-ಸುಳಿವು ಕೊಟ್ಟವರಿಗೆ 20 ಲಕ್ಷ ರೂ. ಬಹುಮಾನ
ಶ್ರೀನಗರ: ಜಮ್ಮು ಮತ್ತು ಕಾಶ್ಮೀರದ (Jammu and Kashmir) ದೋಡಾದಲ್ಲಿ ಸೇನೆಯ ಚೆಕ್‍ಪೋಸ್ಟ್ ಮೇಲೆ ನಡೆದ ದಾಳಿಯಲ್ಲಿ (Doda terrorist attack) ಭಾಗಿಯಾಗಿದ್ದ ನಾಲ್ವರು ಉಗ್ರರ ರೇಖಾಚಿತ್ರವನ್ನು ಜಮ್ಮು ಮತ್ತು ಕಾಶ್ಮೀರದ ಪೊಲೀಸರು ಬಿಡುಗಡೆ ಮಾಡಿದ್ದಾರೆ. ಭಯೋತ್ಪಾದಕರ ಬಂಧನಕ್ಕೆ ಸುಳಿವು ನೀಡಿದವರಿಗೆ 20 ಲಕ್ಷ ರೂ. ಬಹುಮಾನ ನೀಡುವುದಾಗಿ ಕಾಶ್ಮೀರ ಪೊಲೀಸರು (Jammu and Kashmir Police) ಘೋಷಿಸಿದ್ದಾರೆ.
ಮಂಗಳವಾರ (ಜೂ.11) ಭದೇರ್ವಾಹ್‍ನ ಚಟರ್‌ಗಲ್ಲದಲ್ಲಿ 4 ರಾಷ್ಟ್ರೀಯ ರೈಫಲ್ಸ್ ಮತ್ತು ಪೊಲೀಸರ ಜಂಟಿ ಚೆಕ್‍ಪೋಸ್ಟ್ ಮೇಲೆ ಭಯೋತ್ಪಾದಕರು ಗುಂಡಿನ ದಾಳಿ ನಡೆಸಿದ್ದರು. ಅಲ್ಲದೇ ಜಿಲ್ಲೆಯ ಗಂಡೋ ಪ್ರದೇಶದಲ್ಲಿ ಬುಧವಾರ ಶೋಧ ಕಾರ್ಯದ ವೇಳೆ ಉಗ್ರರು ದಾಳಿ ನಡೆಸಿದ್ದರು. ಈ ವೇಳೆ ಓರ್ವ ಪೊಲೀಸ್ ಸಿಬ್ಬಂದಿ ಸೇರಿ ಆರು ಭದ್ರತಾ ಸಿಬ್ಬಂದಿ (Indian Army) ಗಾಯಗೊಂಡಿದ್ದರು. ಇದನ್ನೂ ಓದಿ: ಜಮ್ಮು-ಕಾಶ್ಮೀರದಲ್ಲಿ ಎನ್‌ಕೌಂಟರ್; ಸೇನಾ ದಾಳಿಗೆ ಇಬ್ಬರು ಉಗ್ರರು ಬಲಿ
ಉಗ್ರರು ಭದರ್ವಾ, ಥಾತ್ರಿ, ಗಂಡೋಹ್‍ನ ಮೇಲ್ಭಾಗದಲ್ಲಿ ಭಯೋತ್ಪಾದಕ ಚಟುವಟಿಕೆಗಳನ್ನು ನಡೆಸುತ್ತಿದ್ದಾರೆ ಎಂಬ ಮಾಹಿತಿ ಸಿಕ್ಕಿದೆ. ಪ್ರತಿ ಭಯೋತ್ಪಾದಕರ ಬಗ್ಗೆ ಮಾಹಿತಿ ನೀಡಿದವರಿಗೆ 5 ಲಕ್ಷ ನಗದು ಬಹುಮಾನವನ್ನೂ ಘೋಷಿಸಲಾಗಿದೆ. ಈ ಭಯೋತ್ಪಾದಕರ ಉಪಸ್ಥಿತಿ ಮತ್ತು ಚಲನವಲನದ ಬಗ್ಗೆ ಮಾಹಿತಿ ನೀಡುವಂತೆ ಜನರಿಗೆ ಮಾಹಿತಿ ನೀಡಿದ್ದೇವೆ ಎಂದು ಪೊಲೀಸರು ತಿಳಿಸಿದ್ದಾರೆ.
ಮಂಗಳವಾರ ರಾತ್ರಿ ರಿಯಾಸಿ ಜಿಲ್ಲೆಯಲ್ಲಿ ಮಾತಾ ವೈಷ್ಣೋ ದೇವಿ ದೇಗುಲಕ್ಕೆ ತೆರಳುತ್ತಿದ್ದ ಯಾತ್ರಾರ್ಥಿಗಳಿದ್ದ ಬಸ್ ಮೇಲೆ ಉಗ್ರರು ದಾಳಿ ನಡೆಸಿದ್ದರು. ಈ ವೇಳೆ ಬಸ್ ಆಳವಾದ ಕಮರಿಗೆ ಉರುಳಿ 9 ಜನ ಸಾವನ್ನಪ್ಪಿ, 41 ಮಂದಿ ಗಾಯಗೊಂಡಿದ್ದರು. ಈ ಬಗ್ಗೆಯೂ ಪೊಲೀಸರು ಹಾಗೂ ಸೇನೆ ಉಗ್ರರ ಮಾಹಿತಿ ಕಲೆ ಹಾಕುತ್ತಿದೆ. ಈ ಸಂಬಂಧ ಉಗ್ರರ ಮಾಹಿತಿ ನೀಡಿದವರಿಗೆ ಸೂಕ್ತ ಬಹುಮಾನ ನೀಡುವುದಾಗಿ ಪೊಲೀಸರು ಘೋಷಿಸಿದ್ದಾರೆ. ಇದನ್ನೂ ಓದಿ: ಜಮ್ಮು ಕಾಶ್ಮೀರದ ದೋಡಾದ ಸೇನಾ ಪೋಸ್ಟ್ ಮೇಲೆ ಉಗ್ರರ ದಾಳಿ