ಪಾಕ್‍ನಲ್ಲಿ ಅಡುಗೆ ಕೆಲಸ ಮಾಡಿ ಭಾರತದ ರಹಸ್ಯವನ್ನು ಐಎಸ್‍ಐಗೆ ತಿಳಿಸಿದ!

Public TV
1 Min Read
crime ok

ಡೆಹ್ರಾಡೂನ್: ಪಾಕಿಸ್ತಾನ ಪರ ಬೇಹುಗಾರಿಕೆ ನಡೆಸುತ್ತಿದ್ದ ಆರೋಪದ ಹಿನ್ನೆಲೆಯಲ್ಲಿ ಅಡುಗೆ ಕೆಲಸ ಮಾಡುತ್ತಿದ್ದ ವ್ಯಕ್ತಿಯೊಬ್ಬನನ್ನು ಉತ್ತರಪ್ರದೇಶದ ಭಯೋತ್ಪಾದನ ನಿಗ್ರಹ ದಳ(ಎಟಿಎಸ್) ಬಂಧಿಸಿದೆ.

ಆರೋಪಿಯನ್ನು ಉತ್ತರಾಖಂಡದ ಪಿತ್ತೋರ್‍ಗಢ ಜಿಲ್ಲೆಯ ಕಿರೊಲಾ ಗ್ರಾಮದ ರಮೇಶ್ ಸಿಂಗ್ ಕನ್ಯಾಲ್ (43) ಎಂದು ಗುರುತಿಸಲಾಗಿದೆ. ಅವನು ಪಾಕಿಸ್ತಾನದ ಇಂಟರ್ ಸರ್ವೀಸ್ ಇಂಟೆಲಿಜೆನ್ಸ್‍ಗೆ (ಐಎಸ್‍ಐ)ಗೆ ರಾಷ್ಟ್ರೀಯ ಭದ್ರತಾ ಮಾಹಿತಿಯನ್ನು ನೀಡುತ್ತಿದ್ದ ಎಂದು ವರದಿಯಾಗಿದೆ.

ಉತ್ತರ ಪ್ರದೇಶದ ಎಟಿಎಸ್‍ನ ಐದು ಜನರ ತಂಡವು ಆರೋಪಿಯನ್ನು ಆತನ ಮನೆಗೆ ತೆರಳಿ ಬಂಧಿಸಿದೆ. ಆತನನ್ನು ಸ್ಥಳೀಯ ನ್ಯಾಯಾಲಯಕ್ಕೆ ಹಾಜರು ಪಡಿಸಿದ್ದು, ಕೋರ್ಟ್ ಹೆಚ್ಚಿನ ವಿಚಾರಣೆಗೆ ಎಟಿಎಸ್ ಕಸ್ಟಡಿಗೆ ನೀಡಿದೆ.

ಬೇಹುಗಾರಿಕೆ ನಡೆಸುತ್ತಿದ್ದ ಅನುಮಾನದ ಮೇಲೆ ಆತನನ್ನು ಬಂಧಿಸಲಾಗಿದೆ ಎಂದು ಎಟಿಎಸ್‍ನ ಜನರಲ್ ಇನ್ಸ್ ಪೆಕ್ಟರ್ ಆಸೀಂ ಅರುಣ್ ತಿಳಿಸಿದ್ದಾರೆ. ಈ ಹಿಂದೆ ಪಾಕಿಸ್ತಾನದಲ್ಲಿ ಕೆಲಸ ಮಾಡುತ್ತಿದ್ದ ಭಾರತದ ರಾಯಭಾರಿಯ ನಿವಾಸದಲ್ಲಿ ಅಡುಗೆ ಕೆಲಸಕ್ಕಾಗಿ ಆರೋಪಿಯನ್ನು ನಿಯೋಜಿಸಲಾಗಿತ್ತು. 2015 ರಿಂದ 2017ರ ವರೆಗೆ ಅಲ್ಲಿ ಕೆಲಸ ಮಾಡುತ್ತಿದ್ದಾಗ ಐಎಸ್‍ಐ ಈತನನ್ನು ಸಂಪರ್ಕಿಸಿ ಹಣದ ಆಸೆ ತೋರಿಸಿದೆ. ಈ ಆಸೆಗೆ ಬಲಿಯಾದ ಈತ ಭಾರತದ ಭದ್ರತೆಗೆ ಸಂಬಂಧಿಸಿದ ಮಾಹಿತಿಯನ್ನು ಐಎಸ್‍ಐಗೆ ನೀಡುತ್ತಿದ್ದಾನೆ ಎನ್ನುವ ಖಚಿತ ಮಾಹಿತಿ ಪಿತ್ತೋರ್‍ಗಢ ಜಿಲ್ಲಾ ಪೊಲೀಸರಿಗೆ ಸಿಕ್ಕಿತ್ತು.

ಸೇನೆಯ ಗುಪ್ತಚರ ಇಲಾಖೆ ಈತನ ಚಟುವಟಿಕೆಯ ಮೇಲೆ ಕಣ್ಣಿಟ್ಟ ಬಳಿಕ ಎಟಿಎಸ್‍ಗೆ ತಿಳಿಸಿತ್ತು. ಈಗ ಎಟಿಎಸ್ ರಮೇಶ್ ಸಿಂಗ್ ಕನ್ಯಾಲ್ ಬಳಿಯಿದ್ದ ಪಾಕಿಸ್ತಾನದ ಸಿಮ್ ಕಾರ್ಡ್ ಹಾಗೂ ಮೊಬೈಲ್‍ನ್ನು ವಶಪಡಿಸಿಕೊಂಡಿದೆ.

ಆರೋಪಿ ಸಹೋದರ ಕೂಡ ಭಾರತೀಯ ಸೇನೆಯಲ್ಲಿ ಕೆಲಸ ಮಾಡುತ್ತಿದ್ದಾನೆ ಎಂದು ತಿಳಿದು ಬಂದಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಉತ್ತರ ಪ್ರದೇಶದ ಕನ್ಯಾಲ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Share This Article
Leave a Comment

Leave a Reply

Your email address will not be published. Required fields are marked *