ಮಡಿಕೇರಿ: ಕೊಡಗು (Kodagu) ಜಿಲ್ಲೆಯಲ್ಲಿ ಕಳೆದ 2-3 ದಿನಗಳಿಂದ ಎಡೆಬಿಡದೆ ಮಳೆಯ (Rain) ಆರ್ಭಟ ಮುಂದುವರಿದಿದ್ದು ಪ್ರಮುಖ ನದಿಗಳು ಅಪಾಯ ಮಟ್ಟ ಮೀರಿ ಹರಿಯುತ್ತಿವೆ. ಗಾಳಿ ಸಹಿತ ಭಾರೀ ಮಳೆಯಾಗಿದೆ. ಜನಜೀವನ ಅಸ್ತವ್ಯಸ್ತವಾಗಿದೆ ಈ ಹಿನ್ನೆಲೆ ಸೋಮವಾರ ಜಿಲ್ಲೆಯ ಶಾಲೆಗಳಿಗೆ (School) ಕೊಡಗು ಜಿಲ್ಲಾಧಿಕಾರಿ ವೆಂಕಟ್ ರಾಜ್ ರಜೆ (Holiday) ಘೋಷಣೆ ಮಾಡಿದ್ದಾರೆ.
ಕೆಲ ಗಂಟೆಗಳ ಹಿಂದೆ ಅಂಗನವಾಡಿ, ಶಾಲೆ ಹಾಗೂ ಎಲ್ಲಾ ಕಾಲೇಜುಗಳಿಗೆ ಡಿಸಿ ರಜೆ ಘೋಷಿಸಿದ್ದರು. ಆದರೆ ಸೋಮವಾರ ಪದವಿ, ಸ್ನಾತಕೋತ್ತರ ಕಾಲೇಜುಗಳಲ್ಲಿ ಪರೀಕ್ಷೆ ಇರುವ ಹಿನ್ನೆಲೆ ಆದೇಶದಲ್ಲಿ ತಿದ್ದುಪಡಿ ಮಾಡಲಾಗಿದೆ. ಅಂಗನವಾಡಿ, ಶಾಲೆ ಹಾಗೂ ಪಿಯು ಕಾಲೇಜುಗಳಿಗೆ ಮಾತ್ರ ರಜೆ ಘೋಷಿಸಲಾಗಿದ್ದು, ಪದವಿ ಹಾಗೂ ಸ್ನಾತಕೋತ್ತರ ಕಾಲೇಜುಗಳಲ್ಲಿ ನಡೆಯಬೇಕಾಗಿರುವ ಪರೀಕ್ಷೆಗಳು ಮುಂದುವರಿಯಲಿದೆ ಎಂದು ಕೊಡಗು ಜಿಲ್ಲಾಧಿಕಾರಿ ವೆಂಕಟ್ ರಾಜ್ ಆದೇಶ ಹೊರಡಿಸಿದ್ದಾರೆ.
Advertisement
Advertisement
ಕೊಡಗು ಜಿಲ್ಲೆಯಲ್ಲಿ ಮಳೆ ತೀವ್ರತೆ ಕ್ಷಣಕ್ಷಣಕ್ಕೂ ಹೆಚ್ಚಾಗಿದ್ದು ಸೋಮವಾರ ಬೆಳಗ್ಗೆ 8:30 ರವರೆಗೆ ಜಿಲ್ಲೆಯಲ್ಲಿ ಅರೆಂಜ್ ಅಲರ್ಟ್ ಘೋಷಣೆ ಮಾಡಲಾಗಿದೆ. ಜಿಲ್ಲೆಯಲ್ಲಿ ಎಡೆಬಿಡದೆ ಸುರಿಯುತ್ತಿರುವ ಮಳೆಯಿಂದ ಭಾಗಮಂಡಲದ ತ್ರಿವೇಣಿ ಸಂಗಮದಲ್ಲಿ ನೀರಿನ ಮಟ್ಟ ಏರಿಕೆ ಯಾಗಿದ್ದು ನಾಪೋಕ್ಲು ಅಯ್ಯಗೇರಿ ರಸ್ತೆ ಸಂಪರ್ಕ ಕಡಿತಗೊಂಡಿದೆ. ಇತ್ತ ವಿರಾಜಪೇಟೆ ತಾಲೂಕಿನ ಭೇತ್ರಿ ಬಳಿ ಕಾವೇರಿ ನದಿಯ ನೀರು ಸೇತುವೆ ಮಟ್ಟಕ್ಕೆ ಬಂದಿದೆ.
Advertisement
ದಕ್ಷಿಣ ಕೊಡಗಿನ ಶ್ರೀಮಂಗಲ, ಬಲ್ಯಮಂಡೂರು, ಹರಿಹರ, ಕಾನೂರು, ನಿಟ್ಟೂರು, ಬಾಳೆಲೆ ಭಾಗದಲ್ಲಿ ಲಕ್ಷ್ಮಣತೀರ್ಥ ನದಿಯ ನೀರಿನ ಮಟ್ಟ ಏರಿಕೆಯಾಗಿದ್ದು ನೂರಾರು ಎಕರೆ ಗದ್ದೆಗಳು ಜಲಾವೃತವಾಗಿದೆ. ಅಲ್ಲದೆ ನಾಟಿ ಮಾಡಿದ ಗದ್ದೆಗಳು ಪ್ರವಾಹಕ್ಕೆ ಸಿಲುಕಿದ್ದು ಅಪಾರ ನಷ್ಟವಾಗಿದೆ. ನದಿ ಅಕ್ಕಪಕ್ಕದ ಕಾಫಿ ತೋಟಕ್ಕೂ ನೀರು ನುಗ್ಗಿದೆ. ಕೀರೆಹೊಳೆಯಲ್ಲೂ ನೀರಿನ ಮಟ್ಟ ಏರಿಕೆಯಾಗಿದ್ದು ಸೋಮವಾರ ಜಿಲ್ಲೆಯ ಶಾಲಾ ಕಾಲೇಜಿಗೆ ರಜೆ ಘೋಷಣೆ ಮಾಡಲಾಗಿದೆ. ಇದನ್ನೂ ಓದಿ: ತುಂಗಭದ್ರಾ ಜಲಾಶಯಕ್ಕೆ ಒಂದೇ ದಿನದಲ್ಲಿ 5 TMC ನೀರಿನ ಒಳಹರಿವು
Advertisement
ಇನ್ನೂ ಮಡಿಕೇರಿ ತಾಲೂಕಿನ ಭಾಗಮಂಡಲ, ತಲಕಾವೇರಿ ಹಾಗೂ ನಾಪೋಕ್ಲು ಭಾಗದಲ್ಲಿ ಧಾರಾಕಾರ ಮಳೆಯಾಗುತ್ತಿದೆ. ಗ್ರಾಮೀಣ ಪ್ರದೇಶದಲ್ಲಿ ಗಾಳಿಗೆ ಮರಗಳು, ವಿದ್ಯುತ್ ಕಂಬಗಳು ಧರೆಗುರುಳಿವೆ. ಹಲವು ಗ್ರಾಮಗಳಿಗೆ ವಿದ್ಯುತ್ ಸಂಪರ್ಕ ಕಡಿತವಾಗಿದೆ. ವಿದ್ಯುತ್ ಇಲಾಖೆಯ ಸಿಬ್ಬಂದಿ ರಾತ್ರಿ ಎನ್ನದೆ, ಮಳೆಯನ್ನೂ ಲೆಕ್ಕಿಸದೇ ಕರ್ತವ್ಯದಲ್ಲಿ ತೊಡಗಿದ್ದಾರೆ.
ಕಾವೇರಿ ನದಿ ನೀರಿನ ಮಟ್ಟ ಏರಿಕೆ ಆಗುತ್ತಿರುವ ಹಿನ್ನೆಲೆಯಲ್ಲಿ ಹಾರಂಗಿ ಜಲಾಶಯಕ್ಕೆ ಒಳಹರಿವು ಕ್ಷಣಕ್ಷಣಕ್ಕೂ ಹೆಚ್ಚಾಗುತ್ತಿದ್ದು ಇದೀಗ ಜಲಾಶಯದಿಂದ ಕಾವೇರಿ ನದಿಗೆ 25 ಸಾವಿರ ಕ್ಯೂಸೆಕ್ ನೀರು ಬಿಡುಗಡೆ ಮಾಡಲಾಗುತ್ತಿದೆ. ಮತ್ತೊಂದೆಡೆ ಕಾವೇರಿ ನದಿಯ ಅಪಾಯ ಮಟ್ಟ ಏರಿಕೆ ಆಗುತ್ತಾ ಇರುವುದರಿಂದ ಮಡಿಕೇರಿ ತಾಲೂಕಿನ ಮೂರ್ನಾಡು ಸಮೀಪದ ಬಲಮುರಿ ಗ್ರಾಮದಲ್ಲಿ ಕಾವೇರಿ ನದಿಯು ಕೃಷಿ ಚಟುವಟಿಕೆ ಮಾಡುವ ಗದ್ದೆಗಳ ಮೇಲೆ ನೀರು ಹರಿಯುತ್ತಿದ್ದು ಇದೀಗ ರೈತಾಪಿ ವರ್ಗದ ಜನರು ಕಂಗಾಲಾಗಿದ್ದಾರೆ. ಅಲ್ಲದೇ ಪ್ರತಿ ವರ್ಷ ಮಳೆ ಬಂದರೆ ಯಾವುದೇ ರಕ್ಷಣೆ ಇಲ್ಲದೇ ಮಳೆಗಾಲ ಕಳೆಯುವವರೆಗೂ ಕಾಳಜಿ ಕೇಂದ್ರಗಳೇ ತಮಗೆ ಗತಿ ಎಂದು ಇಲ್ಲಿನ ಸ್ಥಳೀಯರು ತಮ್ಮ ಅಳಲನ್ನು ವ್ಯಕ್ತಪಡಿಸುತ್ತಿದ್ದಾರೆ. ಇದನ್ನೂ ಓದಿ: ತುಂಬಿ ಹರಿಯುತ್ತಿದ್ದ ಸೇತುವೆಯಲ್ಲೇ ಪಿಕಪ್ ಚಾಲನೆ!
ಒಟ್ಟಿನಲ್ಲಿ ಜಿಲ್ಲೆಯಲ್ಲಿ ಕಳೆದ 3 ದಿನಗಳಿಂದ ಸುರಿಯುತ್ತಿರುವ ಮಹಾಮಳೆಗೆ ಅಕ್ಷರಶಃ ಕೊಡಗು ಜಿಲ್ಲೆ ತತ್ತರಿಸಿ ಹೋಗಿದ್ದು ಜನಜೀವನ ಸಂಪೂರ್ಣ ಅಸ್ತವ್ಯಸ್ತಗೊಂಡಿದೆ.
Web Stories