Connect with us

Bengaluru City

ಸ್ಪೀಕರ್ ವಿರುದ್ಧ ನ್ಯಾಯಾಂಗ ನಿಂದನೆ ಆರೋಪ – ಅನರ್ಹ ಶಾಸಕರ ಅರ್ಜಿಯಲ್ಲಿ ಏನಿದೆ?

Published

on

ನವದೆಹಲಿ: ಸ್ಪೀಕರ್ ರಮೇಶ್ ಕುಮಾರ್ ನೀಡಿದ್ದ ಅನರ್ಹತೆ ಆದೇಶವನ್ನು ಪ್ರಶ್ನಿಸಿ 15 ಜನ ಅನರ್ಹಗೊಂಡ ಶಾಸಕರು ಸುಪ್ರೀಂ ಮೆಟ್ಟಿಲೇರಿದ್ದಾರೆ.

ಕಳೆದ ಸೋಮವಾರ ಅನರ್ಹ ಶಾಸಕರಾದ ರಮೇಶ್ ಜಾರಕಿಹೊಳಿ, ಮಹೇಶ್‍ ಕುಮಟಳ್ಳಿ ಅರ್ಜಿ ಸಲ್ಲಿಸಿದ್ದರು. ಇದೀಗ ಮತ್ತೆ 15 ಅನರ್ಹ ಶಾಸಕರು ಸುಪ್ರೀಂ ಕೋರ್ಟ್‌ಗೆ ಅರ್ಜಿ ಸಲ್ಲಿಸಿ ಸ್ಪೀಕರ್ ಆದೇಶವನ್ನು ರದ್ದುಗೊಳಿಸುವಂತೆ ಮನವಿ ಮಾಡಿದ್ದಾರೆ. ಶುಕ್ರವಾರ ಇಲ್ಲವೇ ಮಂಗಳವಾರ ಈ ಅರ್ಜಿ ವಿಚಾರಣೆಗೆ ಬರುವ ಸಾಧ್ಯತೆಯಿದೆ.

ಅರ್ಜಿಯಲ್ಲಿ ಏನಿದೆ?
ಶಾಸಕರನ್ನು ಅನರ್ಹ ಮಾಡಿರುವ ಸ್ಪೀಕರ್ ಆದೇಶ ಅಸಂವಿಧಾನಿಕವಾಗಿದ್ದು, ಸುಪ್ರೀಂ ಕೋರ್ಟ್ ಆದೇಶವನ್ನು ಉಲ್ಲಂಘಿಸಿದ್ದಾರೆ. ಮೊದಲು ರಾಜೀನಾಮೆ ಅಂಗಿಕಾರಕ್ಕೆ ಸುಪ್ರೀಂಕೋರ್ಟ್ ಸೂಚನೆ ನೀಡಿತ್ತು. ಇದನ್ನು ಮಾನ್ಯ ಮಾಡದೇ ಸ್ಪೀಕರ್ ಶಾಸಕರನ್ನು ಅನರ್ಹ ಮಾಡಿ ನ್ಯಾಯಾಂಗ ನಿಂದನೆ ಮಾಡಿದ್ದಾರೆ.

ವಿಶ್ವಾಸಮತ ಯಾಚನೆಗೆ ಹಾಜರಾಗುವ ಸಂಬಂಧ ಸುಪ್ರೀಂ ಕೋರ್ಟ್ ಶಾಸಕರಿಗೆ ವಿನಾಯಿತಿ ನೀಡಿತ್ತು. ಆದರೆ ವಿಶ್ವಾಸಮತದ ವೇಳೆ ವಿಪ್ ಉಲ್ಲಂಘನೆ ಮಾಡಿದ ಕಾರಣ ನೀಡಿ ಅನರ್ಹ ಮಾಡಲಾಗಿದೆ. ಕಾಂಗ್ರೆಸ್ ಶಾಸಕಾಂಗ ಪಕ್ಷದ ಸಭೆಗೆ ಗೈರಾಗಿರುವುದು ಪಕ್ಷಾಂತರ ನಿಷೇಧ ಕಾಯಿದೆಯ ಉಲ್ಲಂಘನೆ ಆಗುವುದಿಲ್ಲ. ಸ್ಪೀಕರ್ ಈ ಅಂಶಗಳನ್ನು ಪರಿಗಣಿಸದೆ, ಉದ್ದೇಶ ಪೂರ್ವಕವಾಗಿ ಅನರ್ಹಗೊಳಿಸಿದ್ದಾರೆ.

ಅನರ್ಹತೆ ನಿಯಮದಡಿ ನೋಟಿಸ್ ಕೊಟ್ಟ ಬಳಿಕ ಶಾಸಕರಿಗೆ ಪ್ರತಿಕ್ರಿಯೆ ನೀಡಲು ಏಳು ದಿನ ಅವಕಾಶ ನೀಡಬೇಕಿತ್ತು. ಆದರೆ ಕೇವಲ 3 ದಿನ ಸಮಯಾವಕಾಶ ಕೊಟ್ಟಿದ್ದಾರೆ. ಪಕ್ಷೇತರ ಶಾಸಕ ಆರ್.ಶಂಕರ್ ವಿಚಾರದಲ್ಲೂ ಸ್ಪೀಕರ್ ನೋಟಿಸ್‍ ನೀಡದೇ ಕ್ರಮ ಕೈಗೊಂಡಿದ್ದಾರೆ. ಕೆಪಿಜೆಪಿ ಕಾಂಗ್ರೆಸ್ ಜೊತೆಗೆ ಇನ್ನೂ ವಿಲೀನಗೊಂಡಿಲ್ಲ, ಪ್ರಕ್ರಿಯೆ ನಡೆಯುತ್ತಿದ್ದವು. ಈ ನಡುವೆಯೇ ಆರ್.ಶಂಕರ್ ಅವರನ್ನು ಅನರ್ಹಗೊಳಿಸಲಾಗಿದೆ. ಅನರ್ಹತೆ ವಿಚಾರವನ್ನು ನಮಗೆ ಮೊದಲೇ ತಿಳಿಸಬೇಕಿತ್ತು. ಆದರೆ, ಸ್ಪೀಕರ್ ನೇರವಾಗಿ ಸುದ್ದಿಗೋಷ್ಠಿ ಮೂಲಕ ಅನರ್ಹತೆ ಆದೇಶ ಹೊರಡಿಸಿದ್ದಾರೆ. ನಿಯಮದಂತೆ 24 ಗಂಟೆಯೊಳಗೆ ಅನರ್ಹತೆಯ ಆದೇಶವನ್ನು ಶಾಸಕರಿಗೆ ತಲುಪಿಸಬೇಕು. ಉದ್ದೇಶ ಪೂರ್ವಕವಾಗಿ ಶಾಸಕರಿಗೆ ಅನರ್ಹತೆ ಆದೇಶ ತಲುಪಿಸಿಲ್ಲ. ಸ್ಪೀಕರ್ ಈ ಪ್ರಕರಣದಲ್ಲಿ ಪಕ್ಷಪಾತ ಮಾಡುತ್ತಿದ್ದಾರೆ. ಹೀಗಾಗಿ ಸ್ಪೀಕರ್ ನೀಡಿರುವ ಅನರ್ಹತೆವನ್ನು ವಜಾ ಮಾಡಿ, ಸ್ಪೀಕರ್ ಮುಂದೆ ಮರು ವಿಚಾರಣೆಗೆ ಹಾಜರಾಗಲು ಸೂಚಿಸಲು ಅನುಮತಿ ನೀಡಿ.

Click to comment

Leave a Reply

Your email address will not be published. Required fields are marked *

www.publictv.in