ಕಾರವಾರ: ಸಮುದ್ರದಲ್ಲಿ ನೀರುಪಾಲಾಗುತ್ತಿದ್ದ ಐವರನ್ನು ಪೊಲೀಸ್ ಪೇದೆಯೊಬ್ಬರು ಪ್ರವಾಸಿ ಮಿತ್ರರ ಸಹಾಯದಿಂದ ರಕ್ಷಿಸುವ ಮೂಲಕ ಸಮಯ ಪ್ರಜ್ಞೆ ಮೆರೆದಿದ್ದಾರೆ.
ಚೆನ್ನೈ ವಿಶ್ವವಿದ್ಯಾಲಯವೊಂದರಲ್ಲಿ ಎಂಜನಿಯರಿಂಗ್ ಕೊನೆಯ ವರ್ಷದಲ್ಲಿ ಓದುತ್ತಿರುವ ವೀರಭದ್ರ ಭಾಸ್ಕರ(30), ಅವಿನಾಶ್ ನಳನ(28), ಅರ್ಪಿತಾ ಶ್ಯಾಮ್(25), ಚಿತ್ರಾ ಗೋವಿಂದರಾವ್ (24) ಹಾಗೂ ರಮ್ಯಾ (26) ಸಮುದ್ರದ ಸುಳಿಯಿಂದ ರಕ್ಷಿಸಲ್ಪಟ್ಟ ವಿದ್ಯಾರ್ಥಿಗಳಾಗಿದ್ದಾರೆ. ಆರು ಜನರ ತಂಡದೊಂದಿಗೆ ಗೋಕರ್ಣಕ್ಕೆ ಪ್ರವಾಸಾರ್ಥವಾಗಿ ಆಗಮಿಸಿದ್ದರು. ಈ ವಿದ್ಯಾರ್ಥಿಗಳು ಆಂಧ್ರಪ್ರದೇಶ ರಾಜ್ಯದ ರಾಜಮಂಡ್ರಿ ನಿವಾಸಿಗಳು ಎಂದು ತಿಳಿದುಬಂದಿದೆ.
Advertisement
Advertisement
ಇವರೆಲ್ಲರೂ ರವಿವಾರ ಸಾಯಂಕಾಲ ಈಜಾಡಲು ಸಮುದ್ರಕ್ಕೆ ಇಳಿದಿದ್ದರು. 6 ಜನರಲ್ಲಿ ಇಬ್ಬರು ಸುಳಿಗೆ ಸಿಲುಕಿ ಕೊಚ್ಚಿಕೊಂಡು ಹೋಗುತ್ತಿದ್ದಾಗ ಅವರನ್ನು ರಕ್ಷಿಸಲು ಮತ್ತೆ ಮೂವರು ಸಹಪಾಠಿಗಳು ಸಮುದ್ರದ ಮಧ್ಯಕ್ಕೆ ಸಾಗಿದ್ದರು. ಒಟ್ಟಾರೆಯಾಗಿ 5 ಜನ ಪ್ರವಾಸಿಗರು ಸುಳಿಯಲ್ಲಿ ಸಿಲುಕಿಕೊಂಡಿದ್ದನ್ನು ಗಮನಿಸಿದ ಗೋಕರ್ಣ ಪೊಲೀಸ್ ಪೇದೆ ರಾಘವೇಂದ್ರ ನಾಯಕ್ ಹಾಗೂ ಪ್ರವಾಸಿ ಮಿತ್ರ ಗಜೇಂದ್ರ ಎಂಬವರು ತಮ್ಮ ಜೀವವನ್ನೇ ಪಣಕ್ಕಿಟ್ಟು ಸಮವಸ್ತ್ರದಲ್ಲಿಯೇ ಸಮುದ್ರಕ್ಕೆ ಧುಮುಕಿ 5 ಜನರನ್ನು ರಕ್ಷಿಸುವಲ್ಲಿ ಸಫಲರಾಗಿದ್ದಾರೆ.
Advertisement
ಲೈಫ್ ಗಾರ್ಡ ಸಿಬ್ಬಂದಿ ಬೇರೆಡೆ ತರಬೇತಿ ನಿಮಿತ್ತ ತೆರಳಿದ್ದ ವೇಳೆಯೇ ಈ ಘಟನೆ ನಡೆದಿದ್ದು ಗೋಕರ್ಣ ಪೊಲೀಸ್ ಮತ್ತು ಪ್ರವಾಸಿ ಮಿತ್ರರ ಸಾಧನೆಗೆ ನಾಗರಿಕರು ಅಭಿನಂದನೆ ಸಲ್ಲಿಸಿದ್ದಾರೆ.
Advertisement