ಬೆಂಗಳೂರು: ಸರ್ಕಾರದ ಭ್ರಷ್ಟಾಚಾರವು ಶೇ. 10 ಇದ್ದದ್ದು ಈಗ 30 ಪರ್ಸೆಂಟ್‌ಗೆ ಏರಿಕೆಯಾಗಿದೆ ಎಂದು ಕರ್ನಾಟಕ ರಾಜ್ಯ ಗುತ್ತಿಗೆದಾರರ ಸಂಘದ ಅಧ್ಯಕ್ಷ ಡಿ.ಕೆಂಪಣ್ಣ ಅವರು ಗಂಭೀರ ಆರೋಪ ಮಾಡಿದ್ದಾರೆ.
Advertisement
ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಳೆದ ವಿಧಾನಸಭಾ ಚುನಾವಣೆ ಸಂದರ್ಭದಲ್ಲಿ ಸರ್ಕಾರದ ವಿರುದ್ಧ ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು ಭ್ರಷ್ಟಾಚಾರದ ಆರೋಪ ಮಾಡಿದ್ದರು. ಇದು ಭ್ರಷ್ಟ ಸರ್ಕಾರ, 10 ಪರ್ಸೆಂಟ್ ಕಮಿಷನ್ ಪಡೆಯುತ್ತಿದೆ ಎಂದು ಆಗಿನ ಸರ್ಕಾರದ ಬಗ್ಗೆ ಮೋದಿ ಅವರು ವಾಗ್ದಾಳಿ ನಡೆಸಿದ್ದರು. ಆದರೆ ಈಗಿನ ಸರ್ಕಾರ 30 ಪರ್ಸೆಂಟ್ ಪಡೆಯುತ್ತಿದೆ. ಈ ಬಗ್ಗೆ ದಾಖಲೆಗಳೊಂದಿಗೆ ಪ್ರಧಾನಿಗೆ ಪತ್ರ ಬರೆದಿದ್ದೇನೆ. ಆದರೆ ಈವರೆಗೂ ಅವರಿಂದ ಯಾವುದೇ ಪ್ರತಿಕ್ರಿಯೆ ಬಂದಿಲ್ಲ ಎಂದು ಪ್ರತಿಕ್ರಿಯಿಸಿದ್ದಾರೆ.
Advertisement
ಬಿಜೆಪಿ ಬಗ್ಗೆ ನಮ್ಮಲ್ಲಿ ಒಳ್ಳೆಯ ಅಭಿಪ್ರಾಯವಿತ್ತು. ಸಂಘ ಪರಿವಾರದ ಹಿನ್ನೆಲೆ ಇರುವುದರಿಂದ ಭ್ರಷ್ಟಾಚಾರ ನಿಯಂತ್ರಣಕ್ಕೆ ಬರಬಹುದು ಎಂದು ನಿರೀಕ್ಷಿಸಿದ್ದೆವು. ಆ ನಿರೀಕ್ಷೆ ಹುಸಿಯಾಗಿದೆ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.
Advertisement
Advertisement
ಭ್ರಷ್ಟಾಚಾರವನ್ನು ಯಾರಿಂದಲೂ ನಿಯಂತ್ರಿಸಲು ಸಾಧ್ಯವಾಗುತ್ತಿಲ್ಲ. ಆಗ 10 ಪರ್ಸೆಂಟ್ ಇತ್ತು, ಈಗ ಅದು 30 ಪರ್ಸೆಂಟ್‌ಗೆ ಹೆಚ್ಚಿದೆ. ಈಗ ಒಬ್ಬ ಸಚಿವರು 12 ಪರ್ಸೆಂಟ್ ಕೇಳುತ್ತಾರೆ. ಇದೆಲ್ಲವನ್ನೂ ವಿವರಿಸಿ ಪ್ರಧಾನಿಗಳಿಗೆ ಪತ್ರ ಬರೆದಿದ್ದೇವೆ. ಭ್ರಷ್ಟಾಚಾರ ನಿಯಂತ್ರಣಕ್ಕೆ ಬರದಿದ್ದರೆ ನಾವು ಕಾನೂನು ಹೋರಾಟ ನಡೆಸುತ್ತೇವೆ ಎಂದು ಎಚ್ಚರಿಸಿದ್ದಾರೆ.
ಬಿಟ್‍ಕಾಯಿನ್ ಹಗರಣದ ಆರೋಪದ ಬೆನ್ನಲ್ಲೇ ರಾಜ್ಯದ ಬಿಜೆಪಿ ಸರ್ಕಾರದ ವಿರುದ್ಧ ಈಗ ಕಾಮಗಾರಿಗಳಲ್ಲಿ ಶೇ.40ರಷ್ಟು ಕಮಿಷನ್ ಕೇಳುತ್ತಿರುವ ಗಂಭೀರ ಆರೋಪ ಕೇಳಿಬಂದಿದೆ. ಆರೋಪ ಕೇಳಿ ಬಂದ ಬೆನ್ನಲ್ಲೇ ರಾಜ್ಯ ಸರ್ಕಾರವನ್ನು ವಜಾಗೊಳಿಸುವಂತೆ ಕಾಂಗ್ರೆಸ್ ಆರೋಪಿಸಿದೆ.
ಕರ್ನಾಟಕ ರಾಜ್ಯ ಗುತ್ತಿಗೆದಾರರ ಸಂಘದ ಅಧ್ಯಕ್ಷ ಡಿ. ಕೆಂಪಣ್ಣ ಕರ್ನಾಟಕ ರಾಜ್ಯ ಗುತ್ತಿಗೆದಾರರ ಸಂಘದ ಲೆಟರ್ ಹೆಡ್‌ನಲ್ಲಿ ಬಿಜೆಪಿ ಸರ್ಕಾರದಲ್ಲಿನ ಕಮಿಷನ್ ದಂಧೆ ಬಗ್ಗೆ ರಾಷ್ಟ್ರಪತಿ ರಾಮನಾಥ್ ಕೋವಿಂದ್ ಮತ್ತು ಪ್ರಧಾನಿ ನರೇಂದ್ರ ಮೋದಿಗೆ ಪತ್ರ ಬರೆದಿದ್ದಾರೆ.
ಲೋಕೋಪಯೋಗಿ ಇಲಾಖೆ, ಸಣ್ಣ ಮತ್ತು ಬೃಹತ್ ನೀರಾವರಿ ಕಾಮಗಾರಿ, ಪಂಚಾಯತ್‍ರಾಜ್, ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ, ಆರೋಗ್ಯ ಇಲಾಖೆಯಲ್ಲಿ ಗುತ್ತಿಗೆದಾರರು ಅನಾರೋಗ್ಯಕರ ಪರಿಸ್ಥಿತಿ ಎದುರಿಸುತ್ತಿದ್ದಾರೆ. ನಮ್ಮ ಚುನಾಯಿತ ಪ್ರತಿನಿಧಿಗಳೇ ನಮ್ಮ ರಾಜ್ಯದ ಗುತ್ತಿಗೆಯನ್ನು ಹೊರರಾಜ್ಯದವರಿಗೆ ಕೊಡಿಸುತ್ತಿದ್ದಾರೆ. ರಸ್ತೆ, ಕಟ್ಟಡ ಕಾಮಗಾರಿ ತೆಗೆದುಕೊಳ್ಳದ ಪರಿಸ್ಥಿತಿ ನಿರ್ಮಿಸಲಾಗಿದೆ ಎಂದು ದೂರಿದ್ದಾರೆ.