Connect with us

International

ಮೊಸರು ಕಳ್ಳಿಯನ್ನು ಪತ್ತೆಹಚ್ಚಲು ಪೊಲೀಸರು ಡಿಎನ್‍ಎ ಟೆಸ್ಟ್ ಮಾಡಿದ್ರು!

Published

on

ಬೀಜಿಂಗ್: ತೈವಾನ್ ನಲ್ಲಿ ಮೊಸರು ಕಳ್ಳಿಯನ್ನು ಪತ್ತೆಹಚ್ಚಲು, ಪೊಲೀಸರು ಡೀಆಕ್ಸಿರೈಬೊ ನ್ಯೂಕ್ಲೀಯಿಕ್ ಆಮ್ಲ(ಡಿಎನ್‍ಎ) ಟೆಸ್ಟ್ ಮಾಡಿದ್ದು ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ.

ಚೈನಿಸ್ ಸಾಂಸ್ಕೃತಿಕ ವಿಶ್ವವಿದ್ಯಾನಿಲಯದ ಯುವತಿಯರು ತೈವಾನಿನ ತೈಪೆ ನಗರದಲ್ಲಿ ಒಂದೇ ಕೊಠಡಿಯಲ್ಲಿ ವಾಸವಾಗಿದ್ದರು. ಈ ವೇಳೆ ಯುವತಿಯೊಬ್ಬಳು ರೂಮಿನಲ್ಲಿ ಮೊಸರಿನ ಬಾಟಲಿಯನ್ನು ತಂದಿದ್ದಳು. ಆದರೆ ಆ ಮೊಸರನ್ನು ರೂಮಿನಲ್ಲಿದ್ದವರ ಪೈಕಿ ಯಾರೋ ಒಬ್ಬರು ಕುಡಿದು ಖಾಲಿ ಮಾಡಿದ್ದರು. ರೂಮಿಗೆ ವಾಪಾಸ್ಸಾದ ಬಳಿಕ ಮೊಸರಿನ ಖಾಲಿ ಬಾಟಲಿಯನ್ನು ನೋಡಿ, ಉಳಿದವರನ್ನು ಪ್ರಶ್ನಿಸಿದ್ದಾಳೆ. ಆದರೆ ಯಾರೂ ಸಹ ಈ ಬಗ್ಗೆ ಒಪ್ಪಿಕೊಂಡಿಲ್ಲ. ಇದರಿಂದ ಸಿಟ್ಟಿಗೆದ್ದ ಯುವತಿ ಪೊಲೀಸ್ ಠಾಣೆಗೆ ದೂರು ನೀಡಲು ತೆರಳಿದ್ದಾಳೆ.

ಪೊಲೀಸರ ಮುಂದೆ ಆದ ಘಟನೆಯನ್ನೆಲ್ಲಾ ವಿವರಿಸಿದಾಗ, ಪೊಲೀಸರು ಆಕೆಯ ದೂರನ್ನು ಸ್ವೀಕರಿಸಿದ್ದಾರೆ. ಆದರೆ ಬಾಟಲಿ ತುಂಬಾ ತೇವದಿಂದ ಕೂಡಿದ್ದರಿಂದ, ಫಿಂಗರ್ ಪ್ರಿಂಟ್ ತೆಗೆದುಕೊಳ್ಳಲು ಅಸಾಧ್ಯವಾಗಿತ್ತು. ಈ ವೇಳೆ ಯುವತಿ ರೂಮಿನಲ್ಲಿರುವ ಎಲ್ಲಾ ಯುವತಿಯರನ್ನು ಕರೆಸಿ, ಡಿಎನ್‍ಎ ಟೆಸ್ಟ್ ಮಾಡಿಸುವಂತೆ ಕೇಳಿದ್ದಾಳೆ. ಅದಕ್ಕೆ ಒಪ್ಪಿದ ಪೊಲೀಸರು ಐವರು ಸಹಪಾಠಿಗಳನ್ನು ಕರೆಸಿ, ಪರೀಕ್ಷೆ ನಡೆಸಿದ್ದರು. ಡಿಎನ್‍ಎ ವರದಿ ಬಂದ ಬಳಿಕ, ಐವರ ಪೈಕಿ ಇಬ್ಬರ ಮೇಲೆ ದೂರು ದಾಖಲಿಸಿಕೊಂಡಿದ್ದರು.

ಮೊಸರು ಕಳ್ಳಿಯನ್ನು ಪತ್ತೆಮಾಡಲು ಪೊಲೀಸರು ಡಿಎನ್‍ಎ ಟೆಸ್ಟ್ ಮಾಡಿಸಿದ್ದ ಸುದ್ದಿ ಸಾರ್ವಜನಿಕ ವಲಯದಲ್ಲಿ ಭಾರಿ ಟೀಕೆಗೆ ಗುರಿಯಾಗಿತ್ತು. ಅಲ್ಲದೇ ಪೊಲೀಸರು ಸಾರ್ವಜನಿಕರ ಹಣವನ್ನು ಪೋಲು ಮಾಡುತ್ತಿದ್ದಾರೆಂದು ಸ್ಥಳೀಯ ಮಾಧ್ಯಮಗಳು ಸುದ್ದಿ ಪ್ರಕಟಿಸಿತ್ತು.

ಈ ಕುರಿತು ಸ್ಥಳೀಯರಾದ ಲಿಯು ಎಂಬವರು ಮಾತನಾಡಿ, ಪೊಲೀಸರು ಕೇವಲ 2 ಡಾಲರ್(142 ರೂ.) ಗಾಗಿ ಡಿಎನ್‍ಎ ಟೆಸ್ಟ್ ನಡೆಸುವ ಮೂಲಕ ಸರ್ಕಾರಕ್ಕೆ 98 ಡಾಲರ್ (6,960ರೂ.) ಗಳನ್ನು ಖರ್ಚು ಮಾಡಿದ್ದಾರೆ. ದೂರು ನೀಡಲು ಬಂದಿದ್ದ ಯುವತಿಗೆ, ಅವರೇ ಸಮಾಧಾನ ಮಾಡಿ 2 ಡಾಲರ್ ಹಣ ಕೊಟ್ಟು ಮೊಸರನ್ನು ಕೊಡಿಸಬಹುದಿತ್ತು. ಪೊಲೀಸರು ತೆರಿಗೆದಾರರ ಹಣವನ್ನು ವ್ಯರ್ಥ ಮಾಡುತ್ತಿದ್ದಾರೆಂದು ಆರೋಪಿಸಿದ್ದಾರೆ.

ಸಾಮಾನ್ಯವಾಗಿ ಕೊಲೆ, ಅತ್ಯಾಚಾರದಂತಹ ದೊಡ್ಡ ದೊಡ್ಡ ಪ್ರಕರಣಗಳಲ್ಲಿ ಆರೋಪಿಗಳನ್ನು ಪತ್ತೆಹಚ್ಚಲು ಪೊಲೀಸರು ಕೊನೆಯದಾಗಿ ಡಿಎನ್‍ಎ ಪರೀಕ್ಷೆಯನ್ನು ಕೈಗೊಳ್ಳುತ್ತಾರೆ. ಆದರೆ ಚೀನಾದ ಪೊಲೀಸರು ಕೇವಲ ಮೊಸರು ಕಳ್ಳಿಯನ್ನು ಪತ್ತೆಹಚ್ಚಲು ಡಿಎನ್‍ಎ ಪರೀಕ್ಷೆ ಮಾಡಿದ್ದು ಎಷ್ಟು ಸರಿ ಎಂದು ಪ್ರಶ್ನಿಸಿ ಜನರು ಕಿಡಿಕಾರಿದ್ದಾರೆ.

ಏನಿದು ಡಿಎನ್‍ಎ?
ಡಿಎನ್‍ಎ ವಿಸ್ತೃತ ರೂಪ ಡೀಆಕ್ಸಿರೈಬೊ ನ್ಯೂಕ್ಲೀಯಿಕ್ ಆಮ್ಲ ಆಗಿದೆ. ಮನುಷ್ಯರು ಮತ್ತು ಜೀವಿಗಳಲ್ಲಿರುವ ಅನುವಂಶಿಕ ದ್ರವ್ಯವಾಗಿದೆ. ಮನುಷ್ಯನ ಶರೀರದ ಬಹುತೇಕ ಜೀವಕೋಶಗಳಲ್ಲಿ ಡಿಎನ್‍ಎ ಇದ್ದು, ಇವುಗಳಲ್ಲಿ ಅಧಿಕ ಜೀವಕೋಶಗಳ ಡಿಎನ್‍ಎ ಗಳು ಒಂದೇ ರೀತಿಯಾಗಿರುತ್ತವೆ. ಜೀವಕೋಶಗಳ ಕೋಶಕೇಂದ್ರಗಳಲ್ಲಿ ತುಸು ಅಧಿಕಪ್ರಮಾಣದ ಮತ್ತು ಉಳಿದ ಭಾಗಗಳಲ್ಲಿ ಅಲ್ಪಪ್ರಮಾಣದ ಡಿಎನ್‍ಎ ಗಳು ಇರುತ್ತವೆ.

ಡಿಎನ್‍ಎ ಬೆರಳಚ್ಚು ವಿಧಾನದಲ್ಲಿ ಒಂದು ನಿರ್ದಿಷ್ಟ ವಿಧದ ಡಿಎನ್‍ಎ ಅನುಕ್ರಮ (Sequence) ವಿಧಾನವನ್ನು ಅನುಸರಿಸಲಾಗುತ್ತಿದ್ದು, (ಇದನ್ನು micro satellite ಎನ್ನುತ್ತಾರೆ) ತನ್ಮೂಲಕ ಇವುಗಳನ್ನು ಗುರುತಿಸುವುದು ಸುಲಭಸಾಧ್ಯವೆನಿಸುತ್ತದೆ.

ಮನುಷ್ಯನ ಜೀವಕೋಶದಲ್ಲಿರುವ ಡಿಎನ್‍ಎ ಗಳು ತಂದೆತಾಯಂದಿರಿಂದ ಅನುವಂಶಿಕವಾಗಿ ಬಂದಿರುವುದರಿಂದ, ಯಾವುದೇ ವ್ಯಕ್ತಿಯಲ್ಲೂ ತನ್ನ ತಂದೆತಾಯಂದಿರಲ್ಲಿ ಇರದಂತಹ ಡಿಎನ್‍ಎ ಗಳು ಇರಲು ಸಾಧ್ಯವಿಲ್ಲ. ಇದರಿಂದಾಗಿ ಒಬ್ಬ ವ್ಯಕ್ತಿಯ ತಂದೆ, ತಾಯಿ, ಸಹೋದರ, ಸಹೋದರಿ ಹಾಗೂ ಮಕ್ಕಳಲ್ಲಿರುವ ಡಿಎನ್‍ಎ ಗಳಲ್ಲಿ ಸಾಮ್ಯತೆಗಳಿರುವುದರಿಂದ, ಈ ವ್ಯಕ್ತಿಯ ಡಿಎನ್‍ಎ ಗಳೊಂದಿಗೆ ಇವರೆಲ್ಲರ ಡಿಎನ್‍ಎ ಗಳು ತಾಳೆಯಾಗಲೇಬೇಕು. ಇದರಿಂದಾಗಿ ತನ್ನ ಪತ್ನಿ ಹೆತ್ತಿರುವ ಮಗುವಿನ ತಂದೆ ತಾನಲ್ಲ ಅಥವಾ ತಾನು ಇಂತಹ ವ್ಯಕ್ತಿಯೊಬ್ಬರ ಮಗನೆಂದು ನ್ಯಾಯಾಲಯದಲ್ಲಿ ಯಾರಾದರೂ ದಾವೆಯನ್ನು ಹೂಡಿದಾಗ, ಡಿಎನ್‍ಎ ಪರೀಕ್ಷೆಯ ಮೂಲಕವೇ ಇಂತಹ ಪ್ರಕರಣಗಳನ್ನು ಇತ್ಯರ್ಥಗೊಳಿಸಲಾಗುತ್ತದೆ.

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

Click to comment

Leave a Reply

Your email address will not be published. Required fields are marked *