ChikkamagaluruCoronaDistrictsKarnatakaLatestMain Post

ವಸತಿ ಶಾಲೆಯಲ್ಲಿ ಕೊರೊನಾ ಸ್ಫೋಟ- 93 ವಿದ್ಯಾರ್ಥಿಗಳು ಸೇರಿ 107 ಮಂದಿಗೆ ಪಾಸಿಟಿವ್

– ವಿದ್ಯಾರ್ಥಿಗಳಿಗೆ ಸೋಂಕು ಅಂಟಿದ್ದು ಎಲ್ಲಿಂದ ಎಂಬುವುದೇ ನಿಗೂಢ
– ಟೆನ್ಷನ್‍ನಲ್ಲಿ ಜಿಲ್ಲಾಡಳಿತ

ಚಿಕ್ಕಮಗಳೂರು: ಒಂದೇ ದಿನ ಒಂದೇ ಸ್ಥಳಕ್ಕೆ ಐದು ಸಾವಿರಕ್ಕೂ ಅಧಿಕ ಪ್ರವಾಸಿಗರು. ಮೂರೇ ದಿನಕ್ಕೆ ಒಂದೇ ಶಾಲೆಯ 100ಕ್ಕೂ ಹೆಚ್ಚು ಮಕ್ಕಳಲ್ಲಿ ಕೊರೊನಾ ಪತ್ತೆ. ಕೊರೊನಾ ಮೂರನೇ ಅಲೆ ಆರಂಭವಾಯ್ತೋ ಅಥವಾ ಪ್ರವಾಸಿಗರಿಂದಲೇ ಕೊರೊನಾ ಹರಡುತ್ತಿದ್ಯೋ ಗೊತ್ತಿಲ್ಲ. ಆದ್ರೆ ರಾಜ್ಯದ ವಿವಿಧ ಮೂಲೆಗಳಿಂದ ಬರ್ತಿರೋ ಪ್ರವಾಸಿಗರೇ ಆ ಜಿಲ್ಲೆಗೆ ಮಗ್ಗಲ ಮುಳ್ಳಾಗಿದ್ದಾರೆ. ಹೀಗಾಗಿ ಜಿಲ್ಲೆಯ ಜನ ಪ್ರವಾಸಿಗರಿಗೆ ನಿರ್ಬಂಧ ಹೇರುವಂತೆ ಆಗ್ರಹಿಸಿದ್ದಾರೆ.

ಚಿಕ್ಕಮಗಳೂರು ಜಿಲ್ಲೆ ಕೊಪ್ಪ ತಾಲೂಕಿನ ಬಾಳೆಹೊನ್ನೂರು ಸಮೀಪದ ಸೀಗೋಡು ಗ್ರಾಮದಲ್ಲಿರುವ ಜವಾಹರ್ ನವೋದಯ ವಸತಿ ಶಾಲೆಯ 93 ಮಕ್ಕಳಲ್ಲಿ ಕೊರೊನಾ ಪತ್ತೆಯಾಗಿದೆ. ಆದರೆ ಈ ಸೋಂಕು ಎಲ್ಲಿಂದ ಬಂತು ಅನ್ನೋದೇ ಜಿಲ್ಲಾಡಳಿತಕ್ಕೆ ತಲೆನೋವಾಗಿದೆ. 6 ರಿಂದ 12ನೇ ತರಗತಿವರೆಗೆ ಇರುವ ವಸತಿ ಶಾಲೆಯ ಮಕ್ಕಳು 2 ತಿಂಗಳ ಹಿಂದಷ್ಟೆ ಶಾಲೆಗೆ ಬಂದಿದ್ದು, ಹೊರಗೆ ಎಲ್ಲೂ ಹೋಗಿಲ್ಲ. ಆಟ -ಪಾಠ ಎಲ್ಲವೂ ವಸತಿ ಶಾಲೆ ಒಳಗೆ ಆಗುತ್ತಿದೆ. ಆರಂಭದಲ್ಲಿ ಇಬ್ಬರು ಶಿಕ್ಷಕರು, ಮೂವರು ಸಿಬ್ಬಂದಿಗಳಲ್ಲಿ ಪಾಸಿಟಿವ್ ಪತ್ತೆಯಾಗಿತ್ತು. ಶಿಕ್ಷಕರು ಕೂಡ ಶಾಲೆಯಿಂದ ಹೊರಬಂದಿಲ್ಲ. ಸದ್ಯ ಜಿಲ್ಲಾಡಳಿತ ಸೋಂಕಿನ ನಿಗೂಢ ಮೂಲ ಹುಡುಕಲು ಪರದಾಡುತ್ತಿದೆ.

ಮಕ್ಕಳ ಆರೋಗ್ಯದ ಹಿತದೃಷ್ಠಿಯಿಂದ ಶಾಲೆಯಲ್ಲಿರುವ 400ಕ್ಕೂ ಅಧಿಕ ಮಕ್ಕಳನ್ನ ಪರೀಕ್ಷೆಗೆ ಒಳಪಡಿಸಲಾಗಿತ್ತು. ಅದರಲ್ಲಿ 93 ವಿದ್ಯಾರ್ಥಿಗಳು ಸೇರಿದಂತೆ ಒಟ್ಟು 107 ಮಂದಿಯಲ್ಲಿ ಸೋಂಕು ಪತ್ತೆಯಾಗಿದೆ. ಶಾಲೆಯನ್ನೇ ಸೀಲ್‍ಡೌನ್ ಮಾಡಿರೋ ಜಿಲ್ಲಾಡಳಿತ ಶಾಲೆ ಆವರಣದಲ್ಲೇ ಮೂರು ಅಂಬುಲೆನ್ಸ್ ಬಿಟ್ಟಿದ್ದು, ಶಾಲೆಗೆ ದಿನಕ್ಕೆರಡು ಬಾರಿ ಸ್ಯಾನಿಟೈಸ್ ಮಾಡುತ್ತಿದ್ದು, ಆರೋಗ್ಯ ಇಲಾಖೆಯ ಅಧಿಕಾರಿಗಳು, ವೈದ್ಯರು, ಸಿಬ್ಬಂದಿ ಶಾಲೆಯಲ್ಲೇ ಮೊಕ್ಕಾಂ ಹೂಡಿದ್ದಾರೆ. ಇದನ್ನೂ ಓದಿ: ತುಮಕೂರಿನಲ್ಲಿ ಮತ್ತೆ ಕೊರೊನಾ ಭೀತಿ – 42 ಪುಟ್ಟ ಮಕ್ಕಳಿಗೆ ವಕ್ಕರಿಸಿದ ಕೋವಿಡ್

ಚಿಕ್ಕಮಗಳೂರಿಗೆ ಪ್ರವಾಸಿಗರ ಸಂಖ್ಯೆ ಹೆಚ್ಚಾಗಿದ್ದು ಇದು ಸಹ ಜಿಲ್ಲಾಡಳಿತದ ನಿದ್ದೆಗೆಡಿಸಿದೆ. ಕಳೆದ ಭಾನುವಾರ ಒಂದೇ ದಿನ ಕೇವಲ ಮುಳ್ಳಯ್ಯನಗಿರಿಗೆ 5000 ಸಾವಿರಕ್ಕೂ ಅಧಿಕ ಪ್ರವಾಸಿಗರು ಭೇಟಿ ನೀಡಿದ್ದಾರೆ. ಬಂದವರು ಸರ್ಕಾರ ಕೊರೊನಾ ನಿಯಮಾವಳಿಗಳನ್ನ ಗಾಳಿಗೆ ತೂರಿದವರೇ ಹೆಚ್ಚು. ಜಿಲ್ಲೆಯ ಹೋಂ ಸ್ಟೇ, ರೆಸಾರ್ಟ್, ಹೋಟೆಲ್ ಹಾಗೂ ಲಾಡ್ಜ್‍ಗಳಲ್ಲಿ ಉಳಿಯುತ್ತಿದ್ದಾರೆ. ಇದೇ ಇಂದಿನ ಸ್ಥಿತಿಗೆ ಕಾರಣ ಎಂದು ಜಿಲ್ಲೆಯ ಜನ ಪ್ರವಾಸಿಗರ ವಿರುದ್ಧ ಅಸಾಮಾಧಾನ ಕೂಡ ಹೊರಹಾಕಿದ್ದಾರೆ. ಶಾಲೆಯ ಮಕ್ಕಳ ಪೋಷಕರು ಕೂಡ ನಮ್ಮ ಮಕ್ಕಳನ್ನ ಮನೆಗೆ ಕಳಿಸಿ ನಾವೇ ನೋಡಿಕೊಳ್ಳುತ್ತೇವೆ ಎಂದು ಜಿಲ್ಲಾಡಳಿತಕ್ಕೆ ಮನವಿ ಮಾಡಿದ್ದಾರೆ.

ಒಟ್ಟಾರೆ ಇಡೀ ರಾಜ್ಯದಲ್ಲೇ ಇಷ್ಟೊಂದು ಪ್ರಮಾಣದಲ್ಲಿ ಯಾವ ಶಾಲೆಯಲ್ಲೂ ಕೊರೊನಾ ಕೇಸ್‍ಗಳು ಪತ್ತೆಯಾಗಿಲ್ಲ. ಅಂತದ್ರಲ್ಲಿ ಕಾಫಿನಾಡಿನ ಶಾಲೆಯೊಂದರಲ್ಲಿ ಈ ಪರಿ ಕೊರೊನಾ ಕೇಸ್ ಗಳು ದೃಢಪಟ್ಟಿರೋದು ಜನರ ಆತಂಕಕ್ಕೆ ಕಾರಣವಾಗಿದೆ.

Leave a Reply

Your email address will not be published.

Back to top button