– ಸಾಲ ಮಾಡಿ ಬೆಳೆದ ರೈತನಿಗೆ ಕೊರೊನಾ ಬರೆ
ಚಿಕ್ಕಬಳ್ಳಾಪುರ: ಕೊರೊನಾದಿಂದ ಬರೋಬ್ಬರಿ ಸುಮಾರು 20 ಲಕ್ಷ ಮೌಲ್ಯದ ಜರ್ಬೆರಾ ಹೂಗಳು ತಿಪ್ಪೆಗುಂಡಿ ಸೇರಿರುವ ಘಟನೆ ಚಿಕ್ಕಬಳ್ಳಾಪುರ ತಾಲೂಕಿನ ತಮ್ಮನಾಯಕನಹಳ್ಳಿ ಗ್ರಾಮದಲ್ಲಿ ನಡೆದಿದೆ.
ರೈತ ವಿಜಯ್ ಕುಮಾರ್ ಬ್ಯಾಂಕ್‍ನಲ್ಲಿ ಸಾಲ ಮಾಡಿ ಒಂದು ಎಕರೆ ಪಾಲಿಹೌಸ್‍ನಲ್ಲಿ ಜರ್ಬೆರಾ ಹೂ ಬೆಳೆದಿದ್ದರು. ಈಗ ಹೂ ಮಾರಾಟ ಮಾಡಲಾಗದೆ ದಿಕ್ಕು ತೋಚದಂತಾಗಿದ್ದಾರೆ. ಪ್ರತಿದಿನ ಸಾವಿರಾರು ಹೂಗಳು ಕಟಾವಿಗೆ ಅರಳಿ ನಿಲ್ಲುತ್ತಿವೆ. ಆದರೆ ಲಾಕ್‍ಡೌನ್ ಹಿನ್ನೆಲೆಯಲ್ಲಿ ಮದುವೆ ಹಾಗೂ ಶುಭ ಸಮಾರಂಭಗಳಿಲ್ಲ. ಹೀಗಾಗಿ ಶುಭ ಸಮಾರಂಭಗಳಲ್ಲಿ ಡೆಕೋರೇಷನ್‍ಗೆ ಬಳಸುವ ಜರ್ಬೆರಾ ಹೂಗಳನ್ನ ಈಗ ಕೇಳೋರಿಲ್ಲ.
Advertisement
Advertisement
ಇನ್ನೂ ಹೂಗಳನ್ನ ಗಿಡಗಳಲ್ಲಿ ಹಾಗೆ ಬಿಡುವಂತಿಲ್ಲ. ಬಿಟ್ಟರೆ ಗಿಡ ಹಾಳಾಗುತ್ತೆ, ಅಲ್ಲದೇ ರೋಗ ತಗಲುವ ಸಾಧ್ಯತೆಯಿರುತ್ತೆ. ಹೀಗಾಗಿ ವಿಧಿಯಿಲ್ಲದೆ ಪ್ರತಿದಿನ ಕಟಾವಿಗೆ ಬರುವ ಹೂಗಳನ್ನ ಕೂಲಿಯಾಳುಗಳ ಮೂಲಕ ಕಟಾವು ಮಾಡಿಸಿ ತಿಪ್ಪೆಗೆ ಸುರಿಸುತ್ತಿದ್ದಾರೆ. ಕಳೆದ 20 ದಿನಗಳಿಂದಲೂ ಇದೇ ರೀತಿ ಮುಂದುವರಿದಿದ್ದು, ಪ್ರತಿದಿನ ಹೂಗಳನ್ನ ಕಿತ್ತು ತಿಪ್ಪೆಗುಂಡಿಗೆ ಹಾಕಲಾಗುತ್ತಿದೆ.
Advertisement
ಕೆಂಪು, ಹಳದಿ, ಬಿಳಿ, ಪಿಂಕ್, ಆರೆಂಜ್ ಸೇರಿದಂತೆ 6 ತರಹದ ಬಣ್ಣ ಬಣ್ಣದ ಜರ್ಬೆರಾ ಹೂಗಳನ್ನ ಬೆಳೆಯಲಾಗುತ್ತಿದೆ. ಆದರೆ ವಿಧಿಯಿಲ್ಲದೆ ಬಣ್ಣ ಬಣ್ಣದ ಹೂಗಳು ತಿಪ್ಪೆಗುಂಡಿ ಪಾಲಾಗಿವೆ. ದಿನ ಸುಮಾರು 1000 ಕಟ್ಟು ಅಂದರೆ 10 ಸಾವಿರ ಹೂ ಕಟಾವಿಗೆ ಬರುತ್ತಿವೆ. ಇದರಿಂದ ದಿನ ಒಂದು ಲಕ್ಷ ರೂಪಾಯಿ ನಷ್ಟವಾಗುತ್ತಿದೆ. ಬ್ಯಾಂಕಿನಲ್ಲಿ ಲಕ್ಷಾಂತರ ರೂಪಾಯಿ ಸಾಲ ಮಾಡಿ ಪುಣೆಯಿಂದ ಜರ್ಬೆರಾ ಗಿಡ ತಂದು ಬೆಳೆಸಿದ್ದಾರೆ. ಆದರೆ ಇದುವರೆಗೂ ಸರ್ಕಾರದಿಂದ ಪಾಲಿಹೌಸ್‍ಗೆ ಕೊಡಬೇಕಿದ್ದ ಸಹಾಯಧನವೂ ಸಿಕ್ಕಿಲ್ಲ ಅಂತ ರೈತ ವಿಜಯ್ ಕುಮಾರ್ ಅಳಲು ತೋಡಿಕೊಂಡಿದ್ದಾರೆ.
Advertisement
ಎಂಜಿನಿಯರಿಂಗ್ ವ್ಯಾಸಂಗ ಮಾಡಿದ್ದ ರೈತ ವಿಜಯ್ ಕುಮಾರ್ ಮಗ ರೈತನಾಗಿ ಈ ಹೂ ತೋಟ ನೋಡಿಕೊಳ್ಳುತ್ತಿದ್ದ. ನಾನು ಸಹ ಕಷ್ಟ ಪಟ್ಟು ಕೆಲಸ ಮಾಡುತ್ತಿದ್ದೆ. ಆದರೆ ಈಗ ಪಟ್ಟ ಕಷ್ಟಕ್ಕೆ ಪ್ರತಿಫಲ ಸಿಗದೆ ನೋವು ಪಡುವಂತಾಗಿದೆ ಎಂದು ರೈತನ ಮಗ ಮಧು ಹೇಳಿದ್ದಾನೆ.