– ಸಹಚರರ ಮಾಹಿತಿ ಕೊಟ್ಟವ್ರಿಗೆ ನಗದು ಬಹುಮಾನ ಘೋಷಣೆ
ರೈಪುರ್: ದಾಂತೇವಾಡ (Dantewada) ಸ್ಫೋಟದ ತನಿಖೆ ಕೈಗೊಂಡಿರುವ ಬಸ್ತಾರ್ ಪೊಲೀಸರು ಕೃತ್ಯದ ಮಾಸ್ಟರ್‌ಮೈಂಡ್ ( Mastermind) ಫೋಟೋ ಬಿಡುಗಡೆ ಮಾಡಿದ್ದಾರೆ. ಅಲ್ಲದೆ ಆತನ ಹಾಗೂ ಸಹಚರರ ಸುಳಿವು ನೀಡಿದವರಿಗೆ ನಗದು ಬಹುಮಾನ ನೀಡುವುದಾಗಿ ಪೊಲೀಸ್ ಇಲಾಖೆ ಘೋಷಿಸಿದೆ.
ಸ್ಫೋಟದ ಮಾಸ್ಟರ್ ಮೈಂಡ್‍ನನ್ನು ಜಗದೀಶ್ ಎಂದು ಗುರುತಿಸಲಾಗಿದೆ. ಜಗದೀಶ್‍ನ ಪತ್ನಿ ಸುಕ್ಮಾ ಜಿಲ್ಲೆಯ ಹೇಮ್ಲಾ ಕೂಡ ನಕ್ಸಲ್ ಸಂಘಟನೆಯ ದರ್ಭಾ ವಿಭಾಗದಲ್ಲಿ ಕಮಾಂಡರ್ ಆಗಿದ್ದಾಳೆ. ಅಲ್ಲದೇ ಜಗದೀಶ್‍ನ ಮಾವ ವಿನೋದ್ ಹೇಮ್ಲಾ, ಕಾಂಗೇರ್ ಘಾಟಿ ಪ್ರದೇಶದ ನಕ್ಸಲ್ ಸಮಿತಿಯ ಉಸ್ತುವಾರಿಯಾಗಿ ಸಕ್ರಿಯರಾಗಿದ್ದಾನೆ. ಗುಪ್ತಚರ ಮಾಹಿತಿಯ ಪ್ರಕಾರ ದರ್ಭಾ (Darbha) ವಿಭಾಗದ ಸಿಪಿಐ (CPI Maoist) ಸ್ಫೋಟದಲ್ಲಿ ಭಾಗಿಯಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಇದನ್ನೂ ಓದಿ: ಅಲ್‍ಖೈದಾ ಜೊತೆ ನಂಟು ಶಂಕೆ – ಶಂಕಿತ ಭಯೋತ್ಪಾದಕನ ಸೆರೆ
10 ಡಿಎಫ್‍ಜಿ (District Reserve Guard) ಸಿಬ್ಬಂದಿ ಮತ್ತು ಚಾಲಕನ ಜೀವವನ್ನು ಬಲಿ ಪಡೆದ ಸುಧಾರಿತ ಸ್ಫೋಟಕವನ್ನು (IED) ಎರಡು ತಿಂಗಳ ಹಿಂದೆಯೇ ಭೂಮಿಯಲ್ಲಿ ಹುದುಗಿಸಿಟ್ಟಿರುವ ಕುರುಹುಗಳಿವೆ. ಫಾಕ್ಸ್‌ಹೋಲ್ ತಂತ್ರಜ್ಞಾನವನ್ನು (Foxhole Mechanism) ಬಳಸಿ ಸುರಂಗ ತೆಗೆದು ಇರಿಸಿದ್ದರು. ಇದರಿಂದ ಅದು ಪತ್ತೆಯಾಗಿರಲಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಗುಪ್ತಚರ ಮಾಹಿತಿಯ ಆಧಾರದ ಮೇಲೆ ಚೈತು, ದೇವಾ, ಮಂಗ್ಟು, ರಾನ್ಸಾಯಿ, ಜೈಲಾಲ್, ಬಮನ್, ಸೋಮ, ರಾಕೇಶ್, ಭೀಮಾ ಮತ್ತು ಇತರ ಮಾವೋವಾದಿಗಳ ವಿರುದ್ಧ ಸೆಕ್ಷನ್ 147 ಗಲಭೆ, 149 ಕಾನೂನು ಬಾಹಿರ ಚಟುವಟಿಕೆ, 307 ಕೊಲೆ ಯತ್ನ, 302 ಕೊಲೆ ಅಲ್ಲದೆ ಶಸ್ತ್ರಾಸ್ತ್ರ ಕಾಯ್ದೆ ಹಾಗೂ ಯುಎಪಿಎ ಕಾಯ್ದೆ ಅಡಿಯಲ್ಲಿ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.
ಛತ್ತೀಸ್‍ಗಢದ (Chhattisgarh) ದಾಂತೇವಾಡದಲ್ಲಿ ಜಿಲ್ಲಾ ಮೀಸಲು ಪಡೆ ಸಿಬ್ಬಂದಿಯ ಮೇಲೆ ಮಾವೋವಾದಿಗಳ ದಾಳಿಯ ನಂತರದ ಕ್ಷಣಗಳನ್ನು ತೋರಿಸುವ ವೀಡಿಯೋವೊಂದು ಪತ್ತೆಯಾಗಿದೆ. ಇದರಲ್ಲಿ ಮಾವೋವಾದಿಯೊಬ್ಬ ಪೊಲೀಸರ ಮೇಲೆ ಗುಂಡು ಹಾರಿಸುತ್ತಿರುವುದು ಕಂಡುಬಂದಿದೆ. ಈ ಬಗ್ಗೆ ತನಿಖೆ ನಡೆಯುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಏ.26 ರಂದು ಛತ್ತೀಸ್‍ಗಢದ ದಾಂತೇವಾಡದಲ್ಲಿ ಮಾವೋವಾದಿಗಳು ನಡೆಸಿದ್ದ ಐಇಡಿ ಸ್ಫೋಟದಲ್ಲಿ 10 ಜಿಲ್ಲಾ ಮೀಸಲು ಪಡೆಯ ಸಿಬ್ಬಂದಿ ಮತ್ತು ಒಬ್ಬ ನಾಗರಿಕ ಸಾವನ್ನಪ್ಪಿದ್ದರು. ಇದನ್ನೂ ಓದಿ: ನಕ್ಸಲರ ಅಟ್ಟಹಾಸ- IED ಬ್ಲಾಸ್ಟ್‌ಗೆ 11 ಯೋಧರು ಹುತಾತ್ಮ