Connect with us

ರಸ್ತೆ ಬದಿಯ ಡಿವೈಡರ್ ಹಾರಿ ಕಾರಿಗೆ ಡಿಕ್ಕಿ ಹೊಡೆದ ಕಂಟೈನರ್ ಲಾರಿ – ವೃದ್ಧ ದಂಪತಿ ಸ್ಥಳದಲ್ಲೇ ಸಾವು

ರಸ್ತೆ ಬದಿಯ ಡಿವೈಡರ್ ಹಾರಿ ಕಾರಿಗೆ ಡಿಕ್ಕಿ ಹೊಡೆದ ಕಂಟೈನರ್ ಲಾರಿ – ವೃದ್ಧ ದಂಪತಿ ಸ್ಥಳದಲ್ಲೇ ಸಾವು

ಬೆಂಗಳೂರು: ಕಂಟೈನರ್ ಲಾರಿಯೊಂದು ರಸ್ತೆ ಬದಿಯ ಡಿವೈಡರ್ ಹಾರಿ ಕಾರಿಗೆ ಡಿಕ್ಕಿ ಹೊಡೆದ ಪರಿಣಾಮ ವೃದ್ಧ ದಂಪತಿ ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ತುಮಕೂರು ಬೆಂಗಳೂರು ರಾಷ್ಟ್ರೀಯ ಹೆದ್ದಾರಿ ನೆಲಮಂಗಲ ಪಟ್ಟಣದ ವಿಶ್ವೇಶ್ವರಪುರ ಬಳಿ ನಡೆದಿದೆ.

ಕಾರಿನಲ್ಲಿದ್ದ ಐವರಲ್ಲಿ ಇಬ್ಬರು ಮೃತ ಪಟ್ಟಿದ್ದು, ಮೃತರು ಬೆಂಗಳೂರು ನಗರದ ಮಲ್ಲೇಶ್ವರಂ ನಿವಾಸಿಗಳು ಎಂದು ತಿಳಿದು ಬಂದಿದೆ. ಕಾರಿನಲ್ಲಿದ್ದ ಇನ್ನುಳಿದ ಮೂವರಿಗೆ ಸಣ್ಣಪುಟ್ಟ ಗಾಯಗಳಾಗಿದ್ದು, ಆಸ್ಪತ್ರೆಗೆ ದಾಖಲು ಮಾಡಲಾಗಿದೆ.

ಇಂದು ಬೆಳಗ್ಗೆ ಕುಟುಂಬ ಸಮೇತರಾಗಿ ಐವರು ತುಮಕೂರಿನ ಗೊರವನಹಳ್ಳಿ ಮಹಾಲಕ್ಷ್ಮಿ ದೇವಾಲಯಕ್ಕೆ ತೆರಳುತ್ತಿದ್ದರು. ಈ ಸಂದರ್ಭದಲ್ಲಿ ವೇಗವಾಗಿ ಬರುತ್ತಿದ ಕಂಟೈನರ್ ಲಾರಿ ರಸ್ತೆ ಬದಿಯ ಡಿವೈಡರ್ ಗೆ ಡಿಕ್ಕಿ ಹೊಡೆದು ನಂತರ, ಹಾರಿ ಬಲ ಬದಿಯಲ್ಲಿ ಎದುರಿಗೆ ಬರುತ್ತಿದ್ದ ಕಾರಿಗೆ ಡಿಕ್ಕಿ ಹೊಡೆದಿದೆ. ಪರಿಣಾಮ ಸ್ಥಳದಲ್ಲೇ ದಂಪತಿ ಮೃತಪಟ್ಟಿದ್ದಾರೆ. ಈ ಅಪಘಾತದಿಂದ ತುಮಕೂರು ಬೆಂಗಳೂರು ರಾಷ್ಟ್ರೀಯ ಹೆದ್ದಾರಿ 4ರಲ್ಲಿ ಕೆಲಕಾಲ ಟ್ರಾಫಿಕ್ ಜಾಮ್ ಉಂಟಾಗಿತ್ತು.

ಈ ಘಟನೆಯ ನಂತರ ಕಾರಿನ ಹಿಂದೆ ಬರುತ್ತಿದ್ದ ವೋಲ್ವೋ ಬಸ್ ಚಾಲಕ ಗಾಬರಿಗೊಂಡು ರಸ್ತೆ ಡಿವೈಡರ್ ಗೆ ಬಸ್ ಡಿಕ್ಕಿಹೊಡೆಸಿದ್ದಾನೆ. ಆದರೆ ಬಸ್‍ನಲ್ಲಿದ್ದ ಪ್ರಯಾಣಿಕರಿಗೆ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ. ಈ ಸರಣಿ ಅಪಘಾತ ಸಂಬಂಧ ನೆಲಮಂಗಲ ಸಂಚಾರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಅಪಘಾತದ ನಂತರ ಲಾರಿ ಚಾಲಕ ಸ್ಥಳದಿಂದ ಪರಾರಿಯಾಗಿದ್ದಾನೆ.

Advertisement
Advertisement