ಶಿವಮೊಗ್ಗ: ಗುತ್ತಿಗೆದಾರ ಸಂತೋಷ್ ಪಾಟೀಲ್ ಆತ್ಮಹತ್ಯೆ ಪ್ರಕರಣವನ್ನು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರು ಎಲ್ಲಾ ರೀತಿಯಿಂದಲೂ ತನಿಖೆ ನಡೆಸಲು ತಿಳಿಸಿದ್ದಾರೆ. ಕಮೀಷನ್ ಕೊಟ್ಟಿದ್ದು ಯಾರು, ತೆಗೆದುಕೊಂಡಿದ್ದು ಯಾರು ಎಂಬುದು ಸಾಬೀತು ಆಗಬೇಕು ಎಂದು ಗೃಹ ಸಚಿವ ಆರಗ ಜ್ಞಾನೇಂದ್ರ ತಿಳಿಸಿದರು.
ಶಿವಮೊಗ್ಗದಲ್ಲಿ ಮಾಧ್ಯಮದವರ ಜೊತೆ ಮಾತನಾಡಿದ ಸಚಿವ, ಸಂತೋಷ್ ಪಾಟೀಲ್ ಆತ್ಮಹತ್ಯೆ ಮಾಡಿಕೊಂಡ ಹೋಟೆಲ್‌ಗೆ ಪೊಲೀಸರು ಭೇಟಿ ನೀಡಿದ್ದಾರೆ. ಎಫ್‌ಎಸ್‌ಎಲ್ ತಂಡ ಹಾಗೂ ಸಂತೋಷ್ ಪಾಟೀಲ್ ಕುಟುಂಬಸ್ಥರು ಸ್ಥಳಕ್ಕೆ ಭೇಟಿ ನೀಡಿದ ಬಳಿಕ ಹೋಟೆಲ್‌ನ ಕೊಠಡಿ ತೆಗೆಯುವುದಾಗಿ ಪೊಲೀಸರು ತಿಳಿಸಿದ್ದಾರೆ ಎಂದರು. ಇದನ್ನೂ ಓದಿ: ಈಶ್ವರಪ್ಪ ರಾಜೀನಾಮೆಗೆ ಒತ್ತಾಯ- ಬಿಎಸ್‌ವೈಗೆ ಫೋನ್ ಕರೆ ಮಾಡಿ ಬೊಮ್ಮಾಯಿ ಮಾತುಕತೆ
ನಾನು ಕೂಡಾ ಘಟನೆ ಬಳಿಕ ಉಡುಪಿಯ ಎಸ್‌ಪಿ ಜೊತೆ ಮಾತನಾಡಿದ್ದೇನೆ. ಘಟನೆ ಕುರಿತು ಎಲ್ಲಾ ಆ್ಯಂಗಲ್‌ನಲ್ಲೂ ತನಿಖೆ ನಡೆಸುವಂತೆ ಸೂಚಿಸಿದ್ದೇನೆ. ಕಾಂಗ್ರೆಸ್‌ನವರು ಏನೋ ಹೇಳುತ್ತಾರೆ ಎಂದು ಯಾರನ್ನೂ ಅರೆಸ್ಟ್ ಮಾಡುವುದು ಅಸಾಧ್ಯ. ತನಿಖೆ ಬಳಿಕ ಪೊಲೀಸರು ತಮ್ಮ ಕಾರ್ಯ ಮಾಡುತ್ತಾರೆ. ಸಂತೋಷ್ ಡೆತ್ ನೋಟ್ ಬರೆದಿಟ್ಟಿರುವ ಬಗ್ಗೆ ನನಗೆ ತಿಳಿದಿಲ್ಲ. ಅವರು ಸೋಷಿಯಲ್ ಮೀಡಿಯಾದಲ್ಲಿ ಏನೋ ಮೆಸೇಜ್ ಹಾಕಿದ್ದರಂತೆ. ನನ್ನ ಜೊತೆ ಇಬ್ಬರು ಸ್ನೇಹಿತರನ್ನು ಕರೆದುಕೊಂಡು ಬಂದಿದ್ದೇನೆ, ಅವರಿಗೂ ನನ್ನ ಸಾವಿಗೂ ಸಂಬಂಧವಿಲ್ಲ ಎಂದು ಬರೆದಿರುವಬಗ್ಗೆ ಕೇಳಿದ್ದೇನೆ. ಆ ದೃಷ್ಟಿಯಿಂದಲೂ ತನಿಖೆ ನಡೆಯುತ್ತದೆ ಎಂದರು. ಇದನ್ನೂ ಓದಿ: ಸಾಲ ಸೋಲ ಹೆಚ್ಚಾಗಿ ಆತ್ಮಹತ್ಯೆ ಮಾಡಿಕೊಂಡಿರಬಹುದು: ಈಶ್ವರಪ್ಪ ಪರ ಯತ್ನಾಳ್ ಬ್ಯಾಟಿಂಗ್
ಈ ಘಟನೆಯಿಂದ ಸರ್ಕಾರಕ್ಕೆ ಕೆಟ್ಟ ಹೆಸರೋ ಅಥವಾ ಒಳ್ಳೆ ಹೆಸರು ಬರುತ್ತದೋ ಎಂಬುದು ತನಿಖೆಯಿಂದ ಗೊತ್ತಾಗುತ್ತದೆ. ಯಾರೋ ಆರೋಪ ಮಾಡಿದ ಕೂಡಲೆ ಸಾಬೀತು ಆಗುವುದಿಲ್ಲ. ಕಮಿಷನ್ ಯಾರು ಕೊಟ್ಟಿದ್ದು, ಯಾರು ತೆಗೆದುಕೊಂಡಿದ್ದು ಎಂಬುದು ಮೊದಲು ಸಾಬೀತು ಆಗಬೇಕು. ಇದೆಲ್ಲಾ ಸಾಬೀತು ಆದರೆ ಅವರ ಮೇಲೆ ಕ್ರಮ ಕೈಗೊಳ್ಳಬಹುದು ಎಂದರು.