– ಪ್ರಕರಣ ಸಿಬಿಐಗೆ ವಹಿಸಲು ಆಗ್ರಹ
ಬೆಂಗಳೂರು/ಕಲಬುರಗಿ: ಕಲಬುರಗಿಯಲ್ಲಿ ಆತ್ಮಹತ್ಯೆ ಮಾಡಿಕೊಂಡ ಗುತ್ತಿಗೆದಾರ ಸಚಿನ್ (Contractor Sachin) ನಿವಾಸಕ್ಕೆ ನಾಳೆ (ಭಾನುವಾರ) ಬಿಜೆಪಿ ನಿಯೋಗ ಭೇಟಿ ನೀಡಲಿದೆ. ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ (BY Vijayendra) ನೇತೃತ್ವದ ನಿಯೋಗ ಮೃತ ಸಚಿನ್ ನಿವಾಸಕ್ಕೆ ಭೇಟಿ ನೀಡಲಿದೆ.
ಪರಿಷತ್ ವಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ, ಬೀದರ್, ಕಲಬುರ್ಗಿ, ಭಾಗದ ಬಿಜೆಪಿ ಶಾಸಕರು, ಪ್ರಮುಖರು ಸಾಥ್ ನೀಡಲಿದ್ದಾರೆ. ಸಚಿನ್ ಕುಟುಂಬದವರಿಂದ ಬಿಜೆಪಿ ನಾಯಕರು ಕೆಲ ಮಾಹಿತಿ ಕಲೆಹಾಕಲಿದ್ದಾರೆ, ಇದೇ ವೇಳೆ ಸಚಿನ್ ಕುಟುಂಬಸ್ಥರಿಗೆ ಸಾಂತ್ವನ ಹೇಳಿ ಧೈರ್ಯ ತುಂಬಲಿದ್ದಾರೆ.
ಹೆಚ್ಚಿತು ವಿವಾದ ಕಿಚ್ಚು:
ಗುತ್ತಿಗೆದಾರ ಸಚಿನ್ ಆತ್ಮಹತ್ಯೆ ಪ್ರಕರಣದಲ್ಲಿ ವಿವಾದ ಜೋರಾಗುತ್ತಿದ್ದಂತೆ ಸಚಿವ ಪ್ರಿಯಾಂಕ್ ಖರ್ಗೆ ಆಪ್ತ ರಾಜು ಕಪನೂರ್ ವಿರುದ್ಧ ಕೊನೆಗೂ ಎಫ್‌ಐಆರ್ ದಾಖಲಾಗಿದೆ. ಬಿಜೆಪಿ ಹೋರಾಟಕ್ಕೆ ಮಣಿದು ರಾಜು ಕಪನೂರ್, ನಂದಕುಮಾರ್ ನಾಗಭುಜಂಗೆ ಸೇರಿ 6 ಜನರ ವಿರುದ್ಧ ಕಲಬುರಗಿಯ ಸ್ಟೇಷನ್ ಬಜಾರ್ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಿಸಲಾಗಿದೆ.
ಶಾಸಕ ಮತ್ತಿಮೂಡ್ ದೂರು ನೀಡಿದ್ರೂ ದೂರು ದಾಖಲಿಸದ ಹಿನ್ನೆಲೆ ಬೆಳಗ್ಗೆಯಷ್ಟೇ ಬೀದರ್ ಹಾಗೂ ಕಲಬುರಗಿಯಲ್ಲಿ ಪ್ರತಿಭಟನೆ ನಡೆದಿತ್ತು. ಪೊಲೀಸರ ನಡೆ ವಿರುದ್ಧ ಆಕ್ರೋಶ ವ್ಯಕ್ತವಾಗಿತ್ತು. ಈ ಬೆನ್ನಲ್ಲೆ ಪೊಲೀಸರು ಎಫ್‌ಐಆರ್ ದಾಖಲಿಸಿದ್ದಾರೆ. ಇತ್ತ ಬೀದರ್ ಜಿಲ್ಲಾ ಬಿಜೆಪಿ ನಿಯೋಗ ಮೃತ ಸಚಿನ್ ನಿವಾಸಕ್ಕೆ ಭೇಟಿ ನೀಡಿ ಕುಟುಂಬಸ್ಥರಿಗೆ ಸಾಂತ್ವನ ಹೇಳಿದ್ದಾರೆ.
ಬಿಜೆಪಿ ನಿಯೋಗದ ಮುಂದೆ ನಮಗೆ ನ್ಯಾಯ ಕೊಡಿಸುವಂತೆ ಕುಟುಂಬಸ್ಥರು ಕಣ್ಣೀರು ಹಾಕಿದ್ದಾರೆ. ಮತ್ತೊಂದೆಡೆ ಬೀದರ್ ರೈಲ್ವೆ ಪೊಲೀಸರು ಸಚಿನ್ ಮನೆಗೆ ಭೇಟಿ ನೀಡಿ ಮಹಜರು ನಡೆಸಿ ಕುಟುಂಬಸ್ಥರನ್ನು ವಿಚಾರಣೆ ನಡೆಸಿದ್ದಾರೆ. ಶಾಸಕ ಬಸವರಾಜ ಮತ್ತಿಮೂಡ್ ಮಾತನಾಡಿ, ಸಚಿನ್ ಸಾವಿಗೂ ಮುನ್ನ ಡೆತ್‌ನೋಟ್‌ನಲ್ಲಿ ಸುಪಾರಿ ಕೊಲೆ ಬಗ್ಗೆ ಬರೆದಿದ್ದಾರೆ. ರಾಜು ಕಪನೂರ್ ಸಚಿವ ಪ್ರಿಯಾಂಕ್ ಖರ್ಗೆ ಆಪ್ತನಾಗಿದ್ದಾನೆ. ಪ್ರಕರಣವನ್ನು ಸರ್ಕಾರ ಸಿಬಿಐಗೆ ಕೊಡಬೇಕು ಎಂದು ಆಗ್ರಹಿಸಿದ್ದಾರೆ.