ನವದೆಹಲಿ: ಸ್ನೇಹಿತೆಯ ಪತಿ ಪೊಲೀಸ್ ಮಗಳನ್ನು ಕತ್ತು ಹಿಸುಕಿ ಕೊಂದ ಸುದ್ದಿ ದೆಹಲಿಯಲ್ಲಿ ಬೆಳಕಿಗೆ ಬಂದಿದೆ.
ಪೊಲೀಸ್ ಅಧಿಕಾರಿ ಮಗಳನ್ನು ಆಕೆಯ ಸ್ನೇಹಿತೆಯ ಪತಿ ಕತ್ತು ಹಿಸುಕಿ ಕೊಂದಿದ್ದು, ಅಲ್ಲಿಂದ ಪರಾರಿಯಾಗಿದ್ದಾನೆ ಎಂದು ತನಿಖಾಧಿಕಾರಿಗಳು ತಿಳಿಸಿದ್ದಾರೆ. ಡಿಸಿಪಿ ಸಾಗರ್ ಸಿಂಗ್ ಕಲ್ಸಿ ಕೊಲೆ ಕುರಿತು ತನಿಖೆ ಮಾಡುತ್ತಿದ್ದಾರೆ. ಇದನ್ನೂ ಓದಿ: ನ್ಯಾಯ ಪಂಚಾಯ್ತಿ ನೆಪದಲ್ಲಿ ಮುಖಂಡನ ಕೊಲೆ – ಇಬ್ಬರ ಬಂಧನ, ಮೂವರಿಗಾಗಿ ಶೋಧ!
ಡಿಸಿಪಿ(ಉತ್ತರ) ಸಾಗರ್ ಸಿಂಗ್ ಕಲ್ಸಿ ಈ ಕುರಿತು ಮಾಹಿತಿ ನೀಡಿದ್ದು, ಶುಕ್ರವಾರ ಸಂಜೆ 7:56 ಕ್ಕೆ ಘಟನೆಯ ಬಗ್ಗೆ ಕರೆ ಮಾಡಿ ನಮಗೆ ಎಚ್ಚರಿಕೆ ನೀಡಲಾಯಿತು. ಕರೆ ಬಂದ ತಕ್ಷಣ ಸ್ಥಳಕ್ಕೆ ಬಂದು ನೊಡಿದಾಗ ರೂಮ್ ನಲ್ಲಿ ಮಹಿಳೆ ಶವ ಪತ್ತೆಯಾಗಿದೆ. ತನಿಖೆ ಮಾಡಿದ ನಂತರ ಕೊಲೆಯಾದವರು ಪೊಲೀಸ್ ಮಗಳು ಎಂಬುದು ತಿಳಿದುಬಂದಿದೆ. ನಂತರ ಆಕೆಯ ಕುಟುಂಬದವರಿಗೆ ಕರೆ ಮಾಡಿ ವಿಷಯ ತಿಳಿಸಲಾಗಿದೆ. ಪ್ರಸ್ತುತ ಆರೋಪಿ ವಿರುದ್ಧ ಎಫ್‍ಐಆರ್ ದಾಖಲಿಸಿದ್ದೇವೆ. ಇನ್ನು ಹೆಚ್ಚಿನ ತನಿಖೆ ನಡೆಯುತ್ತಿದೆ ಎಂದು ತಿಳಿಸಿದರು.
ಆರೋಪಿ ವಿಮಾ ಏಜೆಂಟ್ ಆಗಿ ಕೆಲಸ ಮಾಡುತ್ತಿದ್ದು, ಎರಡು ತಿಂಗಳ ಹಿಂದೆ ಕೆಲಸ ಕಳೆದುಕೊಂಡಿದ್ದಾನೆ. ಅವರ ಪತ್ನಿ ಅಂಗಡಿಯೊಂದರಲ್ಲಿ ಕೆಲಸ ಮಾಡುತ್ತಿದ್ದಾರೆ. ತನಿಖೆ ಮಾಡುವಾಗ ಮೃತಳ ತಾಯಿ, ನನ್ನ ಮಗಳಿಗೆ ತನ್ನ ಸ್ನೇಹಿತೆಯ ಪತಿಯಿಂದ ಕರೆ ಬಂದಿದೆ. ಈ ಹಿನ್ನೆಲೆ ಆಕೆ ಅವನ ಜೊತೆ ಹೋಗಿದ್ದಾಳೆ ಎಂದು ವಿವರಿಸಿದರು.
ಏನಿದು ಘಟನೆ?
ಸಂಜೆ 4 ಗಂಟೆಯ ಸುಮಾರಿಗೆ ಸ್ನೇಹಿತೆಯ ಪತಿ ನನ್ನ ಮಗಳಿಗೆ ಕರೆ ಮಾಡಿದ್ದು, ಆತ ನನ್ನ ಹೆಂಡತಿಗೆ ‘ಪ್ರೇಮಿಗಳ ದಿನ’ದ ಉಡುಗೊರೆಯಾಗಿ ಸೀರೆಯನ್ನು ಖರೀದಿಸಬೇಕು. ಅದಕ್ಕೆ ನಿನ್ನ ಸಹಾಯಬೇಕು ಎಂದು ಕೇಳಿಕೊಂಡನು. ಶಾಲೆಯಿಂದಲೂ ಅವರಿಬ್ಬರು ಒಳ್ಳೆಯ ಸ್ನೇಹಿತರು ಎಂದು ಮೃತಳ ತಾಯಿ ವಿವರಿಸಿದರು.
ಆತ ನನ್ನ ಮಗಳನ್ನು ಬೈಕ್ ನಲ್ಲಿ ಕರೆದುಕೊಂಡು ಹೋಗಲು ಬಂದನು. ಸಂಜೆ 5 ಗಂಟೆ ಸುಮಾರಿಗೆ, ನನ್ನ ಚಿಕ್ಕ ಮಗಳು ಮನೆಗೆ ಹಿಂದಿರುಗದ ಕಾರಣ ಅವಳಿಗೆ ಕರೆ ಮಾಡಿದೆ. ಆದರೆ ಅವಳ ಫೋನ್ ಸ್ವಿಚ್ ಆಫ್ ಆಗಿತ್ತು. ಅವಳು ಎಂದಿಗೂ ಸ್ವಿಚ್ ಆಫ್ ಮಾಡದ ಕಾರಣ ನಾವು ಚಿಂತಿತರಾಗಿದ್ದೆವು. ನಂತರ ನಾವು ಆಕೆಯ ಸ್ನೇಹಿತನಿಗೆ ಕರೆ ಮಾಡಲು ಪ್ರಾರಂಭಿಸಿದೆವು, ಅವರ ಫೋನ್ ಸಹ ಸ್ವಿಚ್ ಆಫ್ ಆಗಿತ್ತು ಎಂದು ತಿಳಿಸಿದರು. ಇದನ್ನೂ ಓದಿ: ‘ಡ್ಯಾಡಿಸ್ ಏಂಜೆಲ್’ – ಆಲಿಯಾ ವಿರುದ್ಧ ಸಿಡಿದೆದ್ದ ತಲೈವಿ
ರಾತ್ರಿ 9.30 ರ ಸುಮಾರಿಗೆ ನಮಗೆ ಪೊಲೀಸ್ ಠಾಣೆಯಿಂದ ಕರೆ ಬಂದಾಗ ಘಟನೆ ಬಗ್ಗೆ ನಮಗೆ ತಿಳಿಯಿತು. ಅವರು ನಮ್ಮನ್ನು ಸ್ಥಳಕ್ಕೆ ಬರುವಂತೆ ತಿಳಿಸಿದರು. ನನ್ನ ಮಗಳನ್ನು ಸ್ನೇಹಿತೆಯ ಪತಿಯೇ ಹತ್ಯೆಗೈದಿದ್ದಾನೆ ಎಂದು ಪೊಲೀಸರು ನಮಗೆ ತಿಳಿಸಿದಾಗ ನಾವು ಆಘಾತಕ್ಕೆ ಒಳಗಾದೆವು ಎಂದು ಹೇಳಿದರು.