರರಾಜ್ಯ ಗಡಿಗಳ ವಿಚಾರವಾದರೆ, ರೆಡ್‍ಝೋನ್ ನಲ್ಲಿರುವ ಅಂತರ ಜಿಲ್ಲೆಗಳಾದ ಬೆಂಗಳೂರು ಗ್ರಾಮಾಂತರ ಮತ್ತು ನಗರ ಜಿಲ್ಲೆಗಳನ್ನು ಒಂದು ವಲಯವನ್ನಾಗಿ ಮಾಡಿ ಜನರ ಓಡಾಟಕ್ಕೆ ವಿನಾಯಿತಿ ನೀಡಿರುವುದು ಮತ್ತೊಂದು ರೀತಿಯ ಆತಂಕಕ್ಕೆ ಕಾರಣವಾಗಿದೆ. ಸೋಂಕಿತ ವ್ಯಕ್ತಿಗಳು ಗ್ರೀನ್ ಝೋನ್ ಪ್ರದೇಶದಲ್ಲಿ ಸೋಂಕು ಹರಡುವ ಭೀತಿ ಎಲ್ಲರಲ್ಲೂ ಹೆಚ್ಚಾಗಿದೆ. ಹಾಗಾಗಿ ಗಡಿಯಲ್ಲಿ ಮತ್ತಷ್ಟು ಬಿಗಿ ಪೊಲೀಸ್ ಬಂದೋಬಸ್ತ್ ವ್ಯವಸ್ಥೆ ಮಾಡಲಾಗಿದೆ. ಗಡಿಯಲ್ಲಿರುವ ಗ್ರಾಮ ಪಂಚಾಯತಿಗಳಲ್ಲಿ ಡಂಗುರ ಹಾಕಿಸಿ ಜಾಗೃತಿ ಮೂಡಿಸುವುದು. ಗಡಿ ಸಂಪರ್ಕ ಸೀಲ್ ಮಾಡಲು ಜಿಲ್ಲಾಡಳಿತ ಚಿಂತನೆ ನಡೆಸಿದ್ದು, ಕೋಲಾರ ಉಪ ವಿಭಾಗಾಧಿಕಾರಿ ಸೋಮಶೇಖರ್ ವರದಿ ಆಧರಿಸಿ ಮುಂದಿನ ಕ್ರಮವಹಿಸುವುದಾಗಿ ಕೋಲಾರ ಜಿಲ್ಲಾಧಿಕಾರಿ ಸತ್ಯಭಾಮ ತಿಳಿಸಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *