ಬೆಂಗಳೂರು: ಪಕ್ಷದ ಮುಖಂಡರ ಒತ್ತಾಯದ ಮೇರೆಗೆ ಬೆಂಗಳೂರು ಸಹಕಾರ ಹಾಲು ಒಕ್ಕೂಟದ (BAMUL) ಕನಕಪುರ ನಿರ್ದೇಶಕ ಸ್ಥಾನಕ್ಕೆ ಸ್ಪರ್ಧಿಸಿದ್ದೇನೆ ಎಂದು ಮಾಜಿ ಸಂಸದ ಡಿ.ಕೆ.ಸುರೇಶ್ (DK Suresh) ಹೇಳಿದ್ದಾರೆ.
ಬೆಂಗಳೂರಿನಲ್ಲಿ ಮಾತನಾಡಿದ ಅವರು ಬೆಂಗಳೂರು ಸಹಕಾರ ಹಾಲು ಒಕ್ಕೂಟದ ಚುನಾವಣೆಯಲ್ಲಿ ಎಲ್ಲಾ ಹಿರಿಯ ನಾಯಕರು, ಶಾಸಕರು ಹಾಗೂ ಹಾಲು ಉತ್ಪಾದಕರ ಸಲಹೆ ಹಾಗೂ ಪಕ್ಷದ ನಾಯಕರ ಸೂಚನೆ ಮೇರೆಗೆ ಇಂದು ಜಿಲ್ಲಾ ಮುಖಂಡರ ಸಮ್ಮುಖದಲ್ಲಿ ಕನಕಪುರ ಕ್ಷೇತ್ರದ ನಿರ್ದೇಶಕ ಸ್ಥಾನಕ್ಕೆ ಅರ್ಜಿ ಸಲ್ಲಿಸಿದ್ದೇನೆ. ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ ಹಾಗೂ ರಾಮನಗರ ಜಿಲ್ಲೆಯ ಮುಖಂಡರ ತೀರ್ಮಾನ ಹಾಗೂ ಸಹಕಾರದೊಂದಿಗೆ ನಾಮಪತ್ರ ಸಲ್ಲಿಸಲಾಗಿದೆ ಎಂದರು.
ವಿಶ್ರಾಂತಿ ಅವಧಿ ಮುಗಿಸಿದ ಮೇಲೆ ಕೆಎಂಎಫ್ ಅಧ್ಯಕ್ಷ (KMF President) ಸ್ಥಾನಕ್ಕೆ ಸುರೇಶ್ ಕಣ್ಣಿಟ್ಟಿದ್ದಾರೆ ಎಂದು ಕೇಳಿದಾಗ, ಸದ್ಯಕ್ಕೆ ಕೆಎಂಎಫ್ ವಿಚಾರ ಚರ್ಚೆಯಲ್ಲಿಲ್ಲ. ಕಳೆದ 10 ವರ್ಷಗಳಿಂದ ಬೆಂಗಳೂರು ಹಾಲು ಒಕ್ಕೂಟದ ಅಧ್ಯಕ್ಷರಾಗಿ, ನಿರ್ದೇಶಕರುಗಳಾಗಿ ನಮ್ಮ ಪಕ್ಷದ ಮುಖಂಡರು ಸೇವೆ ಸಲ್ಲಿಸಿದ್ದಾರೆ. ಹಾಗಾಗಿ ಇದರಲ್ಲಿ ವಿಶೇಷತೆ ಏನೂ ಇಲ್ಲ. ನಾನು ಅವರೆಲ್ಲರ ಜೊತೆ ಇರಬೇಕು ಎಂದು ಒತ್ತಾಯ ಮಾಡಿದ ಕಾರಣಕ್ಕೆ ಜೊತೆಯಾಗಿ ನಿಂತಿದ್ದೇನೆ ಎಂದು ಉತ್ತರಿಸಿದರು. ಇದನ್ನೂ ಓದಿ: ಆರ್‌ಸಿಬಿ, ಕೆಕೆಆರ್ ಪಂದ್ಯ 5 ಓವರ್‌ಗೆ ಸೀಮಿತವಾಗುತ್ತಾ?
ಮುಂದೆ ನೀವು ಕೆಎಂಎಫ್ ಅಧ್ಯಕ್ಷ ಸ್ಥಾನದ ಅಲಂಕರಿಸುವ ಲೆಕ್ಕಾಚಾರದೊಂದಿಗೆ ನಿಮ್ಮ ನಾಮಪತ್ರ ಕುತೂಹಲ ಮೂಡಿಸಿದೆ ಎಂದು ಕೇಳಿದಾಗ, ಮಾಧ್ಯಮಗಳು ಹಾಗೂ ಸಾರ್ವಜನಿಕ ವಲಯದಲ್ಲಿ ಸಾಕಷ್ಟು ಲೆಕ್ಕಾಚಾರಗಳು ಚರ್ಚೆಯಾಗುತ್ತಿವೆ. ಬೆಂಗಳೂರು ಹಾಲು ಒಕ್ಕೂಟಕ್ಕೆ ಸೇರುವ ಎಲ್ಲಾ ತಾಲೂಕುಗಳು ಹಾಲು ಉತ್ಪಾದನೆಯಲ್ಲಿ ಸಾಕಷ್ಟು ಸಾಧನೆ ಮಾಡಿದ್ದು, ಅನೇಕ ರೈತರು ಇದನ್ನೇ ನಂಬಿಕೊಂಡು ಜೀವನ ನಡೆಸುತ್ತಿದ್ದಾರೆ. ಹಾಲು ಹಾಗೂ ರೇಷ್ಮೆ ನಮ್ಮ ರೈತರ ಜೀವನಾಡಿ. ಇವೆರಡಕ್ಕೂ ನ್ಯಾಯ ಕೊಡಿಸುವುದು ಒಕ್ಕೂಟಕ್ಕೆ ಸೇರಿದ ಎಲ್ಲಾ ನಾಯಕರ ಅಭಿಪ್ರಾಯ. ಅವರ ತೀರ್ಮಾನದಂತೆ ಅರ್ಜಿ ಸಲ್ಲಿಸಿದ್ದೇನೆ. ಸ್ಪರ್ಧೆಯಿಂದ ಡಿ.ಕೆ ಸಹೋದರರು ಹಾಗೂ ದೇವೇಗೌಡರ ಕುಟುಂಬದ ನಡುವಣ ಹೋರಾಟ ಎಂದು ಬಿಬಿತವಾಗಿ ಚರ್ಚೆ ಮಾಡುವವರು ಯಾವ ರೀತಿ ಬೇಕಾದರೂ ಚರ್ಚೆ ಮಾಡುತ್ತಾರೆ. ನಮ್ಮ ಉದ್ದೇಶ ರೈತರ ಹಿತ ಕಾಪಾಡುವುದು. ಕ್ಷೀರ ಕ್ಷೇತ್ರದಲ್ಲಿ ಗಣನೀಯ ಬದಲಾವಣೆ ತರಬೇಕು ಎಂಬ ರೈತರ ಇಚ್ಛೆಗೆ ಕೆಲಸ ಮಾಡಬೇಕು. ಅದನ್ನು ಪಾಲಿಸಲು ನಾನು ಬದ್ಧನಾಗಿದ್ದೇನೆ ಎಂದರು. ಇದನ್ನೂ ಓದಿ: ಪಾಕ್ ವಿರುದ್ಧ ವಿದೇಶಗಳಿಗೆ ಸರ್ವಪಕ್ಷ ನಿಯೋಗ – ಯಾವ ದೇಶಕ್ಕೆ ಯಾರು ಹೋಗ್ತಾರೆ?
ಕೆಎಂಎಫ್ ಅಧ್ಯಕ್ಷ ಸ್ಥಾನದ ಮೇಲೆ ಸಿದ್ದರಾಮಯ್ಯ (Siddaramaiah) ಹಾಗೂ ಡಿ.ಕೆ. ಶಿವಕುಮಾರ್ (DK Shivakumar) ಅವರ ಬಣದ ನಡುವೆ ಸ್ಪರ್ಧೆ ಎಂಬುದಿಲ್ಲ. ಸಿದ್ದರಾಮಯ್ಯ ಹಾಗೂ ಡಿ.ಕೆ. ಶಿವಕುಮಾರ್ ಅವರು ಕಾಂಗ್ರೆಸ್ ಪಕ್ಷದವರು. ಸಿದ್ದರಾಮಯ್ಯ ಅವರು ಮುಖ್ಯಮಂತ್ರಿಗಳಾಗಿದ್ದಾರೆ, ಶಿವಕುಮಾರ್ ಅವರು ಪಕ್ಷದ ಅಧ್ಯಕ್ಷರಾಗಿದ್ದಾರೆ. ಇಲ್ಲಿ ಯಾರ ಪರ ವಿರೋಧವಿಲ್ಲ. ಒಕ್ಕೂಟದ ಅಧ್ಯಕ್ಷ ಸ್ಥಾನ, ಚುನಾವಣೆ ಹಾಗೂ ಮತದಾನದ ಆಧಾರದ ಮೇಲೆ ನಡೆಯುತ್ತದೆ. ಅದರ ಆಧಾರದ ಮೇಲೆ ಜೆಡಿಎಸ್, ಬಿಜೆಪಿ, ಕಾಂಗ್ರೆಸ್ ನಲ್ಲಿ ಯಾರ ಬೆಂಬಲಿಗರು ಮುಂದಿದ್ದಾರೆ ಎಂದು ತೀರ್ಮಾನ ಮಾಡಲಾಗುವುದು. ಸಹಕಾರಿ ಚುನಾವಣೆಯಲ್ಲಿ ಪಕ್ಷ, ವ್ಯಕ್ತಿ ಇಲ್ಲ. ಸಹಕಾರ ಕ್ಷೇತ್ರ ಸೇವಾಮನೋಭಾವ ಇಟ್ಟುಕೊಂಡು ಕೆಲಸ ಮಾಡುವ ಕ್ಷೇತ್ರ. ಇದರಲ್ಲಿ ರಾಜಕೀಯ ಒಳ್ಳೆಯದಲ್ಲ. ಹಾಲಿನ ವ್ಯವಸ್ಥೆಯಲ್ಲಿ ರಾಜಕೀಯ ಪ್ರವೇಶವಾದರೆ ರೈತರ ಬದುಕಿಗೆ ಪೆಟ್ಟು ನೀಡುತ್ತದೆ. ಹೀಗಾಗಿ ಇಲ್ಲಿ ರಾಜಕೀಯ ಬೆರೆಸದೆ ಸರ್ಕಾರದ ಜತೆ ಹೊಂದಾಣಿಕೆ ಮಾಡಿಕೊಂಡು ರೈತರ ಪರವಾಗಿ ಕೆಲಸ ಮಾಡಬೇಕಾಗುತ್ತದೆ ಎಂದರು.