DharwadDistrictsKarnatakaLatestLeading NewsMain Post

ಕ್ರೈಸ್ತ ಧರ್ಮಕ್ಕೆ ಮತಾಂತರವಾದ್ರೆ ಮಾತ್ರ ಸಂಸಾರ – ಪತ್ನಿ ವಿರುದ್ಧ ಠಾಣೆಯ ಮೆಟ್ಟಿಲೇರಿದ ಪತಿ

– ಮತಾಂತರಗೊಳ್ಳುವಂತೆ ಗಂಡನಿಗೆ ವಿಪರೀತ ಕಾಟ
– ಸಮಾಜದ ಮುಖಂಡರ ಜೊತೆಗೆ ಠಾಣೆಯಲ್ಲಿ ದೂರು

ಹುಬ್ಬಳ್ಳಿ: ಕ್ರೈಸ್ತ ಧರ್ಮಕ್ಕೆ ಮತಾಂತರವಾದರೆ(Conversion) ಮಾತ್ರ ಸಂಸಾರ ಮಾಡುತ್ತೇನೆ ಎಂದ ಪತ್ನಿ ವಿರುದ್ಧ ಪತಿ ಸಮಾಜದ ಮುಖಂಡರ ಜೊತೆ  ಹಳೇ ಹುಬ್ಬಳ್ಳಿ(Hubballi) ಪೊಲೀಸ್ ಠಾಣೆಯ ಮೆಟ್ಟಿಲೇರಿದ ಘಟನೆ ನಡೆದಿದೆ.

ಎಸ್‌ಟಿಗೆ ಸೇರುವ ಶಿಕ್ಕಲಗಾರ ಸಮುದಾಯದ ಸಂಪತ್ ಬಗನಿ ಮತ್ತು ಭಾರತಿ 15 ವರ್ಷಗಳ ಹಿಂದೆ ಮದುವೆಯಾಗಿದ್ದಾರೆ. ಆದರೆ ಈಗ ಭಾರತಿ ಮತ್ತು ಅವರ ತಂದೆ, ತಾಯಿಯನ್ನು ತಲೆಕೆಡಿಸಿ ಕೆಲವರು ಕ್ರೈಸ್ತ ಧರ್ಮಕ್ಕೆ(Christian Religion) ಮತಾಂತರ ಮಾಡಿದ್ದಾರೆ ಎಂಬ ಗಂಭೀರ ಆರೋಪ ಕೇಳಿ ಬಂದಿದೆ.

ಸಂಪತ್ ಅವರಿಗೆ ಶಿಕ್ಕಲಗಾರ ಸಮುದಾಯದ ಮುಖಂಡರು ಮತ್ತು ಹಿಂದೂಪರ ಸಂಘಟನೆಗಳು ಸಾಥ್‌ ನೀಡಿದ್ದು ಪ್ರಕರಣ ಮತ್ತಷ್ಟು ತೀವ್ರಗೊಂಡಿದೆ. ಇದನ್ನೂ ಓದಿ: ಇಸ್ಲಾಂಗೆ ಮತಾಂತರವಾಗಲು ನಿರಾಕರಿಸಿದ್ದಕ್ಕೆ ಗೆಳತಿಯನ್ನು 4ನೇ ಮಹಡಿಯಿಂದ ಎಸೆದು ಹತೈಗೈದ

ಪತ್ನಿ, ಅತ್ತೆ, ಮಾವ ಹಲವು ದಿನಗಳಿಂದ ಕ್ರಿಶ್ಚಿಯನ್ ಧರ್ಮಕ್ಕೆ ಮತಾಂತರಗೊಳ್ಳುವಂತೆ ನನ್ನ ಮೇಲೆ ಒತ್ತಡ ಹಾಕುತ್ತಿದ್ದಾರೆ. ಮತಾಂತರವಾಗದಿದ್ದರೆ ನಾನು ಸಂಸಾರ ಮಾಡುವುದಿಲ್ಲ ಎಂದು ಪತ್ನಿ ಬೆದರಿಕೆ ಹಾಕಿದ್ದಾಳೆ. ಆದರೆ ಈಗ ಪತ್ನಿ ಮತ್ತು ಆಕೆ ಮನೆಯವರ ಕಾಟ ವಿಪರೀತವಾಗಿದೆ ಎಂದು ಸಂಪತ್‌ ದೂರು ನೀಡಿದ್ದಾರೆ.

ಈ ವಿಚಾರಕ್ಕೆ ಸಂಬಂಧಿಸಿದಂತೆ ಸಂಪತ್ ಹಲವು ಬಾರಿ ಪೊಲೀಸ್‌ ಠಾಣೆಯ ಮೆಟ್ಟಿಲೇರಿದ್ದಾರೆ. ಈ ವೇಳೆ ಪೊಲೀಸರು ದಂಪತಿಗೆ ಬುದ್ಧಿವಾದ ಹೇಳಿ ಕಳುಹಿಸಿದ್ದಾರೆ. ಆದರೆ ಮತ್ತೆ ಪತ್ನಿ ಮತ್ತು ಆಕೆಯ ಮನೆಯವರ ಒತ್ತಡ ಹೆಚ್ಚಾದ ಹಿನ್ನೆಲೆಯಲ್ಲಿ ಈಗ ಸಮುದಾಯದ ಮುಖಂಡರು ಮತ್ತು ಹಿಂದೂಪರ ಸಂಘಟನೆಗಳ ಜೊತೆ ಸಂಪತ್‌ ಠಾಣೆಯ ಮೆಟ್ಟಿಲೇರಿ ಮತಾಂತರ ನಿಷೇಧ ಕಾಯ್ದೆಯ ಅಡಿ ದೂರು ದಾಖಲಿಸಿದ್ದಾರೆ. ಇದನ್ನೂ ಓದಿ: ಭಾರತದಲ್ಲಿ ವಾಸ ಮಾಡುವ ಪ್ರತಿಯೊಬ್ಬರು ಹಿಂದೂಗಳೇ: ಮೋಹನ್ ಭಾಗವತ್

ಹಳೇ ಹುಬ್ಬಳ್ಳಿ ವ್ಯಾಪ್ತಿಯಲ್ಲಿರುವ ಶಿಕ್ಕಲಗಾರ ಸಮುದಾಯದ ಬಡ ಕುಟುಂಬಗಳನ್ನು ಗುರಿಯಾಗಿಸಿ ಕ್ರಿಶ್ಚಿಯನ್ ಧರ್ಮಕ್ಕೆ ಮತಾಂತರ ಆಗುವಂತೆ ಪ್ರಚೋದನೆ ನೀಡಲಾಗುತ್ತಿದೆ. ಶಿಕ್ಕಲಗಾರ ಸಮುದಾಯದಿಂದ ರೌಡಿ ಶೀಟರ್ ಮದನ್ ಬುಗುಡಿ ಸೇರಿದಂತೆ 15 ಜನರ ತಂಡ ಈ ರೀತಿಯ ಮತಾಂತರಕ್ಕೆ ಪ್ರಚೋದನೆ ನೀಡುತ್ತಿದ್ದು ವಾಟ್ಸಪ್‌ ಗ್ರೂಪ್‌ ಮಾಡಿ ನಿರಂತರ ಸಂದೇಶ ಹರಿಬಿಡುತ್ತಿದ್ದಾರೆ ಎಂಬ ಗಂಭೀರ ಆರೋಪ ಕೇಳಿಬಂದಿದೆ. ಈಗ ಮನೆ ಮನೆಗೆ ತೆರಳಿ ಕ್ರಿಶ್ಚಿಯನ್ ಧರ್ಮ ಬಗ್ಗೆ ಪ್ರಚಾರ ಮಾಡಿ, ಮತಾಂತರ ಮಾಡಲು ಹುನ್ನಾರ ನಡೆಸಿದ ಆರೋಪದ ಅಡಿ ಇವರ ವಿರುದ್ಧ ಪ್ರಕರಣ ದಾಖಲಾಗಿದೆ.

ವಿಶ್ವ ಹಿಂದೂ ಪರಿಷತ್‌, ಶ್ರೀರಾಮಸೇನೆ ಸೇರಿದಂತೆ ಹಿಂದೂ ಸಂಘಟನೆಗಳ ಕಾರ್ಯಕರ್ತರು ಸಂಪತ್ ಜೊತೆಗೆ ಹಳೇ ಹುಬ್ಬಳ್ಳಿ ಠಾಣೆ ಮುಂದೆ ಪ್ರತಿಭಟನೆ ನಡೆಸಿ ತಮ್ಮ ಆಕ್ರೋಶವನ್ನು ಹೊರಹಾಕಿದ್ದಾರೆ. ರಾಜ್ಯದಲ್ಲಿ ಬಲವಂತದ ಮತಾಂತರ ನಿರಂತರವಾಗಿ ನಡೆಯುತ್ತಿದೆ. ಮತಾಂತರ ನಿಷೇಧ ಕಾಯ್ದೆ(Anti Conversion Act) ಸರಿಯಾಗಿ ಜಾರಿಯಾಗಿಲ್ಲ. ಕೂಲಿ ಕಾರ್ಮಿಕರನ್ನು, ಎಸ್‌ಸಿ, ಎಸ್‌ಟಿ ಸಮುದಾಯದವರನ್ನು ಟಾರ್ಗೆಟ್ ಮಾಡಿ ಕ್ರಿಶ್ಚಿಯನ್ ಧರ್ಮಕ್ಕೆ ಮತಾಂತರ ಮಾಡುತ್ತಿದ್ದರೂ ಪೊಲೀಸರು ಮೌನ ವಹಿಸಿದ್ದಾರೆ ಅಂತ ಹಿಂದು ಮುಖಂಡರು ಕಿಡಿಕಾರಿದ್ದಾರೆ.

Live Tv

Leave a Reply

Your email address will not be published. Required fields are marked *

Back to top button