Latest
ಭಿಕ್ಷೆ ಬೇಡುವ ಮಕ್ಕಳಿಗಾಗಿ ಶಾಲೆ ತೆರೆದ ಪೊಲೀಸರು – 450 ಮಕ್ಕಳಿಗೆ ವಿದ್ಯಾಭ್ಯಾಸ

ಜೈಪುರ: ಭಿಕ್ಷೆ ಬೇಡುವ ಮಕ್ಕಳಿಗಾಗಿ ರಾಜಸ್ಥಾನ ಪೊಲೀಸರು ಶಾಲೆ ತೆರೆದಿದ್ದು, 450 ಮಕ್ಕಳು ಈಗ ಈ ಶಾಲೆಯಲ್ಲಿ ಓದುತ್ತಿದ್ದಾರೆ.
ಧರ್ಮವೀರ್ ಜಖರ್ ಅವರು 2016ರಲ್ಲಿ ರಾಜಸ್ಥಾನದ ಚುರುವಿನಲ್ಲಿ ಕರ್ತವ್ಯಕ್ಕೆ ನಿಯೋಜನೆಗೊಂಡಿದ್ದರು. ಈ ವೇಳೆ ಅವರು ಭಿಕ್ಷೆ ಬೇಡುವ ಮಕ್ಕಳಿಗಾಗಿ ಶಾಲೆ ತೆರೆದಿದ್ದಾರೆ. ಈಗ ಇವರ ಶಾಲೆಯಲ್ಲಿ 450 ಮಕ್ಕಳು ವಿದ್ಯಾಭ್ಯಾಸ ಪಡೆಯುತ್ತಿದ್ದಾರೆ.
ಧರ್ಮವೀರ್ ಚುರು ಜಿಲ್ಲೆಯ ಮಹಿಳಾ ಪೊಲೀಸ್ ಠಾಣೆ ಬಳಿ ಈ ಶಾಲೆಯನ್ನು ತೆರೆದಿದ್ದರು. ಈ ಬಗ್ಗೆ ಪ್ರತಿಕ್ರಿಯಿಸಿದ ಅವರು ಬೀದಿಯಲ್ಲಿ ಭಿಕ್ಷೆ ಬೇಡುವ ಮಕ್ಕಳ ಕೈಯಲ್ಲಿ ತಟ್ಟೆ ಬದಲು ಪೆನ್ಸಿಲ್ ಹಾಗೂ ಪುಸ್ತಕಗಳಿರಬೇಕು. ಮಕ್ಕಳು ಓದುವ ಹಾಗೂ ಬರೆಯುವ ಮೂಲಕ ರಾಷ್ಟ್ರ ನಿರ್ಮಾಣಕ್ಕೆ ಸಹಾಯ ಮಾಡಲು ಸಾಧ್ಯವಾಗುತ್ತದೆ. ಪೊಲೀಸ್ ಠಾಣೆಯ ಸುತ್ತಮುತ್ತ ಅನೇಕ ಮಕ್ಕಳು ಭಿಕ್ಷೆ ಬೇಡುವುದನ್ನು ನಾನು ನೋಡಿದ್ದೇನೆ. ಅವರನ್ನು ಪ್ರಶ್ನಿಸಿದಾಗ ಅವರು ಅನಾಥರು ಎಂಬ ವಿಷಯ ತಿಳಿಯಿತು. ಸತ್ಯವನ್ನು ತಿಳಿಯಲು ಅವರು ವಾಸಿಸುತ್ತಿದ್ದ ಸ್ಲಂಗೆ ಹೋಗಿದ್ದೆ. ಈ ಕಾರಣಕ್ಕೆ ನಾನು ಈ ನಿರ್ಧಾರ ತೆಗೆದುಕೊಂಡೆ ಎಂದು ಹೇಳಿದರು.
ಶಾಲೆ ಶುರು ಮಾಡುವ ಮೊದಲು ಧರ್ಮವೀರ್ ಒಂದು ಗಂಟೆಗಳ ಕಾಲ ಮಕ್ಕಳಿಗೆ ಪಾಠ ಮಾಡುತ್ತಿದ್ದರು. ಇದೇ ರೀತಿ ನಿಧಾನವಾಗಿ ‘ಅಪ್ನಿ ಪಾಠಶಾಲಾ'(ನಮ್ಮ ಶಾಲೆ) ಶಾಲೆಯ ರೂಪವನ್ನು ಪಡೆಯಿತು. ಮಹಿಳಾ ಪೇದೆಗಳು ಹಾಗೂ ಸಮಾಜ ಸೇವೆ ಮಾಡುವವರು ಧರ್ಮವೀರ್ ಅವರ ಸಹಾಯ ಮಾಡುತ್ತಾರೆ. ಈ ಶಾಲೆಯಲ್ಲಿ ಓದುವ ಸುಮಾರು 200 ಮಕ್ಕಳನ್ನು ಸರ್ಕಾರಿ ಶಾಲೆಗಳಲ್ಲಿ ದಾಖಲಿಸಲಾಗಿದೆ. ಇದರಲ್ಲಿ 90 ಮಕ್ಕಳು ಆರನೇ ಹಾಗೂ ಎಂಟನೇ ತರಗತಿ ಓದುತ್ತಿದ್ದಾರೆ.
ಶಾಲೆಯ ಹತ್ತಿರದಲ್ಲೇ ನಮ್ಮದೊಂದು ವಾಹನವಿದ್ದು, ಅದರಲ್ಲಿ ಮಕ್ಕಳನ್ನು ಸ್ಲಂನಿಂದ ಸ್ಕೂಲ್‍ಗೆ ಕರೆದುಕೊಂಡು ಹೋಗಲಾಗುತ್ತದೆ. ಇದಲ್ಲದೆ ಮಕ್ಕಳಿಗಾಗಿ ಸ್ಕೂಲ್ ಡ್ರೆಸ್, ಶೂ, ಊಟ ಹಾಗೂ ಪುಸ್ತಕಗಳನ್ನು ಸಹ ನೀಡುತ್ತೇವೆ. ಇದೆಲ್ಲಾ ಉಚಿತವಾಗಿದ್ದು, ಇದಕ್ಕಾಗಿ ಇಲಾಖೆಯಲ್ಲಿರುವ ಸಮಾಜ ಸೇವಕರು ಹಾಗೂ ಕೆಲವು ಸಂಸ್ಥೆಗಳು ಸಹಾಯ ಮಾಡುತ್ತದೆ. ಮಕ್ಕಳನ್ನು ಶಾಲೆಗೆ ಕರೆತರುವುದು ಬಹಳ ಕಷ್ಟದ ಕೆಲಸವಾಗಿತ್ತು. ಏಕೆಂದರೆ ಮೂಲಭೂತ ಸೌಕರ್ಯ ಸಿಗದ್ದಕ್ಕೆ ಅವರು ಭಿಕ್ಷೆ ಬೇಡುತ್ತಿದ್ದರು. ಹಾಗಾಗಿ ನಾವು ಮೊದಲು ಊಟದ ವ್ಯವಸ್ಥೆ ಮಾಡಿದ್ದೆವು ಎಂದು ಧರ್ಮವೀರ್ ಹೇಳಿದರು.
ಉತ್ತರ ಪ್ರದೇಶ ಹಾಗೂ ಬಿಹಾರ ರಾಜ್ಯದ ಕೆಲವು ಕುಟುಂಬಗಳು ಕೆಲಸ ಹುಡುಕಲು ಇಲ್ಲಿಗೆ ಬರುತ್ತಾರೆ. ನಾವು ಅವರಿಗೂ ಹಾಗೂ ಅವರ ಮಕ್ಕಳಿಗೂ ಶಾಲೆಗೆ ಬರುವಂತೆ ಪ್ರೇರೇಪಿಸಿದ್ದೆವು. ಕೆಲವು ಮಕ್ಕಳಿಗೆ ರಸ್ತೆಯಲ್ಲಿ ಕಸ ಎತ್ತಬೇಕೆಂದು ಹೇಳಲಾಗಿತ್ತು. ಏಕೆಂದರೆ ಅವರು ಈ ರೀತಿ ಮಾಡದಿದ್ದರೆ ಅವರ ಪೋಷಕರು ಶಾಲೆಗೆ ಕಳುಹಿಸಲು ನಿರಾಕರಿಸುತ್ತಿದ್ದರು. ಹಾಗಾಗಿ ಮಕ್ಕಳು ಶಾಲೆ ಮುಗಿದ ನಂತರ ಈ ಕೆಲಸವನ್ನು ಮಾಡುತ್ತಿದ್ದರು ಎಂದು ಧರ್ಮವೀರ್ ತಿಳಿಸಿದ್ದಾರೆ.
ಈ ಶಾಲೆ ನಡೆಸಲು ಪ್ರತಿ ತಿಂಗಳು ಒಂದೂವರೆ ಲಕ್ಷ ರೂ. ಖರ್ಚು ಆಗುತ್ತದೆ. ಈ ಹಣವನ್ನು ಜನರ ದೇಣಿಗೆ ಮತ್ತು ಸಾಮಾಜಿಕ ಜಾಲತಾಣದಲ್ಲಿ ಅಭಿಯಾನದ ಮೂಲಕ ವ್ಯವಸ್ಥೆ ಮಾಡಲಾಗಿದೆ. ಅಲ್ಲದೆ ಸರ್ಕಾರದಿಂದ ನಮಗೆ ಯಾವುದೇ ಸಹಾಯವಾಗಿಲ್ಲ. ಪೊಲೀಸ್, ಸಮಾಜ ಹಾಗೂ ಶಿಕ್ಷಣ ವಿಭಾಗದ ಸಹಾಯದಿಂದ ನಾವು ಬದಲಾವಣೆ ತರಲು ಪ್ರಯತ್ನಿಸುತ್ತಿದ್ದೇವೆ. ಈ ಮಕ್ಕಳಿಗಾಗಿ ವಿಶೇಷ ಶಾಲೆ ಹಾಗೂ ಬೇರೆ ಸಿಬ್ಬಂದಿ ವ್ಯವಸ್ಥೆ ಮಾಡುವುದು ಮುಖ್ಯ. ಈ ಮಕ್ಕಳನ್ನು ಚೆನ್ನಾಗಿ ನೋಡಿಕೊಳ್ಳಬೇಕು. ಇಲ್ಲದಿದ್ದರೆ ಇವರು ಮತ್ತೆ ಯಾವತ್ತೂ ಶಾಲೆಗೆ ಬರುವುದಿಲ್ಲ ಎಂದು ಧರ್ಮವೀರ್ ತಿಳಿಸಿದ್ದಾರೆ.
