– ಚಾಲಕನ ಜೊತೆ ಸೇರಿ ಮದ್ಯ ಎಗರಿಸಿದ ಪೊಲೀಸ್
– ಸಿಸಿಟಿವಿಯಿಂದ ಬಯಲಾಯ್ತು ಪೇದೆ ಅಸಲಿಯತ್ತು
ಹೈದರಾಬಾದ್: ಲಾಕ್‍ಡೌನ್ ಅವಧಿಯಲ್ಲಿ ಮದ್ಯದಂಗಡಿಗಳಿಂದ ಸೀಜ್ ಮಾಡಿ ಪೊಲೀಸ್ ಠಾಣೆಯಲ್ಲಿ ಇಟ್ಟಿದ್ದ ಮದ್ಯವನ್ನ ಪೊಲೀಸ್ ಪೇದೆಯೇ ಕದ್ದು ಸಿಕ್ಕಿಬಿದ್ದ ಘಟನೆ ತೆಲಂಗಾಣದ ಕರೀಮ್‍ನಗರ ಜಿಲ್ಲೆಯಲ್ಲಿ ಬೆಳಕಿಗೆ ಬಂದಿದೆ.
ಕರೀಮ್‍ನಗರ ಜಿಲ್ಲೆಯ ಇರಡು ಟೌನ್ ಪೊಲೀಸ್ ಠಾಣೆಯಲ್ಲಿ ಮದ್ಯವನ್ನು ಸೀಜ್ ಮಾಡಿ ಇಡಲಾಗಿತ್ತು. ಲಾಕ್‍ಡೌನ್ ಅವಧಿಯಲ್ಲಿ ನಿಯಮ ಉಲ್ಲಂಘಿಸಿ ಮದ್ಯ ಮಾರಾಟ ಮಾಡುತ್ತಿದ್ದ ಕಾರಣಕ್ಕೆ ಹಲವು ಮದ್ಯದಂಗಡಿಗಳನ್ನು ಸೀಜ್ ಮಾಡಿ, ಅಂಗಡಿಯಲ್ಲಿದ್ದ ಮದ್ಯವನ್ನು ವಶಕ್ಕೆ ಪಡೆದು ಪೊಲೀಸ್ ಠಾಣೆಯಲ್ಲಿ ಇರಿಸಲಾಗಿತ್ತು. ಆದರೆ ಪೊಲೀಸ್ ಪೇದೆ ಅರುಣ್ ಹಾಗೂ ವಾಹನ ಚಾಲಕ ರಾಣಾ ಮದ್ಯದ ಆಸೆಗೆ ಬಿದ್ದು ಠಾಣೆಯಲ್ಲಿದ್ದ ಸುಮಾರು 69 ಮದ್ಯದ ಬಾಟಲಿಗಳನ್ನು ಕದ್ದಿದ್ದರು. ಅಲ್ಲದೇ ಈ ಮದ್ಯವನ್ನು ಅಕ್ರಮವಾಗಿ ಮಾರಾಟ ಕೂಡ ಮಾಡಿದ್ದರು.
Advertisement
Advertisement
ಮೇ 4ರಂದು ಹಿರಿಯ ಪೊಲೀಸ್ ಅಧಿಕಾರಿ ಠಾಣೆಯಲ್ಲಿ ಇರಿಸಿದ್ದ ಮದ್ಯದ ಬಾಟಲಿಗಳು ಕಡಿಮೆ ಕಾಣುತ್ತಿದೆ ಎಂದು ಪರಿಶೀಲನೆ ನಡೆಸಿದಾಗ ಕಳ್ಳತನವಾಗಿರುವುದು ಗೊತ್ತಾಗಿದೆ. ಬಳಿಕ ಈ ಬಗ್ಗೆ ಹೆಚ್ಚು ಮಂದಿಗೆ ತಿಳಿಸದೆ ಠಾಣೆಯಲ್ಲಿ ಇರಿಸಿದ್ದ ಮದ್ಯವನ್ನು ಕದ್ದಿದ್ದು ಯಾರು ಎಂದು ಪತ್ತೆ ಹಚ್ಚಲು ಮುಂದಾದರು. ಈ ವೇಳೆ ಠಾಣೆಯಲ್ಲಿದ್ದ ಸಿಸಿಟಿವಿ ಪರಿಶೀಲನೆ ಮಾಡಿದಾಗ ಪ್ರಕರಣ ಬೆಳಕಿಗೆ ಬಂದಿದೆ. ಅಲ್ಲದೇ ಚಾಲಕನನ್ನು ವಿಚಾರಿಸಿದಾಗ ಆತ ತಪ್ಪೊಪ್ಪಿಕೊಂಡಿದ್ದು, ಪೊಲೀಸ್ ಪೇದೆಯ ಅಸಲಿಯತ್ತನ್ನು ಬಯಲು ಮಾಡಿದ್ದಾನೆ. ಇಬ್ಬರೂ ಸೇರಿ ಮದ್ಯ ಕಳ್ಳತನ ಮಾಡಿರುವುದನ್ನು ಚಾಲಕ ಒಪ್ಪಿಕೊಂಡಿದ್ದಾನೆ.
Advertisement
Advertisement
ಸದ್ಯ ಇಬ್ಬರೂ ಆರೋಪಿಗಳನ್ನು ಬಂಧಿಸಲಾಗಿದ್ದು, ನ್ಯಾಯಾಂಗ ಬಂಧನದಲ್ಲಿ ಇರಿಸಲಾಗಿದೆ. ಮೇ 4ರಂದು ಈ ಘಟನೆ ಬೆಳಕಿಗೆ ಬಂದಿದ್ದರೂ ಪೊಲೀಸರು ಮಾತ್ರ ಠಾಣೆಯ ಹೆಸರು ಹಾಳಾಗುತ್ತದೆ ಎಂದು ಈ ವಿಚಾರವನ್ನು ಮುಚ್ಚಿಟ್ಟಿದ್ದರು. ಆದರೂ ಪ್ರಕರಣ ಬಯಲಾಗಿದ್ದು, ಎಲ್ಲೆಡೆ ಸುದ್ದಿ ಹರಡಿದೆ. ಸಾರ್ವಜನಿಕರಿಗೆ ರಕ್ಷಣೆ ನೀಡಿ, ಕಳ್ಳತನ ಮಾಡುವವರನ್ನು ಹಿಡಿದು ಬುದ್ಧಿ ಕಲಿಸಬೇಕಾದ ಪೊಲೀಸರೇ ಈ ರೀತಿ ಕಳ್ಳತನ ಮಾಡುವುದು ತಪ್ಪು ಎಂದು ಪೊಲೀಸ್ ಪೇದೆ ವಿರುದ್ಧ ಜನರು ಆಕ್ರೋಶ ವ್ಯಕ್ತಪಡಿಸಿದ್ದಾರೆ.